ನವದೆಹಲಿ : ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆ ಪ್ರಕರಣದ ಆರೋಪಿ, ಲಷ್ಕರ್-ಎ-ತೊಯ್ಬಾದ ಉಗ್ರ ಸಲ್ಮಾನ್ ಖಾನ್‌ನನ್ನು ರುವಾಂಡಾ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿದೆ. ಎನ್‌ಐಎ, ರುವಾಂಡಾ ತನಿಖಾ ಸಂಸ್ಥೆ ಎನ್‌ಸಿಬಿ ಮತ್ತು ಇಂಟರ್‌ಪೋಲ್ ಸಹಕಾರದೊಂದಿಗೆ ಸಲ್ಮಾನ್‌ನನ್ನು ಗುರುವಾರ ಭಾರತಕ್ಕೆ ಕರೆತರುವಲ್ಲಿ ಸಿಬಿಐ ಯಶಸ್ವಿಯಾಗಿದೆ.
ಬಂಧಿತ ಸಲ್ಮಾನ್ ರೆಹಮಾನ್ ಖಾನ್, ಪ್ರಕರಣವೊಂದರಲ್ಲಿ ಬೆಂಗಳೂರು ಜೈಲು ಸೇರಿದ್ದ ವೇಳೆ ಭಯೋತ್ಪಾದಕ ಸಂಚು ಹೆಣೆದಿದ್ದ. ಜೊತೆಗೆ ಭಯೋತ್ಪಾದಕ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕ ಒದಗಿಸುವಲ್ಲಿ ಸಹಾಯ ಮಾಡಿದ್ದ ಎಂದು ಸಿಬಿಐ ಹೇಳಿದೆ.ಈತನ ವಿರುದ್ಧ ಮೊದಲಿಗೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ 2023ರಲ್ಲಿ ಎನ್‌ಐಎ ಈ ಪ್ರಕರಣದ ತನಿಖೆಯನ್ನು ತನ್ನ ಕೈಗೆತ್ತಿಕೊಂಡಿತ್ತು.
ಸಲ್ಮಾನ್ ಏನು ಮಾಡಿದ್ದ?:ಸಲ್ಮಾನ್ 2018 ಮತ್ತು 2022 ರ ನಡುವೆ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸೆರೆ ವಾಸ ಅನುಭವಿಸುತ್ತಿದ್ದ. ಈ ವೇಳೆ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಉಗ್ರ ಟಿ. ನಾಸೀರ್‌ನ ಸಂಪರ್ಕಕ್ಕೆ ಬಂದಿದ್ದ. ನಾಸಿರ್, ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮದನಿ ಶಿಷ್ಯ.
ಜೈಲಲ್ಲಿ ನಾಸೀರ್, ಸಲ್ಮಾನ್‌ನ ಬ್ರೇನ್‌ವಾಷ್ ಮಾಡಿದ್ದ ಹಾಗೂ ಜೈಲಿನಲ್ಲೇ ಲಷ್ಕರ್ ಅನ್ನು ಸಂಘಟಿಸಿದ್ದ. ಜೈಲಿಂದ ಹೊರಬಂದ ನಂತರ ಸಲ್ಮಾನ್ ಉಗ್ರನಾಗಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸತೊಡಗಿದ್ದ. ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಸಹಾಯ ಮಾಡುತ್ತಿದ್ದ. ಜೊತೆಗೆ ಒಮ್ಮೆ ನಾಸಿರ್ ಕೋರ್ಟ್‌ಗೆ ಹಾಜರಾದ ವೇಳೆ ಆತನ ಪರಾರಿಗೂ ಸಲ್ಮಾನ್ ಸಂಚು ರೂಪಿಸಿದ್ದ.ಆದರೆ ಭಯೋತ್ಪಾದನೆ ಸಂಚು ಬಹಿರಂಗವಾದಾಗ, ಸಲ್ಮಾನ್ ಭಾರತದಿಂದ ಪಲಾಯನ ಮಾಡಿದ್ದ ಹಾಗೂ ತಲೆಮರೆಸಿಕೊಂಡು ತಿರುಗುತ್ತಿದ್ದ. ಕೊನೆಗೆ ರುವಾಂಡಾದಲ್ಲಿ ಪತ್ತೆ ಆಗಿದ್ದ.
ಈತ ಸಿಕ್ಕಿಬಿದ್ದಿದ್ದು ಹೇಗೆ?:
ಬೆಂಗಳೂರು ಸ್ಫೋಟದ ತನಿಖೆ ನಡೆಸಿದ್ದ ಎನ್‌ಐಎ, ಸಲ್ಮಾನ್ ಪತ್ತೆಗೆ ಇಂಟರ್‌ಪೋಲ್ ನೆರವು ಕೋರಿತ್ತು. ಅದರಂತೆ ಕಳೆದ ಆ.2ರಂದು ಇಂಟರ್‌ಪೋಲ್ ಸಲ್ಮಾನ್ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು. ಆಗ ರುವಾಂಡಾದಲ್ಲಿ ಈತ ಇದ್ದಿದ್ದು ಅಲ್ಲಿನ ಅಧಿಕಾರಿಗಳಿಗೆ ಗೊತ್ತಾಗಿ, ಅವರು ಸಲ್ಮಾನ್‌ನನ್ನು ಸೆ.9ರಂದು ಬಂಧಿಸಿ ಭಾರತೀಯ ಏಜೆನ್ಸಿಗಳಿಗೆ ಮಾಹಿತಿ ನೀಡಿದರು.ಬಳಿಕ ಎನ್‌ಐಎ, ರ್‍ವಾಂಡನ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ (ಎನ್‌ಸಿಬಿ) ಮತ್ತು ಇಂಟರ್‌ಪೋಲ್ ಜತೆಗಿನ ಸಂಘಟಿತ ಪ್ರಯತ್ನಗಳ ಮೂಲಕ ಸಿಬಿಐ ಈತನನ್ನು ಭಾರತಕ್ಕೆ ಹಸ್ತಾಂತರಿಸಿಕೊಳ್ಳುವಲ್ಲಿ ಯಶ ಕಂಡಿದೆ.
ಈ ವರ್ಷದ 26ನೇ ಗಡೀಪಾರು:ಇದು ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಈ ವರ್ಷದ 26ನೇ ಗಡೀಪಾರು ಪ್ರಕರಣ. ಅಲ್ಲದೆ, 2021ರಿಂದ, ಈವರೆಗೆ 100 ವಾಂಟೆಡ್ ಕ್ರಿಮಿನಲ್‌ಗಳನ್ನು ಇಂಟರ್‌ಪೋಲ್ ಮೂಲಕ ಸಮನ್ವಯದಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳಲಾಗಿದೆ.