60 ಅಡಿ ಆಳದಲ್ಲಿದ್ದರೂ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರಿಗೆ ಬೆಂಬಲವಾಗಿ ನಿಂತು ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆಗೈದ ಇಸ್ರೇಲ್‌!

KannadaprabhaNewsNetwork |  
Published : Sep 30, 2024, 01:23 AM ISTUpdated : Sep 30, 2024, 04:26 AM IST
ಲೆಬನಾನ್‌ | Kannada Prabha

ಸಾರಾಂಶ

ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರಿಗೆ ಬೆಂಬಲವಾಗಿ ನಿಂತು ತನಗೆ ಉಪಟಳ ನೀಡುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪರಮೋಚ್ಚ ನಾಯಕ ಹಸನ್‌ ನಸ್ರಲ್ಲಾನನ್ನು ಹೊಡೆದುರುಳಿಸುವ ಮೂಲಕ ಭಯೋತ್ಪಾದಕರಿಗೆ ಇಸ್ರೇಲ್‌ ಭರ್ಜರಿ ಆಘಾತ ಕೊಟ್ಟಿದೆ.  

ಜೆರುಸಲೇಂ: ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರಿಗೆ ಬೆಂಬಲವಾಗಿ ನಿಂತು ತನಗೆ ಉಪಟಳ ನೀಡುತ್ತಿರುವ ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪರಮೋಚ್ಚ ನಾಯಕ ಹಸನ್‌ ನಸ್ರಲ್ಲಾನನ್ನು ಹೊಡೆದುರುಳಿಸುವ ಮೂಲಕ ಭಯೋತ್ಪಾದಕರಿಗೆ ಇಸ್ರೇಲ್‌ ಭರ್ಜರಿ ಆಘಾತ ಕೊಟ್ಟಿದೆ. ಈ ಕಾರ್ಯಾಚರಣೆ ಬಲು ರೋಚಕವಾಗಿದ್ದು, ಇಸ್ರೇಲ್‌ನ ಸೇನೆಯ ಚಾಕಚಕ್ಯತೆಯ ಬಗ್ಗೆ ಉಗ್ರ ನಿಗ್ರಹ ತಜ್ಞರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಬೈರೂತ್‌ನ ದಕ್ಷಿಣ ಭಾಗದಲ್ಲಿರುವ ಅತ್ಯಂತ ಬಿಗಿಭದ್ರತೆಯ ಬಂಕರ್‌ನಲ್ಲಿ ನಸ್ರಲ್ಲಾ ಹಾಗೂ ಹಿಜ್ಬುಲ್ಲಾ ಉಗ್ರ ಸಂಘಟನೆಯ ಪ್ರಮುಖ ನಾಯಕರು ಇದ್ದರು. ಆ ಬಂಕರ್‌ ನೆಲಮಟ್ಟದಿಂದ 60 ಅಡಿ ಆಳದಲ್ಲಿತ್ತು. ಇಸ್ರೇಲ್‌ ವಿರುದ್ಧ ದಾಳಿ ಕಾರ್ಯಾಚರಣೆ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಇಸ್ರೇಲ್‌ಗೆ ಖಚಿತ ಗುಪ್ತಚರ ಮಾಹಿತಿ ಲಭಿಸಿತು. ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರನ್ನು ಸಂಪರ್ಕಿಸಿ ದಾಳಿಗೆ ಅನುಮತಿ ಪಡೆಯುವ ಯತ್ನ ಮಾಡಲಾಯಿತು. ಆ ವೇಳೆ ನೆತನ್ಯಾಹು ಅವರು ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯಲ್ಲಿನ ಸಾಮಾನ್ಯ ಅಧಿವೇಶನದಲ್ಲಿ ಭಯೋತ್ಪಾದನೆ ಕುರಿತು ಭಾಷಣ ಮಾಡುತ್ತಿದ್ದರು. ಆ ಭಾಷಣದ ವೇಳೆಯೇ ಅವರು ದಾಳಿಗೆ ಅನುಮೋದನೆ ನೀಡಿದ್ದು ವಿಶೇಷ.

ತಕ್ಷಣ ಕಾರ್ಯಪ್ರವೃತ್ತವಾದ ಇಸ್ರೇಲ್ 80 ಟನ್‌ ಬಾಂಬ್‌ ಹೊತ್ತ ವಿಮಾನವನ್ನು ಲೆಬನಾನ್‌ಗೆ ಕಳುಹಿಸಿತು. ನಸ್ರಲ್ಲಾ ಇದ್ದ ಬಂಕರ್‌ ಮೇಲೆ ಆ ವಿಮಾನ ಬಾಂಬ್‌ ಹಾಕಿತು. ಕ್ಷಣಾರ್ಧದಲ್ಲಿ ನಸ್ರಲ್ಲಾ ಹಾಗೂ ಜತೆಯಲ್ಲಿದ್ದವರ ಅಂತ್ಯವಾಯಿತು.

ಅಂದಹಾಗೆ, ಈ ಕಾರ್ಯಾಚರಣೆಗೆ ಇಸ್ರೇಲ್‌ ಬಳಸಿದ 80 ಟನ್‌ ಬಾಂಬ್‌ ಪೈಕಿ ಶೇ.85ರಷ್ಟು ‘ಬಂಕರ್ ಬಸ್ಟರ್‌’ ಸ್ಫೋಟಕವೇ ಇತ್ತು. ಈ ಸ್ಫೋಟಕ ಭೂಮಿಯನ್ನು 30 ಮೀಟರ್‌ನಷ್ಟು ಭೇದಿಸುವ ಅಥವಾ ಆರು ಮೀಟರ್‌ನಷ್ಟು ಕಾಂಕ್ರಿಟ್‌ ನೆಲವನ್ನೂ ಸ್ಫೋಟಿಸುವ ಶಕ್ತಿ ಹೊಂದಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ ಮೊರೆ ಹೋಗುವ ಶತ್ರುಗಳನ್ನು ಕೊಲ್ಲಲೆಂದೇ ಈ ಬಾಂಬ್‌ ವಿನ್ಯಾಸಗೊಳಿಸಲಾಗಿದೆ. 2ನೇ ಮಹಾಯುದ್ಧದ ಕಾಲದಿಂದಲೇ ಈ ಬಾಂಬ್‌ ಬಳಕೆಯಲ್ಲಿದೆ.

ಯೆಮೆನ್‌ನ ಹೌತಿ ನೆಲೆಗಳ ಮೇಲೆ ಇಸ್ರೇಲ್‌ ವಾಯುದಾಳಿ

ಸನಾ (ಯೆಮೆನ್‌): ಲೆಬನಾನ್‌ನ ಹಿಜ್ಬುಲ್ಲಾ ನೆಲೆಗಳ ಮೇಲಿನ ವಾಯುದಾಳಿ ನಂತರ ಯೆಮೆನ್‌ನಲ್ಲಿರುವ ಹೌತಿ ಉಗ್ರರ ನೆಲೆಗಳ ಮೇಲೆ ಇಸ್ರೇಲ್‌ ಯುದ್ಧವಿಮಾನಗಳು ಭಾನುವಾರ ರಾತ್ರಿ ವೈಮಾನಿಕ ದಾಳಿ ಮಾಡಿವೆ.ಹಿಜ್ಬುಲ್ಲಾ ಹಾಗೂ ಹಮಾಸ್‌ ಉಗ್ರರಿಗೆ ಬೆಂಬಲವಾಗಿ ಶುಕ್ರವಾರ ಹೌತಿ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ಮಾಡಿದ್ದರು. ಇದರಿಂದ ಕ್ರುದ್ಧಗೊಂಡ ಇಸ್ರೇಲ್‌, ಭಾನುವಾರ ರಾಸ್ ಇಸಾ ಮತ್ತು ತೈಲ ಸಾಗಣೆಯ ಪ್ರಮುಖ ಬಂದರು ಇರುವ ಹೊದೈದಾ ನಗರಗಳ ಮೇಲೆ ವಾಯುದಾಳಿ ಮಾಡಿದೆ.

ಹಮಾಸ್-ಇಸ್ರೇಲ್‌ ಯುದ್ಧ ಆರಂಭ ಆದಾಗಿನಿಂದ ಇಸ್ರಲ್‌ ಪರ ವಹಿಸಿರುವ ಪಾಶ್ಚಾತ್ಯ ಹಡಗುಗಳ ಮೇಲೆ ಯೆಮೆನ್‌ ಉಗ್ರರು ಏಡನ್‌ ಕೊಲ್ಲಿಯಲ್ಲಿ ದಾಳಿ ಮಾಡುತ್ತಲೇ ಇದ್ದಾರೆ.

==

ದಾಳಿಗೂ ಮುನ್ನ ನಸ್ರಲ್ಲಾ ತಾಣವನ್ನು ಇಸ್ರೇಲ್‌ಗೆ ತಿಳಿಸಿದ್ದು ಇರಾನ್‌ ಸ್ಪೈನವದೆಹಲಿ: ಇಸ್ರೇಲ್‌ ವೈಮಾನಿಕ ದಾಳಿಗೆ ಬಲಿಯಾದ ಹಿಜ್ಬುಲ್ಲಾಗಳ ಪರಮೋಚ್ಚ ನಾಯಕ ಹಸನ್‌ ನಸ್ರಲ್ಲಾ ಲೆಬೆನಾನ್‌ನ ಬೈರೂತ್‌ನಲ್ಲಿರುವ ತಮ್ಮ ಭೂಗತ ಪ್ರಧಾನ ಕಚೇರಿಯಲ್ಲಿ ಇದ್ದಾರೆ ಎಂದು ಇರಾನ್‌ ಗುಪ್ತಚರನೊಬ್ಬ ಇಸ್ರೇಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಎಂದು ಫ್ರೆಂಚ್‌ನ ‘ಲೆ ಪ್ಯಾರಿಸಿಯನ್‌’ ಪತ್ರಿಕೆ ವರದಿ ಮಾಡಿದೆ. ವೈಮಾನಿಕ ದಾಳಿ ಆರಂಭಕ್ಕೂ 2 ಗಂಟೆಗೂ ಮುನ್ನ ಇರಾನ್‌ನ ಸ್ಪೈ, ನಸ್ರಲ್ಲಾ ಅವರು ತನ್ನ ಸದಸ್ಯರೊಂದಿಗೆ ಬೈರೂತ್‌ನ ಭೂಗತ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಇಸ್ರೇಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಎಂದು ವರದಿ ಹೇಳಿದೆ.

==

ನಸ್ರಲ್ಲಾ ಮೃತದೇಹ ಪತ್ತೆ, ಗಾಯದ ಗುರುತಿಲ್ಲ!

ಬೈರೂತ್‌: ಲೆಬನಾಣ್‌ ರಾಜಧಾನಿ ಬೈರೂತ್‌ ಮೇಲೆ ಇಸ್ರೇಲ್‌ ನಡೆಸಿದ ಭಾರಿ ವಾಯುದಾಳಿಯಲ್ಲಿ ಮೃತನಾದ ಹಿಜ್ಬುಲ್ಲಾ ಉಗ್ರ ಸಂಘಟನೆಯ ನೇತಾರ ಸಯ್ಯದ್ ಹಸನ್‌ ನಸ್ರಲ್ಲಾನ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಅಚ್ಚರಿ ಎಂದರೆ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲ. ದಕ್ಷಿಣ ಬೈರೂತ್‌ನ ದಾಳಿಯ ಸ್ಥಳದಲ್ಲೇ ದೇಹ ಲಭಿಸಿದೆ. ಇಸ್ರೇಲ್‌ 90 ಟನ್‌ ಬಾಂಬ್‌ ಹಾಕಿದ್ದರಿಂದ ಉಂಟಾದ ಭಾರಿ ಶಬ್ದವು ನಸ್ರಲ್ಲಾ ಹೃದಯಾಘಾತಕ್ಕೆ ಕಾರಣ ಆಗಿರಬಹುದು. ಅದರಿಂದ ಆತ ಸತ್ತಿರಬಹುದು ಎಂದು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಮಾಡಿದೆ.ಹೀಗಾಗಿಯೇ ನಸ್ರಲ್ಲಾ ಸತ್ತಿದ್ದಾನೆ ಎಂದು ಹಿಜ್ಬುಲ್ಲಾ ದೃಢೀಕರಿಸಿದ್ದರೂ ಸಾವಿನ ಕಾರಣ ತಿಳಿಸಿಲ್ಲ. ಇದೇ ವೇಳೆ, ಅಂತ್ಯಕ್ರಿಯೆ ಯಾವಾಗ ಎಂಬಬ ಹೇಳಿಕೆಯನ್ನೂ ನೀಡಿಲ್ಲ.

==

ಉತ್ತರ ನೀಡದೇ ಸುಮ್ಮನಿರಲ್ಲ: ಇರಾನ್‌ ಎಚ್ಚರಿಕೆ

ತೆಹ್ರಾನ್‌: ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಹತ್ಯೆಗೆ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರ್ಗಾಚ್ಚಿ, ‘ಇಸ್ರೇಲ್‌ಗೆ ಉತ್ತರ ನೀಡದೇ ಸುಮ್ಮನಿರಲ್ಲ’ ಎಂದು ಎಚ್ಚರಿಸಿದ್ದಾರೆ.ಇದೇ ವೇಳೆ, ‘ಇಸ್ರೇಲ್‌ನ ಕ್ರಿಮಿನಲ್‌ಗಳು ಹಾಗೂ ಅವರ ಬೆಂಬಲಿಗರ ವಿರುದ್ಧ ರಾಜತಾಂತ್ರಿಕವಾಗಿ ಹಾಗೂ ಕಾನೂನು ಮಾರ್ಗದ ಮೂಲಕವೂ ಹೋರಾಟ ನಡೆಸಲಾಗುತ್ತದೆ’ ಎಂದಿದ್ದಾರೆ.

ಇರಾನ್ ರಕ್ಷಣಾ ವ್ಯವಹಾರಗಳ ಉಪಾಧ್ಯಕ್ಷ ಜಾವೇದ್ ಜಾರಿಫ್‌ ಮಾತನಾಡಿ, ‘ನಮ್ಮ ನಾಯಕತ್ವವು ಸೂಕ್ ಸಮಯದಲ್ಲಿ ನಿರ್ಣಯ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದಿದ್ದಾರೆ. ಏನದು ಸೂಕ್ತ ಕ್ರಮ ಎಂಬುದನ್ನು ಹೇಳಿಲ್ಲ.ಇನ್ನು ಇರಾನ್‌ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರು ನಸ್ರಲ್ಲಾಗೆ ಹುತಾತ್ಮ ಪಟ್ಟ ನೀಡಿದ್ದು, 5 ದಿನಗಳ ರಾಷ್ಟ್ರೀಯ ಶೋಕಾಚರಣೆ ಸಾರಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಕಸಾಪ ಸಿಬ್ಬಂದಿಗಿಲ್ಲ 3 ತಿಂಗಳ ವೇತನ
ವೆನಿಜುವೆಲಾ ಹಂಗಾಮಿ ಅಧ್ಯಕ್ಷೆಯಾಗಿ ಡೆಲ್ಸಿ ಶಪಥ