ನವದೆಹಲಿ: ಭಾರತದ ಉತ್ಪನ್ನಗಳಿಗೆ ಮೊದಲು ಶೇ.25ರಷ್ಟು ತೆರಿಗೆ ಹಾಕಿ ಬಳಿಕ ಮತ್ತೆ ಶೇ.25ರಷ್ಟು ದಂಡದ ಮೂಲಕ ಡಬಲ್ ಶಾಕ್ ನೀಡಿದ್ದ ಅಮೆರಿಕಕ್ಕೆ ಇದೀಗ ಭಾರತವೂ ಡಬಲ್ ತಿರುಗೇಟು ನೀಡಲು ಮುಂದಾಗಿದೆ. ಒಂದೆಡೆ ಅಮೆರಿಕದ ಎಚ್ಚರಿಕೆ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿ ಹೆಚ್ಚಳಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಅಮೆರಿಕದ ಬದಲಾಗಿ ಇತರೆ 40ಕ್ಕೂ ಹೆಚ್ಚು ದೇಶಗಳನ್ನು ತನ್ನ ರಫ್ತಿನ ವ್ಯಾಪ್ತಿಗೆ ಸೇರಿಸಿಕೊಳ್ಳಲು ಸರ್ಕಾರ ದೃಢ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
ಅಮೆರಿಕದ ಶೇ.50ರಷ್ಟು ಭಾರೀ ತೆರಿಗೆಯಿಂದ ದೊಡ್ಡ ಮಟ್ಟದ ಸಂಕಷ್ಟ ಎದುರಿಸಲಿರುವ ದೇಶದ ಜವಳಿ ಉದ್ಯಮಕ್ಕೆ ಹೊಸ ಮಾರುಕಟ್ಟೆ ಕಲ್ಪಿಸಲು ಭಾರತ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ಪೋಲೆಂಡ್, ರಷ್ಯಾ, ದಕ್ಷಿಣ ಕೊರಿಯಾ, ಟರ್ಕಿ, ಯುಎಇ, ಬ್ರಿಟನ್ ಸೇರಿ 40 ರಾಷ್ಟ್ರಗಳಲ್ಲಿ ಭಾರತದ ಜವಳಿ ಉತ್ಪನ್ನಗಳ ಮಾರಾಟಕ್ಕೆ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದ ಒಟ್ಟು ಜವಳಿ ರಫ್ತಿನಲ್ಲಿ ಶೇ.29ರಷ್ಟನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದರೆ, ಈ 40 ರಾಷ್ಟ್ರಗಳು ಶೇ.5-6ರಷ್ಟು ತರಿಸಿಕೊಳ್ಳುತ್ತಿವೆ. ಈಗ ಇದನ್ನು ಇನ್ನಷ್ಟು ಹೆಚ್ಚಿಸುವ ಗುರಿಯಿದೆ.
ಯುರೋಪ್ ಬಳಿ ಕೋರಿಕೆ:
ಇದರ ಜೊತೆಗೆ ಅಮೆರಿಕಕ್ಕೆ ನೀಡಿರುವ ರಿಯಾಯ್ತಿ ರೀತಿಯಲ್ಲೇ ನಮಗೂ ವ್ಯಾಪಾರ ರಿಯಾಯ್ತಿ ನೀಡಿ ಎಂದು ಯುರೋಪ್ ದೇಶಗಳಿಗೆ ಮನವಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ತೈಲ ಖರೀದಿ ಹೆಚ್ಚಳ:
ಈ ನಡುವೆ ಅಮೆರಿಕದ ಎಚ್ಚರಿಕೆ ಹೊರತಾಗಿಯೂ ರಷ್ಯಾ ತೈಲ ಖರೀದಿ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ರಷ್ಯಾದಿಂದ ದಿನಕ್ಕೆ 1.50 ಲಕ್ಷ ಬ್ಯಾರೆಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ಸೆಪ್ಟೆಂಬರ್ ವೇಳೆಗೆ ಶೇ.10-20ರಷ್ಟು ಏರಿಸುವ ಮೂಲಕ ನಿತ್ಯ 1.60 - 3 ಲಕ್ಷ ಬ್ಯಾರೆಲ್‌ಗೆ ಹೆಚ್ಚಿಸಲಾಗುವುದು ಎನ್ನಲಾಗಿದೆ. ರಿಲಯನ್ಸ್ ಮತ್ತು ನಯಾರಾ ಸಂಸ್ಥೆಗಳು ರಷ್ಯಾ ತೈಲ ಕಂಪನಿಗಳು ರಿಯಾಯ್ತಿ ದರದಲ್ಲಿ ನೀಡುತ್ತಿರುವ ಕಚ್ಚಾತೈಲವನ್ನು ಹೆಚ್ಚಿನ ಪ್ರಮಾಣದ ತೈಲ ಖರೀದಿಗೆ ಮುಂದಾಗಿವೆ. ಆಗಸ್ಟ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ 1.50 ಡಾಲರ್‌ನಷ್ಟು ರಿಯಾಯ್ತಿ ಕೊಡುತ್ತಿತ್ತು. ಇದು ಸೆಪ್ಟೆಂಬರ್ ಬುಕಿಂಗ್‌ಗೆ ಇನ್ನು ಹೆಚ್ಚಳವಾಗಿದೆ. ರಷ್ಯಾದ ಕಂಪನಿ ಉರಾಲ್ಸ್ 2-3 ಡಾಲರ್‌ನಷ್ಟು ರಿಯಾಯ್ತಿ ನೀಡಿದೆ.
ಭಾರತದ 2 ದಾರಿ
1. ದುಬಾರಿ ತೆರಿಗೆ ಹೇರಿರುವ ಅಮೆರಿಕ ಮಾರುಕಟ್ಟೆ ಬದಲಾಗಿ 40 ಪರ್ಯಾಯ ದೇಶಗಳಲ್ಲಿ ಜವಳಿ ಉತ್ಪನ್ನಗಳ ಮಾರಾಟಕ್ಕೆ ಯತ್ನ
2. ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದರೂ ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲ ಪ್ರಮಾಣ ಹೆಚ್ಚಳ ಮಾಡಲು ತೀರ್ಮಾನ
2 ದಿನದಲ್ಲಿ ಸೆನ್ಸೆಕ್ಸ್ 1555 ಅಂಕ ಇಳಿಕೆ: 10 ಲಕ್ಷ ಕೋಟಿ ನಷ್ಟ9