ಮಾಲೆ: ಭಾರತದ ಕುರಿತು ಸದಾ ಕಿಡಿಕಾರುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಇದೀಗ ತಣ್ಣಗಾಗಿದ್ದು, ಭಾರತವನ್ನು ಸ್ನೇಹಿತ ದೇಶ ಎಂದು ಕರೆದಿದ್ದಾರೆ.
ಅಲ್ಲದೆ, ಭಾರತದ ಬಳಿ ಮಾಲ್ಡೀವ್ಸ್ ಮಾಡಿರುವ ಸಾಲ ಮನ್ನಾ ಮಾಡುವಂತೆ ಕೋರುವುದಾಗಿ ತಿಳಿಸಿದ್ದಾರೆ. ಮಾಲ್ಡೀವ್ಸ್ ಭಾರತದ ಬಳಿ 34,500 ಕೋಟಿ ರು. (400 ಮಿಲಿಯನ್ ಡಾಲರ್) ಸಾಲ ಹೊಂದಿದೆ.
ಈ ಕುರಿತು ಸ್ಥಳೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಅವರು, ‘ಕಳೆದ ಸರ್ಕಾರಗಳು ಮಾಲ್ಡೀವ್ಸ್ ಆರ್ಥಿಕತೆಯ ಗಾತ್ರವನ್ನೂ ಮೀರಿ ಭಾರತದ ಬಳಿ ಸಾಲ ಪಡೆದಿವೆ.
ಅದನ್ನು ಬಳಸಿಕೊಂಡು ನಮ್ಮ ದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯಕ್ಕೆ ನಮ್ಮಲ್ಲಿ ಆರ್ಥಿಕ ಪರಿಸ್ಥಿತಿ ತುಸು ಹದಗೆಟ್ಟಿದ್ದು ಸಾಲವನ್ನು ಮರುಪಾವತಿಸುವ ಸ್ಥಿತಿಯಲ್ಲಿಲ್ಲ.
ಹೀಗಾಗಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವ ಬದಲು ಭಾರತದ ಬಳಿ ಸಾಲ ಮರುಪಾವತಿ ಮಾಡುವಲ್ಲಿ ತುಸು ವಿನಾಯಿತಿ ನೀಡುವಂತೆ ಕೋರಲು ಚಿಂತಿಸಲಾಗುತ್ತಿದೆ’ ಎಂದು ತಿಳಿಸಿದರು.
ಚುನಾವಣೆಗಾಗಿ ಬದಲಾವಣೆ?
ಭಾರತದ ಕುರಿತು ಸದಾ ಕಿಡಿಕಾರುತ್ತಿದ್ದ ಮೊಹಮ್ಮದ್ ಮುಯಿಜು ಈ ರೀತಿ ಭಾರತದ ಕುರಿತು ಒಲವು ತೋರಿಸಲು ಅಲ್ಲಿ ಏಪ್ರಿಲ್‌ನಲ್ಲಿ ನಡೆಯುವ ಪಾರ್ಲಿಮೆಂಟ್ ಚುನಾವಣೆಯೇ ಕಾರಣ ಎನ್ನಲಾಗಿದೆ. ಇತ್ತೀಚೆಗೆ ಮಾಲ್ಡೀವ್ಸ್‌ಗೆ ಚೀನಾ ಸರ್ಕಾರವು 11 ಸಾವಿರ ಕೋಟಿ ರು. ಸಹಾಯಧನ ನೀಡಿದೆ.