ಚಂದ್ರನ ಮೇಲಿಳಿದ ಜಪಾನ್‌ ವ್ಯೋಮನೌಕೆ

KannadaprabhaNewsNetwork |  
Published : Jan 20, 2024, 02:00 AM ISTUpdated : Jan 20, 2024, 09:37 AM IST
ಚಂದ್ರನಲ್ಲಿ ಜಪಾನ್‌ | Kannada Prabha

ಸಾರಾಂಶ

ಭಾರತದ ಚಂದ್ರಯಾನ-3 ಯೋಜನೆಯ ಬಳಿಕ ಚಂದ್ರನ ಅಧ್ಯಯನಕ್ಕೆ ಜಪಾನ್‌ ಉಡಾವಣೆ ಮಾಡಿದ್ದ ಅತಿ ಚಿಕ್ಕ ಲ್ಯಾಂಡರ್‌ ಶುಕ್ರವಾರ ಚಂದ್ರನ ಮೇಲೆ ಲ್ಯಾಂಡ್‌ ಆಗಿದೆ ಎಂದು ಜಪಾನ್‌ ಹೇಳಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 5ನೇ ದೇಶ ಎಂಬ ಕೀರ್ತಿಗೆ ಜಪಾನ್‌ ಪಾತ್ರವಾಗಿದೆ.

ಟೋಕಿಯೋ: ಭಾರತದ ಚಂದ್ರಯಾನ-3 ಯೋಜನೆಯ ಬಳಿಕ ಚಂದ್ರನ ಅಧ್ಯಯನಕ್ಕೆ ಜಪಾನ್‌ ಉಡಾವಣೆ ಮಾಡಿದ್ದ ಅತಿ ಚಿಕ್ಕ ಲ್ಯಾಂಡರ್‌ ಶುಕ್ರವಾರ ಚಂದ್ರನ ಮೇಲೆ ಲ್ಯಾಂಡ್‌ ಆಗಿದೆ ಎಂದು ಜಪಾನ್‌ ಹೇಳಿದೆ. 

ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್‌ ಇಳಿಸಿದ ಜಗತ್ತಿನ 5ನೇ ದೇಶ ಎಂಬ ಕೀರ್ತಿಗೆ ಜಪಾನ್‌ ಪಾತ್ರವಾಗಿದೆ.

ಈ ಲ್ಯಾಂಡರನ್ನು ಇಳಿಸಲು ಜಪಾನ್‌ ಚಂದ್ರನ ಸಮಭಾಜಕ ವೃತ್ತದ ಬಳಿ ಕೇವಲ 100 ಮೀ. ಸ್ಥಳವನ್ನು ಮಾತ್ರ ನಿಗದಿ ಮಾಡಿತ್ತು. 

ಇದು ಪಿನ್‌ ಪಾಯಿಂಟ್‌ ಲ್ಯಾಂಡಿಂಗ್‌ ಆಗಿದ್ದು, ಈ ರೀತಿ ಲ್ಯಾಂಡಿಂಗ್‌ ಮಾಡಿದ ಮೊದಲ ದೇಶ ಎಂಬ ಖ್ಯಾತಿಯನ್ನು ಜಪಾನ್‌ ಪಡೆದುಕೊಂಡಿದೆ. 

ಜಪಾನಿನ ಏರೋಸ್ಪೇಸ್‌ ಎಕ್ಸ್‌ಪ್ಲೋರೇಶನ್‌ ಏಜೆನ್ಸಿ (ಜಾಕ್ಸಾ) 2023ರ ಸೆ.7ರಂದು ತೆನೆಗಾಶೀಮಾ ಸ್ಪೇಸ್‌ ಸೆಂಟರ್‌ನಿಂದ ಚಂದ್ರನ ಅಧ್ಯಯನಕ್ಕೆ ರಾಕೆಟ್‌ ಹಾರಿಸಿತ್ತು.

ಇದು ಅತ್ಯಂತ ಚಿಕ್ಕ ಲ್ಯಾಂಡರನ್ನು ಹೊಂದಿದ್ದು, ಇದಕ್ಕೆ ಸ್ಮಾರ್ಟ್‌ ಲ್ಯಾಂಡರ್‌ ಫಾರ್‌ ಇನ್‌ವೆಸ್ಟಿಗೇಟಿಂಗ್‌ ಮೂನ್‌ ಎಂದು ಹೆಸರಿಡಲಾಗಿದೆ. 

ಇದು ಚಂದ್ರನ ಮೇಲೆ ಲ್ಯಾಂಡ್‌ ಮಾಡಲು ಜಪಾನ್‌ ಕೈಗೊಳ್ಳುತ್ತಿರುವ 3ನೇ ಪ್ರಯತ್ನವಾಗಿದ್ದು, ಈ ಮೊದಲಿನ 2 ಯೋಜನೆಗಳಲ್ಲಿ ಜಾಕ್ಸಾ ವಿಫಲಗೊಂಡಿತ್ತು.

ಈವರೆಗೆ ಅಮೆರಿಕ, ರಷ್ಯಾ, ಚೀನಾ ಮತ್ತು ಭಾರತ ದೇಶಗಳು ಮಾತ್ರ ಯಶಸ್ವಿಯಾಗಿ ಚಂದ್ರನ ಮೇಲೆ ತಮ್ಮ ಲ್ಯಾಂಡರ್‌ಗಳನ್ನು ಇಳಿಸಿವೆ.

ಚಂದ್ರಯಾನ-3 ಉಪಕರಣವೀಗ ಲೊಕೇಶನ್‌ ಮಾರ್ಕರ್‌: ಭಾರತೀಯ ಬಾಹ್ಯಾಕಾಶ ಸಂಶೋಧನಾ ಹಾರಿಸಿದ್ದ ಚಂದ್ರಯಾನ ನೌಕೆ 3ರಲ್ಲಿದ್ದ ಉಪಕರಣವೊಂದು ಇದೀಗ ದಕ್ಷಿಣ ಧ್ರುವದಲ್ಲಿ ಸ್ಥಳ ಗುರುತು ಬಿಂದುವಾಗಿ (ಲೊಕೇಶನ್‌ ಮಾರ್ಕರ್‌) ಹೊರಹೊಮ್ಮಿದೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ, ಕಳೆದ ಜು.14ರಂದು ಹಾರಿಸಲ್ಪಟ್ಟು, ಜು.23ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದಿದ್ದ ನೌಕೆಯಲ್ಲಿನ ‘ದ ಲೇಸರ್‌ ರೆಟ್ರೋರಿಫ್ಲೆಕ್ಟರ್‌ ಅರ್ರೇ’ (ಎಲ್‌ಆರ್‌ಎ) ಉಪಕರಣವು ದಕ್ಷಿಣ ಧ್ರುವದಲ್ಲಿ ಹೊಸ ಸ್ಥಳ ಗುರುತು ಬಿಂದುವಾಗಿ ಸೇವೆ ನೀಡಲು ಆರಂಭಿಸಿದೆ. 

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾರಿಬಿಟ್ಟಿರುವ ಲೂನಾರ್‌ ರಿಕಾನ್ಸೆಸ್‌ ಆರ್ಬಿಟರ್‌ ನೌಕೆಯು, ಕಳೆದ ಡಿ.12ರಂದು ಎಲ್‌ಆರ್‌ಎನಿಂದ ಹೊರಹೊಮ್ಮಿದ ಸಿಗ್ನಲ್‌ಗಳನ್ನು ಯಶಸ್ವಿಯಾಗಿ ಸ್ವೀಕರಿಸಿದೆ’ ಎಂದು ಮಾಹಿತಿ ನೀಡಿದೆ.

ಚಂದ್ರನ ಮೇಲೆ ಹಲವು ಎಲ್‌ಆರ್‌ಎಗಳನ್ನು ನಿಯೋಜಿಸಲಾಗಿದೆಯಾದರೂ, ದಕ್ಷಿಣ ಧ್ರುವದಲ್ಲಿ ಇರುವುದು ಇಸ್ರೋ ನಿಯೋಜಿಸಿರುವ ಉಪಕರಣ ಮಾತ್ರ. 

ಈ ಉಪಕರಣವನ್ನು ಸ್ವತಃ ನಾಸಾ ಇಸ್ರೋಗೆ ನೀಡಿದ್ದು, ಅದನ್ನು ವಿಕ್ರಂ ಲ್ಯಾಂಡರ್‌ ಮೂಲಕ ಉಡ್ಡಯನ ಮಾಡಲಾಗಿತ್ತು.

ಇದರ ಲಾಭವೇನು?
ಲೊಕೇಶನ್‌ ಮಾರ್ಕರ್‌ನಿಂದ, ಹಾಲಿ ಮತ್ತು ಮುಂದಿನ ಹಲವು ಬಾಹ್ಯಾಕಾಶ ಯೋಜನೆಗಳಿಗೆ ಮಹತ್ವದ ನೆರವು ಲಭಿಸಲಿದೆ. ಚಂದ್ರನ ಯಾವ ಭಾಗವು ಈಗ ದಕ್ಷಿಣ ಧ್ರುವದಲ್ಲಿ ಇರುವ ಇಸ್ರೋ ಚಂದ್ರಯಾನ ಉಪಕರಣದಿಂದ ಎಷ್ಟು ದೂರ ಇದೆ ಎಂಬುದನ್ನು ಗುರುತಿಸಲು ಸುಲಭ ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ