ಬಾಯ್ಕಾಟ್‌ಗೂ ಜಗ್ಗದ ಮಾಲ್ಡೀವ್ಸ್‌: ಭಾರತದ ಸೈನಿಕರ ವಾಪ್ಸಿಗೆ ಗಡುವು

KannadaprabhaNewsNetwork |  
Published : Jan 15, 2024, 01:50 AM ISTUpdated : Jan 15, 2024, 11:03 AM IST
Maldives President Muizzu

ಸಾರಾಂಶ

ಭಾರತದ ಬಾಯ್ಕಾಟ್‌ ಮಾಲ್ಡೀವ್ಸ್‌ಗೂ ಜಗ್ಗದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು, ಇದೀಗ ಭಾರತೀಯ ರಕ್ಷಣಾ ಪಡೆಗಳಿಗೆ ದ್ವೀಪದಿಂದ ತೆರಳಲು ಗಡುವು ನೀಡಿದ್ದಾರೆ. ಈ ಆದೇಶವನ್ನು ಅಧ್ಯಕ್ಷರ ಕಚೇರಿ ಹೊರಡಿಸಿದೆ.

ಮಾಲೆ: ಭಾರತದ ಜತೆ ಇತ್ತೀಚೆಗೆ ಪ್ರವಾಸೋದ್ಯಮ ಕುರಿತು ಸಂಘರ್ಷಕ್ಕಿಳಿದಿದ್ದ ಮಾಲ್ಡೀವ್ಸ್‌ ಈಗ ಇನ್ನೊಂದು ಸವಾಲು ಹಾಕಿದೆ. ‘ನಮ್ಮ ದೇಶದಲ್ಲಿರುವ 88 ಭಾರತೀಯ ಯೋಧರನ್ನು ಮಾ.15ರೊಳಗೆ ವಾಪಸ್‌ ಕರೆಸಿಕೊಳ್ಳಿ’ ಎಂದು ಭಾರತಕ್ಕೆ ಮಾಲ್ಡೀವ್ಸ್‌ ಸೂಚಿಸಿದೆ. 

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು 5 ದಿನಗಳ ಚೀನಾ ಪ್ರವಾಸ ಮುಗಿಸಿ ತವರಿಗೆ ಮರಳಿದ ಬೆನ್ನಲ್ಲೇ ಈ ಸೂಚನೆ ನೀಡಲಾಗಿದೆ. ಭಾರತೀಯರು ಮಾಲ್ಡೀವ್ಸ್‌ ಪ್ರವಾಸ ಬಾಯ್ಕಾಟ್‌ಗೆ ಕರೆ ನೀಡಿದ ಬಳಿಕವೂ ‘ಭಾರತೀಯ ಸೇನಾ ಸಿಬ್ಬಂದಿ ಇನ್ನು ಮಾಲ್ಡೀವ್ಸ್‌ನಲ್ಲಿ ಇರುವಂತಿಲ್ಲ. 

ಇದು ಅಧ್ಯಕ್ಷ ಮೊಹಮ್ಮದ್‌ ಮುಯಿಜು ಮತ್ತು ಅವರ ಸರ್ಕಾರದ ನೀತಿ’ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಮಾಲ್ಡೀವ್ಸ್‌ನ ಸನ್‌ ಆನ್‌ಲೈನ್‌ ಪತ್ರಿಕೆ ವರದಿ ಮಾಡಿದೆ. ಚೀನಾ ಪರ ಒಲವು ಹೊಂದಿರುವ ಮುಯಿಜು, ಅಧ್ಯಕ್ಷರಾದ ಬೆನ್ನಲ್ಲೇ 2 ತಿಂಗಳ ಹಿಂದೆ ಭಾರತಕ್ಕೆ ಇಂಥದ್ದೊಂದು ಎಚ್ಚರಿಕೆ ನೀಡಿದ್ದರು. 

ಬಳಿಕ ಸೇನಾ ವಾಪಸಾತಿ ಕುರಿತು ಮಾತುಕತೆ ನಡೆಸಲು ಉಭಯ ದೇಶಗಳು ಸಮಿತಿಯೊಂದನ್ನು ರಚಿಸಿದ್ದವು. ಈ ಸಮಿತಿಯ ಮೊದಲ ಸಭೆ ಭಾನುವಾರ ನಡೆದಿತ್ತು. ಅದರ ಬೆನ್ನಲ್ಲೇ ಅಧ್ಯಕ್ಷರ ಕಚೇರಿಯ ಹೇಳಿಕೆ ಹೊರಬಿದ್ದಿದೆ. ಈ ನಡುವೆ ಸಭೆಯ ಅಜೆಂಡಾ ಕೂಡಾ ಭಾರತಕ್ಕೆ ಸೇನಾ ವಾಪಸಾತಿ ಕುರಿತು ಗಡುವು ನೀಡುವುದೇ ಆಗಿತ್ತು ಎಂದು ಮೂಲಗಳು ತಿಳಿಸಿವೆ.

ತೀವ್ರ ಬಿಕ್ಕಟ್ಟು: ಇತ್ತೀಚೆಗೆ ನಡೆದ ಮಾಲ್ಡೀವ್ಸ್‌ ಸಂಸತ್‌ ಚುನಾವಣೆ ವೇಳೆ, ಮುಯಿಜು ಅವರ ಪಕ್ಷವು ಭಾರತೀಯ ಸೇನೆಯನ್ನು ವಾಪಸ್‌ ಕಳುಹಿಸುವುದನ್ನೇ ಪ್ರಮುಖವಾಗಿ ಚುನಾವಣಾ ವಿಷಯವಾಗಿ ಬಳಸಿಕೊಂಡಿತ್ತು. ಹೀಗಾಗಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ ಅವರು ಭಾರತೀಯ ಸೇನೆಗೆ ತವರಿಗೆ ಮರಳಲು ಗಡುವು ನೀಡಿದ್ದರು.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭಾರತೀಯರಿಗೆ ಮಾಲ್ಡೀವ್ಸ್‌ಗೆ ಬಹುತೇಕ ಹೋಲಿಕೆಯಾಗುವ ಲಕ್ಷದ್ವೀಪ ಪ್ರವಾಸಕ್ಕೆ ಕರೆ ನೀಡಿದ್ದರು. ಇದಕ್ಕೆ ಮಾಲ್ಡೀವ್ಸ್‌ನ ಮೂವರು ಸಂಸದರು ವ್ಯಂಗ್ಯವಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು.

ಇದರ ಬೆನ್ನಲ್ಲೇ ಹೇಳಿಕೆ ಖಂಡಿಸಿ ಭಾರತೀಯರಿಂದ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಆರಂಭವಾಗಿ ಸಾವಿರಾರು ಭಾರತೀಯರು ಪ್ರವಾಸ ಕೈಬಿಡುವ ಘೋಷಣೆ ಮಾಡಿದ್ದರು.ಇದೀಗ ಮಾಲ್ಡೀವ್ಸ್‌ ಭಾರತೀಯ ಯೋಧರನ್ನು ಮರಳುವಂತೆ ಸೂಚಿಸಿರುವುದು ಉಭಯ ದೇಶಗಳ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.

ಮಾಲ್ಡೀವ್ಸ್‌ನಲ್ಲಿ ಭಾರತೀಯ ಸೇನೆ ಏಕಿದೆ?
ಹಿಂದಿನ ಮಾಲ್ಡೀವ್ಸ್‌ ಸರ್ಕಾರದ ಕೋರಿಕೆ ಅನ್ವಯ ಭಾರತ ಸರ್ಕಾರ 80-100 ಯೋಧರ ತಂಡವನ್ನು ಸದಾ ಮಾಲ್ಡೀವ್ಸ್‌ನಲ್ಲಿ ನಿಯೋಜಿಸಿತ್ತು. ಇವರು ಮಾಲ್ಡೀವ್ಸ್‌ಗೆ ಕರಾವಳಿ ಭದ್ರತೆ ಒದಗಿಸುವ, ವಿಪತ್ತು ಎದುರಾದರೆ ನೆರವಾಗುವ ಕೆಲಸ ಮಾಡುತ್ತಾರೆ. ಜೊತೆಗೆ ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿರುವ ಸೇನಾ ವಿಮಾನಗಳ ದುರಸ್ತಿ ಕಾರ್ಯ ನೋಡಿಕೊಳ್ಳುತ್ತಾರೆ. ಈಗ ಭಾರತೀಯ ಸೇನೆಯ 88 ಯೋಧರು ಮಾಲ್ಡೀವ್ಸ್‌ನಲ್ಲಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತ-ಬಾಂಗ್ಲಾ ರಾಜತಾಂತ್ರಿಕ ಸಮರ
15 ವರ್ಷ ಬಳಿಕ ಜಪಾನ್‌ನಲ್ಲಿ ವಿಶ್ವದ ದೊಡ್ಡ ಅಣುವಿದ್ಯುತ್‌ ಸ್ಥಾವರಕ್ಕೆ ಮತ್ತೆ ಚಾಲನೆ