ಕ್ಯಾಲಿಫೋರ್ನಿಯಾದಲ್ಲಿ ಬಿಎಪಿಎಸ್ ದೇವಾಲಯದ ಮೇಲೆ , ‘ಹಿಂದೂಗಳೇ ಹಿಂದಿರುಗಿ’ ಎಂದು ವಿಕೃತಿ

KannadaprabhaNewsNetwork |  
Published : Sep 27, 2024, 01:16 AM ISTUpdated : Sep 27, 2024, 04:08 AM IST
ಅಮೆರಿಕ | Kannada Prabha

ಸಾರಾಂಶ

ಕ್ಯಾಲಿಫೋರ್ನಿಯಾದ ಸಾಕ್ರಮೆಂಟೊದಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿದ ಅಪರಿಚಿತರು ‘ಹಿಂದೂಗಳೇ ಹಿಂದಿರುಗಿ’ ಎಂದು ಗೀಚಿದ್ದಾರೆ. ಮಣಿಪುರದಲ್ಲಿ ಶಿವನ ಮಂದಿರಕ್ಕೆ ನುಗ್ಗಿ ಬೆಂಕಿ ಹಚ್ಚಲಾಗಿದ್ದು, ಈ ಘಟನೆಗಳು ಆಕ್ರೋಶಕ್ಕೆ ಕಾರಣವಾಗಿವೆ.

ವಾಷಿಂಗ್ಟನ್‌: ಕ್ಯಾಲಿಫೋರ್ನಿಯಾದ ಸಾಕ್ರಮೆಂಟೊದಲ್ಲಿರುವ ಬಿಎಪಿಎಸ್‌ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಅಪರಿಚಿತರು ಇದೀಗ ‘ಹಿಂದೂಗಳೇ ಹಿಂದಿರುಗಿ’ ಎಂದು ಗೀಚುವ ಮೂಲಕ ವಿಕೃತಿ ಮೆರೆದಿದ್ದಾರೆ. ಸೆ.17ರಂದು ನ್ಯೂ ಯಾರ್ಕ್‌ನ ಬಿಎಪಿಎಸ್‌ ಶ್ರೀ ಸ್ವಾಮಿನಾರಾಯಣ ದೇವಾಲಯದ ಧ್ವಂಸದ ಬೆನ್ನಲ್ಲೇ ಈ ದುಷ್ಕೃತ್ಯ ನಡೆದಿದೆ. ‘ನಾವು ದ್ವೇಷವನ್ನು ಖಂಡಿಸುತ್ತೇವೆ. ಈ ಘಟನೆಯಿಂದ ಅತೀವ ದುಃಖವಾಗಿದೆ. ಹೃದಯದಲ್ಲಿ ದ್ವೇಷ ತುಂಬಿಕೊಂಡವರು ಸೇರಿದಂತೆ ಎಲ್ಲರಿಗಾಗಿ ಪ್ರಾರ್ಥಿಸುತ್ತೇವೆ’ ಎಂದು ಬಿಎಪಿಎಸ್‌ ಸಂಸ್ಥೆ, ಈ ಸಂಬಂಧ ಕಾನೂನು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿರುವುದಾಗಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮಣಿಪುರ ಶಿವ ದೇಗುಲಕ್ಕೆ ಅಪರಿಚಿತರಿಂದ ಬೆಂಕಿ: ವಾರದಲ್ಲೇ 2ನೇ ಘಟನೆ

ಇಂಫಾಲ: ಅಪರಿಚಿತರ ಗುಂಪೊಂದು ಶಿವನ ಮಂದಿರಕ್ಕೆ ನುಗ್ಗಿ ಬೆಂಕಿ ಹಚ್ಚಿರುವ ಘಟನೆ ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ದೇವಸ್ಥಾನಕ್ಕೆ ಭಾಗಶಃ ಹಾನಿಯಾಗಿದೆ. ಇದು ಪಶುಪತಿ ನಾಥನ ಸನ್ನಿಧಿಯಲ್ಲಿ ಒಂದು ವಾರದಲ್ಲಿ ನಡೆದ 2ನೇ ದಾಳಿಯಾಗಿದೆ. ಕಿಡಿಗೇಡಿಗಳ ಈ ಕೃತ್ಯ ದೇವಸ್ಥಾನದಲ್ಲಿರುವ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಗುರುವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಅಪರಿಚಿತರು, ದೇವಾಲಯದ ಒಳಗಡೆಯಿಂದ ಮರದ ದಿಮ್ಮಿಗಳಿಗೆ ಬೆಂಕಿ ಹಚ್ಚಿ ದೇವಸ್ಥಾನದ ಅಂಗಳದೊಳಗೆ ಎಸೆಯುತ್ತಿರುವ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಈ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಭಾರತೀಯ ಮೂಲದ ಸೂರಿ ನಿರ್ದೇಶನದ ‘ಸಂತೋಷ್‌’ ಬ್ರಿಟನ್‌ನಿಂದ ಆಸ್ಕರ್‌ ಎಂಟ್ರಿ

ಲಂಡನ್‌: ಭಾರತೀಯ ಮೂಲದ ಸಂಧ್ಯಾ ಸೂರಿ ನಿರ್ದೇಶನದ ‘ಸಂತೋಷ್‌’ ಚಿತ್ರ ಈ ವರ್ಷ ಬ್ರಿಟನ್‌ನಿಂದ ಆಸ್ಕರ್‌ ಅಧಿಕೃತ ಪ್ರವೇಶ ಮಾಡಿದೆ. ಉತ್ತರಪ್ರದೇಶದಲ್ಲಿ ಶೂಟಿಂಗ್ ನಡೆಸಿರುವ ಈ ಚಿತ್ರದಲ್ಲಿ ಸಾಕಷ್ಟು ಹಿಂದಿ ಸಂಭಾಷಣೆಗಳು ಕೂಡಾ ಇವೆ. ಯುವ ವಿಧವೆಯೊಬ್ಬಳು, ತನ್ನ ಪತಿಯ ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆ ಪಡೆದು ಬಾಲಕಿಯೊಬ್ಬಳ ಹತ್ಯೆ ಪ್ರಕರಣವನ್ನು ತನಿಖೆ ನಡೆಸುವ ಕಥಾ ಹಂದರವನ್ನು ಚಿತ್ರ ಹೊಂದಿದೆ. ಕಿರಣ್‌ರಾವ್‌ ನಿರ್ದೇಶನದ ಹಿಂದಿ ಚಿತ್ರ ‘ಲಾಪತಾ ಲೇಡಿಸ್‌’ 2025ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ.

ಗೋವು ಧ್ವಜ ಯಾತ್ರೆಗೆ ನಾಗಾಲ್ಯಾಂಡ್ ಸರ್ಕಾರ ಅನುಮತಿ ನಿರಾಕರಣೆ

ದಿಮಾಪುರ: ಗೋವುಗಳನ್ನು ಹತ್ಯೆ ಮಾಡದೇ ಅವುಗಳನ್ನು ರಕ್ಷಿಸಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿರುವ ‘ಗೋವು ಧ್ವಜ ಯಾತ್ರೆ’ಗೆ ನಾಗಾಲ್ಯಾಂಡ್‌ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಯಾತ್ರೆ ಕೈಗೊಳ್ಳಲು ಆಗಮಿಸಿದ್ದ ಬದರಿ ಶಂಕರಾಚಾರ್ಯ ಸ್ವಾಮೀಜಿ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಐವರು ದಾರ್ಶನಿಕರನ್ನು ಇಲ್ಲಿನ ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದ್ದಾರೆ. ಶಂಕಾರಾಚಾರ್ಯ ಶ್ರೀಗಳು ಸೇರಿದಂತೆ ಐವರ ತಂಡ ಗುರುವಾರ 12.20ಕ್ಕೆ ದಿಮಾಪುರ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರನ್ನು ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ತಡೆದು ಅಲ್ಲಿಂದ ವಾಸಪ್‌ ಹೋಗುವಂತೆ ಸೂಚಿಸಿದ್ದಾರೆ.

PREV

Recommended Stories

ಪಾಕ್‌ ವಿರುದ್ಧ ಗೆದ್ದು ಪಹಲ್ಗಾಂ ಸಂತ್ರಸ್ತರು, ಸೇನೆಗೆ ಅರ್ಪಿಸಿದ ಭಾರತ ಕ್ರಿಕೆಟ್‌ ತಂಡ!
ನಾವು ಯುದ್ಧ ಮಾಡಲ್ಲ : ಟ್ರಂಪ್‌ ತೆರಿಗೆ ದಾಳಿಗೆ ಚೀನಾದ ತಿರುಗೇಟು