ಜನಸಂಖ್ಯೆ: ಭಾರತದ ನಂ.1 ಪಟ್ಟ ಕಾಯಂ

KannadaprabhaNewsNetwork | Updated : Jul 13 2024, 04:44 AM IST

ಸಾರಾಂಶ

ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿ ಕಳೆದ ವರ್ಷವಷ್ಟೇ ಮೊದಲ ಸ್ಥಾನಕ್ಕೇರಿರುವ ಭಾರತವನ್ನು ಈ ಶತಮಾನವಿಡೀ ನಂ.1 ಸ್ಥಾನದಿಂದ ಯಾವ ದೇಶವೂ ಕೆಳಗಿಳಿಸಲು ಆಗದು ಎಂದು ವಿಶ್ವಸಂಸ್ಥೆ ‘ಭವಿಷ್ಯ’ ನುಡಿದಿದೆ.

 ವಿಶ್ವಸಂಸ್ಥೆ : ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಚೀನಾವನ್ನು ಹಿಂದಿಕ್ಕಿ ಕಳೆದ ವರ್ಷವಷ್ಟೇ ಮೊದಲ ಸ್ಥಾನಕ್ಕೇರಿರುವ ಭಾರತವನ್ನು ಈ ಶತಮಾನವಿಡೀ ನಂ.1 ಸ್ಥಾನದಿಂದ ಯಾವ ದೇಶವೂ ಕೆಳಗಿಳಿಸಲು ಆಗದು ಎಂದು ವಿಶ್ವಸಂಸ್ಥೆ ‘ಭವಿಷ್ಯ’ ನುಡಿದಿದೆ.

ಇದೇ ವೇಳೆ, 2060ರ ವೇಳೆಗೆ ಭಾರತದ ಜನಸಂಖ್ಯೆ 170 ಕೋಟಿಗೇರಿಕೆಯಾಗಲಿದೆ. ಬಳಿಕ ಶೇ.12ರಷ್ಟು ಇಳಿಕೆ ಕಾಣಲಿದೆ. ಆದರೂ 2100ನೇ ಇಸ್ವಿವರೆಗೂ ಜನಸಂಖ್ಯೆಯಲ್ಲಿ ಭಾರತವೇ ಮೊದಲ ಸ್ಥಾನದಲ್ಲಿರುತ್ತದೆ ಎಂದು ವಿಶ್ವ ಜನಸಂಖ್ಯಾ ಮುನ್ನೋಟ-2024ರಲ್ಲಿ ವಿಶ್ವಸಂಸ್ಥೆ ತಿಳಿಸಿದೆ.

ಇದೇ ವೇಳೆ, ಸದ್ಯ 820 ಕೋಟಿ ಇರುವ ವಿಶ್ವದ ಜನಸಂಖ್ಯೆ ಮುಂದಿನ 50ರಿಂದ 60 ವರ್ಷಗಳಲ್ಲಿ ಅಂದರೆ 2080ರ ಮಧ್ಯಭಾಗದಲ್ಲಿ 1030 ಕೋಟಿಗೆ ಏರಿಕೆ ಕಾಣಲಿದೆ. ಅದಾದ ನಂತರ ಕುಸಿತ ಕಂಡು 1020 ಕೋಟಿಗೆ ಇಳಿಯಲಿದೆ ಎಂದೂ ಹೇಳಿದೆ.

ಭಾರತದ ಜನಸಂಖ್ಯೆ ಏರಿಕೆ-ಇಳಿಕೆ:

ಭಾರತದ ಜನಸಂಖ್ಯೆ ಸದ್ಯ 145 ಕೋಟಿ ಇದೆ. 2054ಕ್ಕೆ ಇದು 169 ಕೋಟಿಗೆ ಹೆಚ್ಚಳವಾಗಲಿದೆ. 2100ನೇ ಇಸ್ವಿ ಹೊತ್ತಿಗೆ 150 ಕೋಟಿಗೆ ಕುಸಿತ ಕಾಣಲಿದೆ. ಆದರೂ ಭೂಮಿಯ ಮೇಲೆ ಅತಿ ಹೆಚ್ಚು ಜನರು ನೆಲೆಸಿರುವ ದೇಶ ಎಂಬ ಪಟ್ಟವನ್ನು ಭಾರತ ಉಳಿಸಿಕೊಳ್ಳಲಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯೆ ವಿಭಾಗದ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ಪ್ರಕಟಿಸಿರುವ ವರದಿ ತಿಳಿಸಿದೆ.

ಚೀನಾ ಜನಸಂಖ್ಯೆ ಭಾರಿ ಕುಸಿತ:

ಗಮನಾರ್ಹ ಎಂದರೆ, ಸದ್ಯ 141 ಕೋಟಿಯಷ್ಟಿರುವ ಚೀನಾದ ಜನಸಂಖ್ಯೆ 2054ರ ವೇಳೆಗೆ 121 ಕೋಟಿಗೆ ಕುಸಿಯಲಿದೆ. 2100ನೇ ಇಸ್ವಿ ವೇಳೆಗೆ 63.3 ಕೋಟಿಗೆ ಜಾರಲಿದೆ. ವಿಶ್ವದ ಜನಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿರುವ ಚೀನಾದಲ್ಲಿ 2024ರಿಂದ 2054ರ ನಡುವಣ ಅವಧಿಯಲ್ಲಿ 20.4 ಕೋಟಿಯಷ್ಟು ಜನಸಂಖ್ಯೆ ಕುಸಿತ ಕಾಣಲಿದೆ. ಚೀನಾ ಹಾಲಿ ಎಷ್ಟು ಜನಸಂಖ್ಯೆ ಹೊಂದಿದೆಯೋ ಅದರ ಅರ್ಧದಷ್ಟು ಪ್ರಮಾಣಕ್ಕೆ 2100ನೇ ಇಸ್ವಿಗೆ ಕುಸಿಯಲಿದೆ ಎಂದು ಎಚ್ಚರಿಸಿದೆ.

ನಂ.3ಕ್ಕೆ ಬರಲಿದೆ ಪಾಕ್‌:

ಮತ್ತೊಂದೆಡೆ, 34.5 ಕೋಟಿ ಜನಸಂಖ್ಯೆ ಮೂಲಕ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿರುವ ಅಮೆರಿಕವನ್ನು 2054ಕ್ಕೆ ಪಾಕಿಸ್ತಾನ ಹಿಂದಿಕ್ಕಿಲಿದೆ. ಪಾಕಿಸ್ತಾನ 38.9 ಕೋಟಿ ಜನಸಂಖ್ಯೆಯೊಂದಿಗೆ ಮೂರನೇ ಸ್ಥಾನಕ್ಕೆ ಬರಲಿದೆ. 2100ನೇ ಇಸ್ವಿಗೆ ಪಾಕಿಸ್ತಾನದ ಜನಸಂಖ್ಯೆ 51.1 ಕೋಟಿಗೆ ಹೆಚ್ಚಳವಾಗಲಿದೆ ಎಂದಿದೆ.

Share this article