ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಕ್ಕೆ ಇಸ್ರೇಲ್‌ ದಾಳಿ : ವಿಶ್ವಕ್ಕೆ ತೈಲ ಆಘಾತದ ಆತಂಕ - ದರ ಹೆಚ್ಚಳ

KannadaprabhaNewsNetwork |  
Published : Jun 16, 2025, 01:35 AM ISTUpdated : Jun 16, 2025, 04:43 AM IST
ಟೆಹ್ರಾನ್‌ | Kannada Prabha

ಸಾರಾಂಶ

ಕಳೆದ 4 ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು, ಇರಾನ್‌ನ ದಕ್ಷಿಣ ಪಾರ್ಸ್‌ನಲ್ಲಿರುವ ವಿಶ್ವದ ಅತಿದೊಡ್ಡ ಆಯಿಲ್‌ ಮತ್ತು ಗ್ಯಾಸ್‌ ಫೀಲ್ಡ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ.

ಟೆಹ್ರಾನ್‌: ಕಳೆದ 4 ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು, ಇರಾನ್‌ನ ದಕ್ಷಿಣ ಪಾರ್ಸ್‌ನಲ್ಲಿರುವ ವಿಶ್ವದ ಅತಿದೊಡ್ಡ ಆಯಿಲ್‌ ಮತ್ತು ಗ್ಯಾಸ್‌ ಫೀಲ್ಡ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ. ಹೀಗಾಗಿ ಇಲ್ಲಿ ಅನಿಲ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಎರಡೂ ದೇಶಗ‍ಳ ನಡುವಿನ ಸಂಘರ್ಷ ಇದೇ ರೀತಿ ಮುಂದುವರಿದರೆ ಯುರೋಪ್‌ ಮತ್ತು ಏಷ್ಯಾ ಮಾರುಕಟ್ಟೆಗಳಲ್ಲಿ ತಲ್ಲಣ ಸೃಷ್ಟಿಯಾಗುವ ಸಾಧ್ಯತೆ ಇದೆ.

ಇಸ್ರೇಲ್‌ ದಾಳಿ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಶೇ.14ರಷ್ಟು ಹೆಚ್ಚಾಗಿದೆ. ಒಂದು ಬ್ಯಾರಲ್‌ ತೈಲ ದರ 7 ಸಾವಿರ ರು. ತಲುಪಿದೆ. ಯುದ್ಧ ಇದೇ ರೀತಿ ಮುಂದುವರಿದರೆ ತೈಲ ದರ ಮತ್ತಷ್ಟು ಏರಿಕೆಯಾಗುವ ಅಪಾಯವಿದೆ.

ಇದೇ ಮೊದಲು:

ಇರಾನ್‌ ತೈಲ ನೆಲೆಗಳನ್ನು ಗುರಿಯಾಗಿರಿಸಿ ಇಸ್ರೇಲ್‌ ದಾಳಿ ನಡೆಸಿದ್ದು ಇದೇ ಮೊದಲು. ಈ ದಾಳಿಯಿಂದ ದಕ್ಷಿಣ ಪಾರ್ಸ್‌ ಗ್ಯಾಸ್‌ ಫೀಲ್ಡ್‌ನಲ್ಲಿರುವ ಪ್ರಮುಖ ಸಂಸ್ಕರಣಾ ಘಟಕಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಪ್ರತಿದಿನ 12 ದಶಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಅನಿಲ ಉತ್ಪಾದನೆ ನಷ್ಟ ಆಗಲಿದೆ.

ಇರಾನ್‌ ಮತ್ತು ಕತಾರ್‌ಗೆ ಹೊಂದಿಕೊಂಡಂತಿರುವ ದಕ್ಷಿಣ ಪಾರ್ಸ್‌ನಲ್ಲಿ ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲದ ಸಂಗ್ರಹವಿದೆ. ಇರಾನ್‌ ಮತ್ತು ಕತಾರ್‌ ಪ್ರತ್ಯೇಕವಾಗಿ ಇಲ್ಲಿ ತೈಲ ಹೊರತೆಗೆಯುತ್ತಿದೆ. ಇರಾನ್‌ ಶೇ.66ರಷ್ಟು ದೇಶೀ ಗ್ಯಾಸ್‌ ಬೇಡಿಕೆಯನ್ನು ಈ ಗ್ಯಾಸ್‌ಫೀಲ್ಡ್‌ ಪೂರೈಸುತ್ತದೆ. ಇರಾನ್‌ನ ವಿದ್ಯುತ್‌ ಮತ್ತು ಪೆಟ್ರೋಕೆಮಿಕಲ್‌ ಉತ್ಪಾದನೆಗೆ ಈ ಗ್ಯಾಸ್ ಫೀಲ್ಡೇ ಮೂಲ.

3ನೇ ದೊಡ್ಡ ಅನಿಲ ಉತ್ಪಾದಕ ಇರಾನ್:

ಅಮೆರಿಕ, ರಷ್ಯಾ ಬಳಿಕದ ವಿಶ್ವದ 3ನೇ ಅತಿದೊಡ್ಡ ನೈಸರ್ಗಿಕ ಅನಿಲ ಉತ್ಪಾದನಾ ದೇಶ ಇರಾನ್‌ ಆಗಿದೆ. ವಾರ್ಷಿಕ 275 ಶತಕೋಟಿ ಕ್ಯೂಬಿಕ್‌ ಮೀಟರ್‌ನಷ್ಟು ಅನಿಲ ಅಂದರೆ ವಿಶ್ವದ ನೈಸರ್ಗಿಕ ಅನಿಲ ಉತ್ಪಾದನೆಯ ಶೇ.6.5ರಷ್ಟು ಇರಾನ್‌ನಲ್ಲೇ ಆಗುತ್ತದೆ. ಅಂತಾರಾಷ್ಟ್ರೀಯ ನಿರ್ಬಂಧದ ಹಿನ್ನೆಲೆಯಲ್ಲಿ ಈ ಗ್ಯಾಸ್‌ ಹೆಚ್ಚಾಗಿ ದೇಶೀಯವಾಗಿಯೇ ಬಳಕೆಯಾಗುತ್ತದೆ.

ಈ ಹಿಂದೆ 2029ರಲ್ಲಿ ಸೌದಿ ಅರೇಬಿಯಾದ ಅಬ್ಕೈಕ್‌ ಆಯಿಲ್‌ ಆ್ಯಂಡ್‌ ಗ್ಯಾಸ್‌ ನೆಲೆ ಮೇಲೆ ಬಂಡುಕೋರರಿಂದ ದಾಳಿ ನಡೆದಿತ್ತು. ಆ ದಾಳಿ ವಿಶ್ವಮಾರುಕಟ್ಟೆಯನ್ನೇ ತಲ್ಲಣಗೊಳಿಸಿತ್ತು. ಆ ಬಳಿಕದ ಆಯಿಲ್‌ ಮತ್ತು ಗ್ಯಾಸ್‌ ಮೂಲಸೌಲಭ್ಯಗಳ ಮೇಲಿನ ಅತಿದೊಡ್ಡದಾಳಿ ಇದಾಗಿದೆ.

ಭಾರೀ ದಾಳಿ- ಪ್ರತಿದಾಳಿ

ಇಸ್ರೇಲ್‌ ಮೇಲೆ ರಾತ್ರಿಯಿಡೀ ಇರಾನ್ ದಾಳಿ. ಇಸ್ರೇಲ್‌ನಿಂದಲೂ ದಿಟ್ಟ ಎದಿರೇಟು

ದೊಡ್ಡ ಅನಿಲ ನಿಕ್ಷೇಪ, 2 ತೈಲ ಘಟಕ, ರಕ್ಷಣಾ ಸಚಿವಾಲಯ ಮೇಲೆ ಇಸ್ರೇಲ್‌ ದಾಳಿ

ಇಸ್ರೇಲ್‌ ದಾಳಿ ನಿಲ್ಲಿಸಿದರೆ ನಾವೂ ನಿಲ್ಲಿಸ್ತೇವೆ: ಕದನ ಸ್ಥಗಿತ ಕುರಿತು ಇರಾನ್‌ ಪ್ರಸ್ತಾಪ

ಯುದ್ಧ ತೀವ್ರ ಬೆನ್ನಲ್ಲೇ ಅಮೆರಿಕ ಜತೆಗಿನ ಇರಾನ್‌ ಅಣ್ವಸ್ತ್ರ ಮಾತುಕತೆ ಅರ್ಧಕ್ಕೇ ಸ್ಥಗಿತ

ಭಾರತ-ಪಾಕ್‌ ರೀತಿ ಇಸ್ರೇಲ್‌ - ಇರಾನ್‌ ಕದನ ವಿರಾಮ:

ಟ್ರಂಪ್‌ಇರಾನ್ ಮತ್ತು ಇಸ್ರೇಲ್ ಒಪ್ಪಂದ ಮಾಡಿಕೊಳ್ಳಬೇಕು. ನಾನು ಭಾರತ ಮತ್ತು ಪಾಕಿಸ್ತಾನದ ನಡುವೆ ಮಾಡಿಸಿದಂತೆಯೇ ಇಲ್ಲೂ ಡೀಲ್‌ ಮಾಡಿಸುವೆ. ಭಾರತ-ಪಾಕ್‌ ನಡುವಿನ ಕದನ ವಿರಾಮಕ್ಕೆ ಅಮೆರಿಕ ಜತೆಗಿನ ವ್ಯಾಪಾರವನ್ನು ಬಳಸಿಕೊಂಡು ವಿವೇಕಯುತವಾಗಿ ನಿರ್ಧಾರ ಕೈಗೊಳ್ಳಲಾಯಿತು.

ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ