;Resize=(412,232))
ಟೆಹ್ರಾನ್: ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುವ ಅಮೆರಿಕ-ಇರಾನ್ ನಡುವಿನ ಮಹತ್ವದ ಶಾಂತಿ ಒಪ್ಪಂದ ಅಂತಿಮಗೊಳಿಸುವ ನಿಟ್ಟಿನಲ್ಲಿ ಕತಾರ್‌ನ ಸಂಧಾನಕಾರರು ಭಾನುವಾರ ಇರಾನ್‌ಗೆ ಆಗಮಿಸಿದ್ದಾರೆ. ಈ ಮೂಲಕ ಒಪ್ಪಂದ ಯತ್ನ ಚುರುಕು ಪಡೆದಿದೆ.
ಭಾನುವಾರವೇ ಅಮೆರಿಕ-ಇರಾನ್ ಮಧ್ಯೆ ಶಾಂತಿ ಒಪ್ಪಂದ ಆಗಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಇರಾನ್ ಮಾಧ್ಯಮಗಳು ಮಾತ್ರ ಒಪ್ಪಂದಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರ ಇನ್ನೂ ಆಗಿಲ್ಲ ಎಂದು ಹೇಳಿಕೊಂಡಿದ್ದವು. ಹೀಗಾಗಿ ಟೆಹ್ರಾನ್‌ಗೆ ಕತಾರಿ ಸಂಧಾನಕಾರರ ತೀವ್ರ ಕುತೂಹಲ ಮೂಡಿದೆ.
ಮೂಲಗಳ ಪ್ರಕಾರ ಎರಡೂ ದೇಶಗಳ ನಡುವಿನ ಒಪ್ಪಂದ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಅಧಿಕೃತ ಸಹಿಬಿದ್ದರೆ ಸಾವಿರಾರು ಮಂದಿ ಸಾವಿಗೆ ಕಾರಣವಾದ ಎರಡೂ ದೇಶಗಳ ನಡುವಿನ ನಾಲ್ಕು ತಿಂಗಳ ಸಂಘರ್ಷಕ್ಕೆ ತೆರೆ ಬಿದ್ದಂತಾಗಲಿದೆ. ಜತೆಗೆ, ಹೋರ್ಮುಜ್ ಜಲಸಂಧಿ ವಾಣಿಜ್ಯ ಹಡಗುಗಳ ಸಂಚಾರಕ್ಕೂ ಮುಕ್ತಗೊಂಡು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗುವ ನಿರೀಕ್ಷೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಜತೆಗೆ ಮಾತುಕತೆ ನಡೆಸಿದ್ದು, ಬಳಿಕ ಭಾನುವಾರವೇ ಒಪ್ಪಂದಕ್ಕೆ ಸಹಿಬೀಳಲಿದೆ, ಇದರ ಬೆನ್ನಲ್ಲೇ ಹೋರ್ಮುಜ್ ಜಲಸಂಧಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದಿದ್ದರು.
ಎರಡೂ ದೇಶಗಳ ನಾಯಕರು ಖುದ್ದು ಹಾಜರಾಗುವ ಬದಲು ಡಿಜಿಟಲ್ ರೂಪದಲ್ಲಿ ಸಹಿಹಾಕುವ ಮೂಲಕ ಒಪ್ಪಂದವನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಇರಾನ್‌ನ ಕ್ಷಿಪಣಿ, ಅಣು ಕಾರ್ಯಕ್ರಮಕ್ಕೆ ಅಂತ್ಯಹಾಡಬೇಕು ಮತ್ತು ಇಸ್ರೇಲ್ ವಿರೋಧಿ ಬಂಡುಕೋರರಿಗೆ ಬೆಂಬಲ ನೀಡುವುದನ್ನು ತಡೆಯುವ ಮೂಲ ಗುರಿಯಿಂದ ಇಸ್ರೇಲ್ ಮತ್ತು ಅಮೆರಿಕ ಸದ್ಯಕ್ಕೆ ಹಿಂದೆ ಸರಿದಿರುವಂತೆ ಕಾಣುತ್ತಿದೆ.
ಕದನ ವಿರಾಮದ ನಡುವೆಯೂ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ದಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಒಪ್ಪಂದದಲ್ಲಿ ಲೆಬನಾನ್ ಸಂಘರ್ಷಕ್ಕೆ ಕೊನೆಹಾಡುವ ವಿಚಾರವನ್ನೂ ಸೇರ್ಪಡೆ ಮಾಡುವಂತೆ ಇರಾನ್ ಆಗ್ರಹಿಸುತ್ತಿದೆ.
ಟೆಹ್ರಾನ್: ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದ್ದರೂ ಟೆಹರಾನ್‌ನಲ್ಲಿ ಮಾತ್ರ ಇಸ್ಲಾಮಿಕ್ ಕಟ್ಟರ್‌ವಾದಿಗಳು ಒಪ್ಪಂದ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.