ಅಮೆರಿಕದಲ್ಲಿ ಭಾರತೀಯ ಕುಟುಂಬದ ನಾಲ್ವರ ಶವ ಪತ್ತೆ: ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ!

Published : Oct 07, 2023, 11:28 AM IST
American Life

ಸಾರಾಂಶ

ಭಾರತೀಯ ಮೂಲದ ನಾಲ್ವರ ಕುಟುಂಬ ಅಮೆರಿಕದ ನ್ಯೂಜೆರ್ಸಿಯಲ್ಲಿ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಬಗ್ಗೆ ಅವರ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್‌ (ಅಕ್ಟೋಬರ್ 6, 2023): ಅಮೆರಿಕದ ನ್ಯೂಜೆರ್ಸಿಯಲ್ಲಿ ಭಾರತೀಯ ಮೂಲದ ನಾಲ್ವರ ಕುಟುಂಬ ಶವವಾಗಿ ಪತ್ತೆಯಾಗಿದ್ದು, ಈ ಸಾವಿನ ಪ್ರಕರಣಗಳು ನಿಗೂಢವಾಗಿದೆ. ಇನ್ನು, ಈ ಪ್ರಕರಣಗಳು ಕೊಲೆ - ಆತ್ಮಹತ್ಯೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅವರ ಕುಟುಂಬದ ಯೋಗಕ್ಷೇಮದ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ಅವರ ಮನೆಗೆ ಹೋಗಿ ನೋಡಿದ ಬಳಿಕ ಭಾರತೀಯ ಮೂಲದ ಕುಟುಂಬ ಶವವಾಗಿ ಪತ್ತೆಯಾಗಿರುವುದು ತಿಳಿದುಬಂದಿದೆ. ಪ್ಲೇನ್ಸ್‌ಬೊರೊದ ಪೊಲೀಸರು ಅಕ್ಟೋಬರ್ 4 ರಂದು ಸಂಜೆ ಅವರ ಮನೆಗೆ ಹೋದಾಗ ಅವರು ಸತ್ತಿರುವುದು ಕಂಡುಬಂದಿದೆ ಎಂದು ಕೌಂಟಿ ಪ್ರಾಸಿಕ್ಯೂಟರ್ ಯೊಲಾಂಡಾ ಸಿಕ್ಕೋನ್ ಹೇಳಿದ್ದಾರೆ.

ಇದನ್ನು ಓದಿ: ಏರ್‌ಪೋರ್ಟ್‌ನಲ್ಲಿ ವೇಗವಾಗಿ ಬಿಎಂಡಬ್ಲ್ಯೂ ಕಾರು ಚಾಲನೆ: ಸಿಐಎಸ್‌ಎಫ್ ಜವಾನನ ಹತ್ಯೆಗೈದ ಹದಿಹರೆಯದ ಯುವಕ

ಮೃತರನ್ನು 43 ವರ್ಷದ ತೇಜ್‌ ಪ್ರತಾಪ್‌ ಸಿಂಗ್, 42 ವರ್ಷದ ಸೋನಾಲ್ ಪರಿಹಾರ್ ಹಾಗೂ ದಂಪತಿಯ 10 ವರ್ಷದ ಮಗ ಮತ್ತು ಆರು ವರ್ಷದ ಮಗಳು ಸೇರಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಗುರುತಿಸಿದ್ದಾರೆ. ಕುಟುಂಬವು ಹೇಗೆ ಮೃತಪಟ್ಟಿದೆ ಎಂದು ಸಿಕ್ಕೋನ್‌ ಹೇಳದಿದ್ದರೂ, ಶೂಟಿಂಗ್ ನಡೆದಿರೋದನ್ನು ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯ ವಕ್ತಾರರು ತಳ್ಳಿಹಾಕಿದ್ದಾರೆ.

"ಈ ದುರಂತವು ತನಿಖೆಯ ಹಂತದಲ್ಲಿದೆ ಮತ್ತು ಶವಪರೀಕ್ಷೆಗಳನ್ನು ನಡೆಸಲಾಗುತ್ತಿದೆ" ಎಂದು ಅವರು ಅಕ್ಟೋಬರ್ 5 ರಂದು ಹೇಳಿದ್ದಾರೆ. ಇನ್ನು, ಭಾರತೀಯ ಮೂಲದ ಕುಟುಂಬದ ನಿಗೂಢ ಸಾವಿನ ಬಗ್ಗೆ ಮಾತನಾಡಿದ ಪ್ಲೇನ್ಸ್‌ಬೊರೊ ಮೇಯರ್ ಪೀಟರ್ ಕ್ಯಾಂಟು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಸಂಬಂಧ ಪೋಸ್ಟ್‌ ಮಾಡಿದ್ದಾರೆ. "ನಮ್ಮ ಸಮುದಾಯದಲ್ಲಿ ಏನಾಯಿತು ಎಂಬುದು ಗ್ರಹಿಕೆಗೆ ಮೀರಿದೆ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಈ ದುರಂತ ಘಟನೆಯಿಂದ ನಾವು ದುಃಖಿತರಾಗಿದ್ದೇವೆ" ಎಂದೂ ಅವರು ಹೇಳಿದರು.

ತೇಜ್‌ ಪ್ರತಾಪ್‌ ಸಿಂಗ್ ತನ್ನ ಕುಟುಂಬವನ್ನು ಕೊಂದಿದ್ದು ಮತ್ತು ನಂತರ ಸ್ವತ: ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕ ಬ್ರಾಡ್‌ಕಾಸ್ಟಿಂಗ್ ಚಾನೆಲ್ ವರದಿ ಮಾಡಿದೆ. ಅನಾಮಧೇಯ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದೂ ಮಾಧ್ಯಮ ತಿಳಿಸಿದೆ. ಇನ್ನೊಂದೆಡೆ, ದಂಪತಿ ಖುಷಿಯಾಗೇ ಇದ್ದರು. ಈ ಹಿನ್ನೆಲೆ ಈ ರೀತಿ ಆಗಿರುವುದನ್ನು ನಂಬಲು ಸಾಧ್ಯವಿಲ್ಲ ಎಂದು ಮನೆಯ ಹೊರಗೆ ಜಮಾಯಿಸಿದ ಕುಟುಂಬ ಸದಸ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇಬ್ಬರೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ (ಐಟಿ)ಯಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಬ್ಬರು ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ: ಮೃತ ದೀಪು ಇಸ್ಲಾಂ ಅವಹೇಳನಕ್ಕೆ ಸಾಕ್ಷಿಯೇ ಇಲ್ಲ
ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು