ಜೆರುಸಲೇಂ: ಪರಸ್ಪರರ ಮೇಲೆ ವೈಮಾನಿಕ ದಾಳಿ ಬೆನ್ನಲ್ಲೇ ಇಸ್ರೇಲ್ ಮತ್ತು ಇರಾನ್ ದೇಶಗಳು ಅಗತ್ಯಬಿದ್ದರೆ ಮತ್ತೆ ದಾಳಿಯ ಎಚ್ಚರಿಕೆ ನೀಡಿವೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಹೆಚ್ಚಿದೆ.
ಮಂಗಳವಾರ ಹಿಜ್ಬುಲ್ಲಾ ಉಗ್ರರ ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಹಿಜ್ಬುಲ್ಲಾ ಉಗ್ರರು, ಯೆಮನ್ ಸೇನೆ ಮತ್ತು ಇರಾನ್ ಸೇನೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದವು.
ಅದರ ಮುಂದುವರೆದ ಭಾಗವಾಗಿ ಬುಧವಾರ ಮತ್ತೆ ದಾಳಿಯ ಮಾತುಗಳನ್ನು ಆಡಿರುವ ಇರಾನ್, ಸದ್ಯಕ್ಕೆ ದಾಳಿ ನಿಲ್ಲಿಸಿದ್ದೇವೆ. ಒಂದು ವೇಳೆ ಇಸ್ರೇಲ್ ಪ್ರತೀಕಾರದ ಮಾತುಗಳನ್ನು ಆಡಿದರೆ ಇಸ್ರೇಲ್‌ನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಸಿದೆ. ಅದರ ಬೆನ್ನಲ್ಲೇ ತಿರುಗೇಟು ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್ ಮಾಡಿದ ಅತಿ ದೊಡ್ಡ ತಪ್ಪಿಗೆ ಬೆಲೆ ಕಟ್ಟಲಿದೆ’ ಎಂದು ಗುಡುಗಿದ್ದಾರೆ.
ಮತ್ತೊಂದೆಡೆ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನ ಭೂಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಘೋಷಿಸಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಲೆಬನಾನ್ ಗಡಿಯಲ್ಲಿರುವ 24 ಹಳ್ಳಿಗಳನ್ನು ಖಾಲಿ ಮಾಡುವಂತೆ ಇಸ್ರೇಲಿಗರಿಗೆ ಸೂಚಿಸಿದ್ದಾರೆ.
ವಿಶ್ವಸಂಸ್ಥೆ ಕಳವಳ:
ಈ ನಡುವೆ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯಾ ಗ್ಯುಟೆರೆಸ್, ‘ಲೆಬನಾನ್ ಯುದ್ಧದಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದ್ದು, ಇದನ್ನು ತಡೆಯಬೇಕು’ ಎಂದು ಕರೆ ನೀಡಿದ್ದಾರೆ. ಅದರ ಬೆನ್ನಲ್ಲೇ ತನ್ನ ಮೇಲಿನ ಇರಾನ್ ದಾಳಿಯನ್ನು ಖಂಡಿಸದ ಗ್ಯುಟೆರೆಸ್ ಅವರಿಗೆ ತನ್ನ ದೇಶದ ಪ್ರವೇಶ ನಿರ್ಬಂಧಿಸಿ ಇಸ್ರೇಲ್ ಘೋಷಣೆ ಮಾಡಿದೆ.
==
ಇರಾನ್ ದಾಳಿಗೆ ಮೊಸಾದ್ ಕಚೇರಿ ಬಳಿ 30 ಆಡಿ ಆಳ, 50 ಅಡಿ ಅಗಲದ ಕುಳಿ
ಟೆಲ್ ಅವೀವ್: ಹಿಜ್ಬುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯಿಂದ ಸಿಟ್ಟಿಗೆದ್ದಿರುವ ಹಿಜ್ಬುಲ್ಲಾ ಉಗ್ರರು, ಯೆಮನ್ ಸೇನೆ ಮತ್ತು ಇರಾನ್ ಸೇನೆ ಮಂಗಳವಾರ ರಾತ್ರಿ ಇಸ್ರೇಲ್‌ನ ಗುಪ್ತಚರ ಸೇವೆಯ ಮೊಸಾದ್‌ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಸುಮಾರು 200 ಕ್ಷಿಪಣಿ ದಾಳಿಯನ್ನು ಮಾಡಿದೆ. ಈ ದಾಳಿಯಿಂದ 30 ಅಡಿ ಆಳದ ಹಾಗೂ 50 ಅಡಿ ಅಗಲವಿರುವ ಕುಳಿ ಬಿದ್ದಿದೆ. ಈ ಪ್ರಧಾನ ಕಚೇರಿಗೆ ಸುಮಾರು 1500 ಮೀ. ದೂರದಲ್ಲಿ ಈ ಕುಳಿ ಕಂಡುಬಂದಿದೆ.
==
ಇಸ್ರೇಲ್‌ನ ಮುಂದಿನ ಗುರಿ ಇರಾನ್ ನಂ.1 ನಾಯಕ ಖೊಮೇನಿ
ಜೆರುಸಲೇಂ: ಹಮಾಸ್ ಉಗ್ರ ಸಂಘಟನೆ ರಾಜಕೀಯ ವಿಭಾಗದ ಮುಖ್ಯಸ್ಥ ಇಸ್ಮಾಯಿಲ್ ಹನಿಯೇ, ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾರನ್ನು ನೇರವಾಗಿ ಹೊಡೆದುರುಳಿಸಿದ್ದ ಇಸ್ರೇಲ್‌ನ ಮುಂದಿನ ಗುರಿ ಇರಾನ್‌ನ ಪರಮೋಚ್ಚ ಧಾರ್ಮಿಕ ನಾಯಕ ಆಯತೊಲ್ಲಾ ಖೊಮೇನಿ ಎನ್ನಲಾಗುತ್ತಿದೆ. ಹಿಜ್ಬುಲ್ಲಾ, ಹಮಾಸ್ ಉಗ್ರ ಸಂಘಟನೆಗಳಿಗೆ ಇರಾನ್ ನೇರವಾಗಿ ಹಣಕಾಸು, ಮಿಲಟರಿ ನೆರವು ನೀಡುತ್ತಿದೆ. ಹೀಗಾಗಿ ಇರಾನ್‌ಗೆ ದೊಡ್ಡ ಮಟ್ಟದ ಪಾಠ ಕಲಿಸುವ ಸಲುವಾಗಿ ಖೊಮೇನಿಯನ್ನು ತನ್ನ ಮುಂದಿನ ಗುರಿಯಾಗಿಸಿಕೊಂಡಿದೆ ಎಂದು ವರದಿಗಳು ಹೇಳಿವೆ.ಇದಕ್ಕೆ ಪೂರಕವೆಂಬಂತೆ, ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ ಬಳಿಕ ಇದಕ್ಕೆ ಪ್ರತಿಕಾರ ತೆಗೆದುಕೊಳ್ಳುತ್ತೇವೆ ಎಂಬ ಖೊಮೇನಿ ಹೇಳಿಕೆಗೆ ತಿರುಗೇಟು ನೀಡಿದ್ದ ಇಸ್ರೇಲ್, ಇಂಥದ್ದೇ ಹೇಳಿಕೆ ನೀಡಿದ್ದವರು ಈಗ ಎಲ್ಲಿದ್ದಾರೆ ನೋಡಿ ಎಂದು ಹನಿಯೇ, ನಸ್ರಲ್ಲಾ ಸಾವಿನ ಉದಾಹರಣೆ ನೀಡಿತ್ತು. ಜೊತೆಗೆ ಇರಾನಿಗರೇ, ನಾವು ನಿಮ್ಮೊಂದಿಗಿದ್ದೇವೆ. ನಿಮ್ಮನ್ನು ದುರಾಡಳಿತದಿಂದ ನೀವು ಅಂದುಕೊಂಡಿದ್ದಕ್ಕಿಂತಲೂ ಬೇಗ ಬಿಡುಗಡೆ ಮಾಡಲಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿತ್ತು.
==
ಇಸ್ರೇಲ್ ಮೇಲಿನ ದಾಳಿ ಅಂತ್ಯ: ಇರಾನ್ ಘೋಷಣೆ
ತೆಹ್ರಾನ್: ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ 200ಕ್ಕೂ ಹೆಚ್ಚು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ್ದ ಇರಾನ್, ಆ ದೇಶದ ವಿರುದ್ಧದ ತನ್ನ ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಬುಧವಾರ ಘೋಷಿಸಿದೆ. ಆದರೆ ಮತ್ತೆ ತನ್ನನ್ನು ಕೆಣಕಿದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದೆ.
ಜೊತೆಗೆ ಮಂಗಳವಾರ ನಡೆಸಿದ್ದು ಸೀಮಿತ ದಾಳಿ. ಮುಂದೆ ಅಗತ್ಯಬಿದ್ದರೆ ಬೃಹತ್ ಪ್ರಮಾಣದ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದೆ.
ಇದೇ ವೇಳೆ, ಇಸ್ರೇಲ್ ಕೆಲವೇ ದಿನಗಳಲ್ಲಿ ‘ಮಹತ್ವದ ಪ್ರತೀಕಾರ’ ವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದು ಇರಾನ್‌ನೊಳಗಿನ ತೈಲ ಉತ್ಪಾದನಾ ಘಟಕಗಳು ಮತ್ತು ಇತರ ಆಯಕಟ್ಟಿನ ಸ್ಥಳಗಳನ್ನು ಗುರಿಯಾಗಿಸುತ್ತದೆ ಎಂದು ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಹಿಜ್ಬುಲ್ಲಾ ಮೇಲೆ ಮತ್ತೆ ಇಸ್ರೇಲ್ ದಾಳಿ:
ಇನ್ನು ಇರಾನ್ ದಾಳಿ ಮುಗಿದ ನಂತರ ಹಿಜ್ಬುಲ್ಲಾದ ಭದ್ರಕೋಟೆಯಾದ ಲೆಬನಾನ್‌ನ ಬೈರೂತ್‌ನ ದಕ್ಷಿಣ ಉಪನಗರಗಳಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳು ಪುನರಾರಂಭಗೊಂಡಿವೆ ಹಾಗೂ 1 ಡಜನ್ ದಾಳಿಗಳು ವರದಿಯಾಗಿವೆ. ಈ ಪ್ರದೇಶದಿಂದ ದೊಡ್ಡ ಪ್ರಮಾಣದ ಹೊಗೆಗಳು ಏರುತ್ತಿರುವುದು ಕಂಡುಬಂದಿದೆ.ಆದರೆ ಬುಧವಾರ ಮುಂಜಾನೆ ಲೆಬನಾನಿನ ಪಟ್ಟಣವಾದ ಅದೈಸ್ಸೆಯಲ್ಲಿ ಇಸ್ರೇಲಿ ಪಡೆಗಳನ್ನು ಎದುರಿಸಿರುವುದಾಗಿ ಹಿಜ್ಬುಲ್ಲಾ ಹೇಳಿಕೊಂಡಿದೆ ಹಾಗೂ ಹಿಮ್ಮೆಟ್ಟಿಸಿದ್ದಾಗಿ ಹೇಳಿದೆ.