ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಕೆಲಸ ಮಾಡುತ್ತಿರುವ 46 ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದಿರುವುದನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಬೆಂಗಳೂರು : ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ಕೆಲಸ ಮಾಡುತ್ತಿರುವ 46 ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡದಿರುವುದನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ಹಣಕಾಸು ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಕಸಾಪದ ಆಡಳಿತ ಮಂಡಳಿ ವಜಾ ಮಾಡಿ, ಆಡಳಿತಾಧಿಕಾರಿ ನೇಮಿಸಿದೆ. ಅವ್ಯವಸ್ಥೆ ಮತ್ತು ವಿವಾದಗಳಿಂದಾಗಿ ಪರಿಷತ್ತಿನ ಹಣಕಾಸು ಸ್ಥಿತಿ ಹದಗೆಟ್ಟಿದ್ದು, ಸಿಬ್ಬಂದಿ ವೇತನ ನೀಡಲು ಅಡ್ಡಿಯಾಗಿದೆ ಎನ್ನಲಾಗಿದೆ. ಆದರೆ, ಸರ್ಕಾರ ಸಾಕಷ್ಟು ಹಣವನ್ನು ಈ ಸಂಬಂಧ ಬಿಡುಗಡೆ ಮಾಡಿದ್ದರೂ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯತ್ರಿ ಅವರು, ಸಿಬ್ಬಂದಿ ವೇತನ ಮಂಜೂರು ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಹುತೇಕ ಎಲ್ಲರೂ ಅಲ್ಪಸಂಬಳದಲ್ಲಿ ಕೆಲಸ

ಕನ್ನಡ ಸಾಹಿತ್ಯ ಪರಿಷತ್ತು ಸಿಬ್ಬಂದಿಯಲ್ಲಿ ಬಹುತೇಕ ಎಲ್ಲರೂ ಅಲ್ಪಸಂಬಳದಲ್ಲಿ (ಸರ್ಕಾರಿ ನೌಕರರಿಗೆ ಹೋಲಿಸಿದಾಗ) ಕೆಲಸ ಮಾಡುತ್ತಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರೇ ಆಡಳಿತ ಅಧಿಕಾರಿ ಆಗಿರುವುದರಿಂದ ಸಣ್ಣಪುಟ್ಟ ಅಡೆತಡೆಗಳಿದ್ದರೂ ಸಂಬಳ ಕೊಡಲು ಏನೂ ತೊಂದರೆಯಿಲ್ಲ. ಆಡಳಿತ ಅಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಸಚಿವರು, ಈ ಬಗ್ಗೆ ಗಮನಹರಿಸಿ ತಕ್ಷಣ, ವೇತನವಿಲ್ಲದೆ ತೊಂದರೆಗೆ ಸಿಲುಕಿರುವ ಪರಿಷತ್ತು ಸಿಬ್ಬಂದಿಗೆ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇನ್ನು ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು ಕನ್ನಡ ಸಾಹಿ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಡಾ.ಮನುಬಳಿಗಾರ್‌ ಒತ್ತಾಯಿಸಿದ್ದಾರೆ.

ಕಳೆದ ಮೂರು ತಿಂಗಳಿಂದ ಸಂಬಳ ನೀಡದಿರುವುದು ಖಂಡನೀಯ.

ಕರ್ನಾಟಕ ವಿಕಾಸ ರಂಗ, ಕನ್ನಡ ಸಾಹಿತ್ಯ ಪರಿಷತ್ತು ಆಡಳಿತಾಧಿಕಾರಿಯವರ ಕ್ರಮವನ್ನು ತೀವ್ರ ವಿರೋಧಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡದಿರುವುದು ಖಂಡನೀಯ. ಉದ್ಯೋಗ ಮಾಡಿ ಬರುವ ಸಂಬಳದಿಂದಲೇ ಜೀವನ ನಡೆಸುತ್ತಿರುವ ಕನ್ನಡದ ಮಕ್ಕಳು, ಅವರ ಕುಟುಂಬ ಹಸುವಿನಿಂದ ಬಳಲುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲಿನ ಆರೋಪಗಳ ತನಿಖೆ ನೆಪವೂಡ್ಡಿ ಈ ಸಿಬ್ಬಂದಿಯನ್ನು ಸಂಕಷ್ಟಕ್ಕೆ ತಳ್ಳಿರುವುದು ಯಾವ ನ್ಯಾಯ? ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಮಧ್ಯಪ್ರವೇಶಿಸಿ ಸಿಬ್ಬಂದಿಗೆ ವೇತನ ಕೊಡಿಸಬೇಕೆಂದು ಸಂಘದ ಅಧ್ಯಕ್ಷ ವ.ಚ.ಚನ್ನೇಗೌಡ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.