ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಮುಂದಾಗಿರುವ ಭಾರತವು ನೆರೆಯ ದೇಶದ ಮೇಲೆ 3 ಹೊಸ ನಿರ್ಬಂಧಗಳನ್ನು ಹೇರಿದೆ.
ನವದೆಹಲಿ : ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಮುಂದಾಗಿರುವ ಭಾರತವು ನೆರೆಯ ದೇಶದ ಮೇಲೆ 3 ಹೊಸ ನಿರ್ಬಂಧಗಳನ್ನು ಹೇರಿದೆ. ಪಾಕಿಸ್ತಾನದಿಂದ ಯಾವುದೇ ವಸ್ತುಗಳ ನೇರ ಮತ್ತು ಪರೋಕ್ಷ ಆಮದಿಗೆ ಬ್ರೇಕ್, ವೈಮಾನಿಕ ಹಾಗೂ ರಸ್ತೆ ಮಾರ್ಗದ ಎಲ್ಲಾ ರೀತಿಯ ಅಂಚೆ, ಕೊರಿಯರ್, ಪಾರ್ಸೆಲ್ ಸೇವೆ ರದ್ದು ಹಾಗೂ ಪಾಕ್ ಹಡಗುಗಳು ಭಾರತದ ಬಂದರುಗಳಿಗೆ ಬಂದು ಲಂಗರು ಹಾಕುವುದಕ್ಕೆ ಪೂರ್ಣವಿರಾಮ- ಇವೇ ಆ 3 ನಿರ್ಬಂಧಗಳು.
26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜತೆಗೆ ಭಾರತ ಒಂದೊಂದೇ ನಿರ್ಬಂಧ ಕ್ರಮಗಳನ್ನು ದಿನಗಳೆದಂತೆ ಕೈಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ನೆಲೆಸಿರುವ ಪಾಕಿಸ್ತಾನೀಯರನ್ನು ವಾಪಸ್ ಕಳುಹಿಸಿರುವ ಸರ್ಕಾರ, ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನೂ ತಡೆಹಿಡಿದಿದೆ. ಅಲ್ಲದೆ, ಅನೇಕ ರಾಜತಾಂತ್ರಿಕ ನಿರ್ಬಂಧ ಹೇರಿದೆ. ಇದರ ಬೆನ್ನಲ್ಲೇ 3 ಹೊಸ ನಿರ್ಬಂಧ ಜಾರಿ ಮಾಡಲಾಗಿದೆ.
ಆಮದು ನಿರ್ಬಂಧ:
ಪಾಕಿಸ್ತಾನದ ವಸ್ತುಗಳ ಆಮದನ್ನು ಸಂಪೂರ್ಣ ನಿರ್ಬಂಧಿಸಿರುವ ಭಾರತ ಸರ್ಕಾರ, ‘ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಹಿತದೃಷ್ಟಿಯಿಂದ ಈ ನಿರ್ಬಂಧ ವಿಧಿಸಲಾಗಿದೆ. ಪಾಕ್ ವಸ್ತುಗಳು ಇನ್ನು ಭಾರತಕ್ಕೆ ನೇರವಾಗಿ ಅಥವಾ ಇನ್ನಾವುದೇ ದೇಶದ ಮೂಲಕ ಆಮದಾಗುವುದಿಲ್ಲ. ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ. ಈ ನಿಷೇಧಕ್ಕೆ ಯಾವುದೇ ವಿನಾಯಿತಿ ನೀಡಬೇಕಾದರೆ ಭಾರತ ಸರ್ಕಾರದ ಅನುಮೋದನೆ ಅಗತ್ಯ’ ಎಂದಿದೆ. ಇದರಿಂದಾಗಿ ಭಾರತಕ್ಕೆ ಪಾಕಿಸ್ತಾನಿ ವಸ್ತುಗಳ ಆಮದು ಶೂನ್ಯಕ್ಕಿಳಿಯಲಿದೆ.ಯಾವುದರ ಸಾಗಣೆ ಸ್ಥಗಿತ?:
ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳು ಮುಖ್ಯವಾಗಿ ಔಷಧ ಉತ್ಪನ್ನಗಳು, ಹಣ್ಣುಗಳು ಮತ್ತು ಎಣ್ಣೆಬೀಜಗಳನ್ನು ಒಳಗೊಂಡಿದ್ದವು. ಈಗಿನ ನಿರ್ಧಾರವು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಎಲ್ಲಾ ಸರಕುಗಳ ಸಾಗಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ.
ಆದರೆ, 2019ರ ಪುಲ್ವಾಮಾ ದಾಳಿಯ ನಂತರದ ವರ್ಷಗಳಲ್ಲಿ ಆಮದು ಪ್ರಮಾಣ ಕಡಿಮೆಯಾಗಿತ್ತು. ಏಕೆಂದರೆ ಭಾರತವು ಪಾಕಿಸ್ತಾನಿ ಉತ್ಪನ್ನಗಳ ಮೇಲೆ ಶೇ.200ರಷ್ಟು ಭಾರಿ ಸುಂಕವನ್ನು ವಿಧಿಸಿತ್ತು. ವರದಿಗಳ ಪ್ರಕಾರ ಇದು 2024-25 ರಲ್ಲಿ ಒಟ್ಟು ಆಮದಿನ ಶೇ.0.0001ಕ್ಕಿಂತ ಕಡಿಮೆಯಿತ್ತು. ಏಪ್ರಿಲ್-ಜನವರಿ 2024-25 ರಲ್ಲಿ ಪಾಕಿಸ್ತಾನಕ್ಕೆ ಭಾರತದ ರಫ್ತು 447.65 ದಶಲಕ್ಷ ಡಾಲರ್ (3786 ಕೋಟಿ ರು.) ಆಗಿದ್ದರೆ, ಆಮದು ಕೇವಲ 0.42 ದಶಲಕ್ಷ ಡಾಲರ್ (3.5 ಕೋಟಿ ರು.) ಮಾತ್ರ.ಪತ್ರ ಸೇವೆಯೂ ಬಂದ್:
ಇದೇ ವೇಳೆ, ಪಾಕಿಸ್ತಾನದೊಂದಿಗಿನ ಎಲ್ಲಾ ವರ್ಗದ ಮೇಲ್ (ಪತ್ರ) ಮತ್ತು ಪಾರ್ಸೆಲ್ ವಿನಿಮಯವನ್ನು ಭಾರತ ಸ್ಥಗಿತಗೊಳಿಸಿದೆ. ಸಂವಹನ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ಈ ಆದೇಶ ಹೊರಡಿಸಿದೆ.
ಪಾಕ್ ಹಡಗಿಗೆ ನಿರ್ಬಂಧ:
ಇದೇ ವೇಳೆ ಭಾರತ ಸರ್ಕಾರವು, ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ತನ್ನ ಬಂದರುಗಳಲ್ಲಿ ನಿಲ್ಲುವುದನ್ನು ಮತ್ತು ಭಾರತೀಯ ಧ್ವಜ ಹೊಂದಿರುವ ಹಡಗುಗಳು ಪಾಕಿಸ್ತಾನಕ್ಕೆ ಭೇಟಿ ನೀಡುವುದನ್ನು ನಿಷೇಧಿಸಿದೆ. ಬಂದರುಗಳು, ಹಡಗು ಮತ್ತು ಜಲಮಾರ್ಗ ಸಚಿವಾಲಯ ಘೋಷಿಸಿದ ಈ ನಿರ್ಧಾರವು ತಕ್ಷಣದಿಂದ ಜಾರಿಗೆ ಬಂದಿದೆ. ‘ಮುಂದಿನ ಸೂಚನೆ ಬರುವವರೆಗೆ ಮುಂದುವರಿಯುತ್ತದೆ’ ಎಂದು ಅದು ತನ್ನ ಆದೇಶದಲ್ಲಿ ತಿಳಿಸಿದೆ.