ಸಿರಿಯಾ ಅಧ್ಯಕ್ಷ ಬಷರ್ ಅಲ್‌ ಅಸಾದ್ ಓಡಿಹೋದ ಬೆನ್ನಲ್ಲೇ ಅಮೆರಿಕ ಹಾಗೂ ಇಸ್ರೇಲ್‌ ಪ್ರತ್ಯೇಕ ವಾಯುದಾಳಿ

KannadaprabhaNewsNetwork | Updated : Dec 10 2024, 04:06 AM IST

ಸಾರಾಂಶ

ಸಿರಿಯಾದಲ್ಲಿ ಬಂಡುಕೋರರ ದಂಗೆಗೆ ಬೆಚ್ಚಿ ಅಧ್ಯಕ್ಷ ಬಷರ್ ಅಲ್‌ ಅಸಾದ್ ರಷ್ಯಾಗೆ ಓಡಿಹೋದ ಬೆನ್ನಲ್ಲೇ ಅಮೆರಿಕ ಹಾಗೂ ಇಸ್ರೇಲ್‌ ಸೋಮವಾರ ಪ್ರತ್ಯೇಕ ವಾಯುದಾಳಿ ನಡೆಸಿವೆ.

 ಡಮಾಸ್ಕಸ್‌: ಸಿರಿಯಾದಲ್ಲಿ ಬಂಡುಕೋರರ ದಂಗೆಗೆ ಬೆಚ್ಚಿ ಅಧ್ಯಕ್ಷ ಬಷರ್ ಅಲ್‌ ಅಸಾದ್ ರಷ್ಯಾಗೆ ಓಡಿಹೋದ ಬೆನ್ನಲ್ಲೇ ಅಮೆರಿಕ ಹಾಗೂ ಇಸ್ರೇಲ್‌ ಸೋಮವಾರ ಪ್ರತ್ಯೇಕ ವಾಯುದಾಳಿ ನಡೆಸಿವೆ. ಐಸಿಸ್‌ (ಇಸ್ಲಾಮಿಕ್‌ ಸ್ಟೇಟ್‌) ಉಗ್ರರ ನೆಲೆಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿದ್ದರೆ, ಇಸ್ರೇಲ್‌ನಿಂದ ರಸಾಯನಿಕ ಅಸ್ತ್ರಗಳ ತಾಣಗಳ ಮೇಲೆ ದಾಳಿ ನಡೆದಿದೆ.

ಅಸಾದ್‌ ಮಹಾಪತನದ ನಿರ್ವಾತ ಸ್ಥಿತಿ ಬಳಸಿಕೊಂಡು ಐಸಿಸ್‌ ಉಗ್ರರು ಚಿಗಿತುಕೊಳ್ಳಬಹುದು ಎಂಬ ಕಾರಣದಿಂದ ತಮ್ಮ ಪಡೆಗಳು ಸಿರಿಯಾದೊಳಗೆ ನಮ್ಮ ಯುದ್ಧವಿಮಾನಗಳು ಇಸ್ಲಾಮಿಕ್ ಸ್ಟೇಟ್ ಉಗ್ರರು ಮತ್ತು ಶಿಬಿರಗಳ ಮೇಲೆ ದಾಳಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಸೇನಾಧಿಕಾರಿಗಳು ಹೇಳಿದ್ದಾರೆ.

ಸೆಂಟ್ರಲ್ ಸಿರಿಯಾದಲ್ಲಿ ಅಮೆರಿಕ ನೆಲೆ ಇದ್ದು, ಸುಮಾರು 900 ಸೈನಿಕರು ಅಲ್ಲಿದ್ದಾರೆ. ಅಲ್ಲಿ ಬಿ-52, ಎಫ್‌-15ಎಸ್‌, ಎ-10ಎಸ್ ಸೇರಿ ಹಲವು ಯುದ್ಧವಿಮಾನ ಬಳಸಿಕೊಂಡು 75 ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.

ಐತಿಹಾಸಿಕ ಕ್ಷಣ:

ಈ ನಡುವೆ ಅಸಾದ್‌ ಮಹಾಪತನ ಐತಿಹಾಸಿಕ ಕ್ಷಣ ಎಂದು ಬೈಡೆನ್‌ ಬಣ್ಣಿಸಿದ್ದಾರೆ.

ಇಸ್ರೇಲ್‌ ದಾಳಿ:

ಏತನ್ಮಧ್ಯೆ, ಸಿರಿಯಾದಲ್ಲಿನ ರಾಸಾಯನಿಕ ಶಸ್ತ್ರಾಸ್ತ್ರಗಳ ತಾಣಗಳು ಮತ್ತು ದೀರ್ಘ-ಶ್ರೇಣಿಯ ರಾಕೆಟ್‌ಗಳು ಉಗ್ರರ ಪಾಲಾಗಬಾರದು ಎಂಬ ಉದ್ದೇಶದಿಂದ ಇಸ್ರೇಲ್‌ ಸೋಮವಾರ ಆ ನೆಲೆಗಳ ಮೇಲೆ ದಾಳಿ ಮಾಡಿ ನಾಶ ಮಾಡಿದೆ. ಅಸಾದ್‌ ಹೊಂದಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳು ಉಗ್ರರ ಕೈಪಾಲಾಗುವ ಆತಂಕವಿದೆ ಎಂದು ಭಾನುವಾರವಷ್ಟೇ ಅಮೆರಿಕ ಆತಂಕ ವ್ಯಕ್ತಪಡಿಸಿತ್ತು.

Share this article