ಇರಾನ್‌ ಅಣ್ವಸ್ತ್ರ ತಯಾರಿ ಅಂತಿಮ ಹಂತಕ್ಕೆ ತಲುಪಿದ್ದೇ ದಾಳಿಗೆ ಕಾರಣ

Published : Mar 04, 2026, 08:36 AM IST
Iran

ಸಾರಾಂಶ

ಇರಾನ್‌ನ ಅಣ್ವಸ್ತ್ರದ ಕನಸಿಗೆ ಹಲವು ದಶಕಗಳಿಂದ ಅಡ್ಡಿ ಮಾಡುತ್ತಲೇ ಇದ್ದ ಅಮೆರಿಕ ಇದೀಗ ದಿಢೀರನೆ ಆ ದೇಶದ ಮೇಲೆ ದಾಳಿ ಮಾಡಲು, ಅದು ಇನ್ನೇನು ಅಣ್ವಸ್ತ್ರ ತಯಾರಿಯ ಅಂತಿಮ ಹಂತಕ್ಕೆ ಬಂದಿದ್ದೇ ಕಾರಣ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ

 ವಾಷಿಂಗ್ಟನ್‌: ಇರಾನ್‌ನ ಅಣ್ವಸ್ತ್ರದ ಕನಸಿಗೆ ಹಲವು ದಶಕಗಳಿಂದ ಅಡ್ಡಿ ಮಾಡುತ್ತಲೇ ಇದ್ದ ಅಮೆರಿಕ ಇದೀಗ ದಿಢೀರನೆ ಆ ದೇಶದ ಮೇಲೆ ದಾಳಿ ಮಾಡಲು, ಅದು ಇನ್ನೇನು ಅಣ್ವಸ್ತ್ರ ತಯಾರಿಯ ಅಂತಿಮ ಹಂತಕ್ಕೆ ಬಂದಿದ್ದೇ ಕಾರಣ ಎಂಬ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ. ಈ ವಿಷಯವನ್ನು ಇತ್ತೀಚೆಗೆ ಇರಾನ್‌ ಜೊತೆಗೆ ಅಮೆರಿಕದ ಪರವಾಗಿ ಮಾತುಕತೆ ನಡೆಸಲು ಸಂಧಾನಕಾರರಾಗಿ ತೆರಳಿದ್ದ ಸ್ಟೀವ್‌ ವಿಟ್ಕಾಫ್‌ ಬಹಿರಂಗಪಡಿಸಿದ್ದಾರೆ.

ಪರಮಾಣು ಅಸ್ತ್ರ ತಯಾರಿಯಿಂದ ಇರಾನ್‌ ಹಿಂದೆ ಸರಿಯಬೇಕೆಂದು ಒತ್ತಾಯಿಸುತ್ತಲೇ ಇದ್ದ ಅಮೆರಿಕ, ಇತ್ತೀಚೆಗೆ ಇರಾನ್‌ ಜತೆಗೆ ಜಿನೆವಾದಲ್ಲಿ ಮಾತುಕತೆ ನಡೆಸಿತ್ತು. ಈ ವೇಳೆ ಅಮೆರಿಕದ ವಿಶೇಷ ದೂತರಾಗಿ ತೆರಳಿದ್ದ ವಿಟ್ಕಾಫ್‌, ‘ಇರಾನ್‌ ತನ್ನೆಲ್ಲಾ ಅಣ್ವಸ್ತ್ರ ತಯಾರಿ ಯೋಜನೆ ಮತ್ತು ಕ್ಷಿಪಣಿ ಯೋಜನೆ ಸ್ಥಗಿತಗೊಳಿಸಬೇಕು, ಹಿಜ್ಬುಲ್ಲಾ ಸೇರಿದಂತೆ ಇತರೆ ಉಗ್ರ ಸಂಘಟನೆಗಳಿಗೆ ನೆರವು ನೀಡುವುದು ನಿಲ್ಲಿಸಬೇಕು ಮತ್ತು ನೌಕಾಪಡೆ ರದ್ದುಪಡಿಸಬೇಕು ಎಂಬುದು ಅಮೆರಿಕದ ಬೇಡಿಕೆ’ ಎಂಬ ಮಾಹಿತಿಯನ್ನು ರವಾನಿಸಿದ್ದರು.

ಆದರೆ ಈ ಬೇಡಿಕೆಯನ್ನು ಸಾರಸಗಟಾಗಿ ತಿರಸ್ಕರಿಸಿದ್ದ ಇರಾನ್‌ನ ಪ್ರತಿನಿಧಿಗಳು, ‘ನಾವು ಯುರೇನಿಯಂ ಸಂಸ್ಕರಣೆ ಮಾಡುತ್ತಿರುವುದೇ ಶಸ್ತ್ರಾಸ್ತ್ರ ತಯಾರಿಗಾಗಿ. ಈಗಾಗಲೇ ನಮ್ಮ ಬಳಿ 460 ಕೆಜಿಯಷ್ಟು ಯುರೇನಿಯಂ ಸಂಗ್ರಹವಿದೆ. ಈ ಪೈಕಿ ಶೇ.60ರಷ್ಟನ್ನು ಈಗಾಗಲೇ ಸಂಸ್ಕರಣೆ ಮಾಡಿದ್ದೇವೆ. ನಮ್ಮ ಬಳಿ ಇರುವ ಯುರೇನಿಯಂನಿಂದ ಕನಿಷ್ಠ 11 ಪರಮಾಣು ಬಾಂಬ್‌ ತಯಾರಿಸಬಹುದು’ ಎಂದು ಹೇಳಿದ್ದರು. ಈ ವೇಳೆ ಇಂಥ ಯಾವುದೇ ಪ್ರಯತ್ನವನ್ನು ತಡೆಯಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿದ್ಧರಿದ್ದಾರೆ ಎಂಬ ಸಂದೇಶವನ್ನು ಕೂಡಾ ರವಾನಿಸಿದ್ದೆವು’ ಎಂದು ವಿಟ್ಕಾಫ್‌ ಹೇಳಿದ್ದಾರೆ.

ಸಂಧಾನದ ಮಾತುಕತೆ ಫಲ ನೀಡಿಲ್ಲ

ಜೊತೆಗೆ ಈ ಮಾತುಕತೆ ಬಳಿಕ ನಾವು ಟ್ರಂಪ್‌ ಬಳಿಗೆ ತೆರಳಿ, ಸಾಕಷ್ಟು ಪ್ರಯತ್ನದ ಹೊರತಾಗಿಯೂ ಸಂಧಾನದ ಮಾತುಕತೆ ಫಲ ನೀಡಿಲ್ಲ. ಆದರೆ ಇರಾನ್‌ ಜೊತೆ ಮಾತುಕತೆ ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದೆವು. ಹೀಗಾಗಿ ಅಂತಿಮವಾಗಿ ಇರಾನ್‌ ಮೇಲೆ ದಾಳಿಗೆ ಟ್ರಂಪ್‌ ಮುಂದಾದರು’ ಎಂದು ವಿಟ್ಕಾಫ್‌ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಇರಾನ್‌ನ ಫರ್ಡೋ, ನಟಾನ್ಜ್‌ ಮತ್ತು ಇಶ್ಫಾನ್‌ ಪರಮಾಣು ಘಟಕಗಳ ಮೇಲೆ ಅಮೆರಿಕದ ದಾಳಿ ನಡೆಸಿತ್ತು. ಆದರೆ ಈ ದಾಳಿಯ ಹೊರತಾಗಿಯೂ 450 ಕೆಜಿಯಷ್ಟು ಯುರೇನಿಯಂ ಅನ್ನು ಇರಾನ್‌ ಬೇರೆಡೆಗೆ ಸಾಗಿಸಿ ರಹಸ್ಯವಾಗಿ ಇರಿಸಿತ್ತು ಎಂಬ ಮಾಹಿತಿ ಅಮೆರಿಕಕ್ಕೆ ರವಾನಿಸಲಾಗಿತ್ತು. ಯುರೇನಿಯಂ ಸಂಸ್ಕರಣೆ ಪ್ರಮಾಣ ಶೇ.90ಕ್ಕೆ ತಲುಪಿದರೆ ಅದನ್ನು ಅಣ್ವಸ್ತ್ರಗಳಿಗೆ ಬಳಸಬಹುದು. ಹೀಗಾಗಿಯೇ ಇರಾನ್‌ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಇಸ್ರೇಲ್‌ ಜೊತೆಗೂಡಿ ಅಮೆರಿಕ ದಾಳಿ ನಡೆಸಿತು ಎನ್ನಲಾಗಿದೆ.

ಅಮೆರಿಕ ಬೇಡಿಕೆ ಏನಿತ್ತು?

1. ಇರಾನ್‌ ತನ್ನೆಲ್ಲಾ ಪರಮಾಣು, ಕ್ಷಿಪಣಿ ತಯಾರಿಕಾ ಘಟಕ ಮುಚ್ಚಬೇಕು

2. ಹಿಜ್ಬುಲ್ಲಾ ಸೇರಿ ಇತರೆ ಉಗ್ರ ಸಂಘಟನೆಗಳಿಗೆ ನೆರವು ನಿಲ್ಲಿಸಬೇಕು

3. ನೌಕಾಪಡೆ ರದ್ದುಪಡಿಸಿ, ಸಮುದ್ರದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಪ್ರತೀಕಾರ ಜ್ವಾಲೆಗೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ?
ಖಮೇನಿ ಬೇಟೆಗಾಗಿ ಇರಾನ್‌ನಲ್ಲಿನ ಟ್ರಾಫಿಕ್‌ ಕ್ಯಾಮೆರಾಗಳನ್ನೇ ಹ್ಯಾಕ್‌ ಮಾಡಿತ್ತು ಇಸ್ರೇಲ್‌!