ಸುಪ್ರೀಂಕೋರ್ಟ್ ವ್ಯತಿರಿಕ್ತ ತೀರ್ಪಿನ ಹಿನ್ನೆಲೆಯಲ್ಲಿ ನಿರ್ಧಾರ
ಹೊಸದಾಗಿ ತೆರಿಗೆ ವಿಷಯ ಚರ್ಚೆಗೆ ಅವಕಾಶ ಕಲ್ಪಿಸಲು ಕ್ರಮನವದೆಹಲಿ: ವಿದೇಶಗಳ ಮೇಲಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆಯನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಪಡಿಸಿದ ಬೆನ್ನಲ್ಲೇ, ಮುಕ್ತ ವ್ಯಾಪಾರ ಒಪ್ಪಂದ ಸಂಬಂಧ ಭಾರತ ಮತ್ತು ಅಮೆರಿಕ ನಡುವೆ ನಡೆಯಬೇಕಿದ್ದ ಮುಖ್ಯ ಸಂಧಾನಕಾರರ ಮಟ್ಟದ ಸಭೆಯನ್ನು ಮುಂದೂಡಲಾಗಿದೆ.
ಸುಪ್ರೀಂ ಕೋರ್ಟ್ ಹಾಗೂ ಆ ಬಳಿಕ ತೀರ್ಪಿನ ನಂತರದ ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎರಡೂ ದೇಶಗಳು ಸಹಮತದಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಮಾತುಕತೆಗೆ ಸಂಬಂಧಿಸಿ ಇಬ್ಬರಿಗೂ ಸರಿಹೊಂದುವಂಥ ಹೊಸ ದಿನಾಂಕವನ್ನು ಶೀಘ್ರವೇ ಗೊತ್ತು ಮಾಡಲಿವೆ ಎಂದು ಮೂಲಗಳು ತಿಳಿಸಿವೆ.ಭಾರತದ ವಾಣಿಜ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ದರ್ಪನ್ ಜೈನ್ ನೇತೃತ್ವದ ಭಾರತೀಯ ಸಂಧಾನಕಾರರ ತಂಡ ಫೆ.23ರಿಂದ 3 ದಿನಗಳ ಕಾಲ ವ್ಯಾಪಾರ ಒಪ್ಪಂದ ಕುರಿತು ವಾಷಿಂಗ್ಟನ್‌ನಲ್ಲಿ ಮಾತುಕತೆ ನಡೆಸಬೇಕಿತ್ತು. ಈ ತಂಡವು ಪ್ರಸ್ತಾಪಿತ ಮಧ್ಯಂತರ ಒಪ್ಪಂದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಅಂತಿಮಗೊಳಿಸುವ ಕೆಲಸ ಮಾಡಬೇಕಿತ್ತು. ಆದರೆ ಇದೀಗ ಅಮೆರಿಕ ಸುಪ್ರೀಂಕೋರ್ಟ್ ಆದೇಶದಿಂದಾಗಿ ತೆರಿಗೆ ಪ್ರಮಾಣದ ಕುರಿತು ಹೊಸದಾಗಿ ಚರ್ಚೆ, ಚೌಕಾಸಿ ನಡೆಸಬೇಕಾದ ಸಂದರ್ಭ ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳು ಇಂಥದ್ದೊಂದು ನಿರ್ಧಾರಕ್ಕೆ ಬಂದಿವೆ.
ಈ ಮೊದಲಿನ ನಿರ್ಧಾರದ ಅನ್ವಯ ಭಾರತದ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ಹೇರಲು ಅಮೆರಿಕ ನಿರ್ಧರಿಸಿತ್ತು. ಆದರೆ ಭಾರತ ತನ್ನ ನಿರ್ಧಾರ ಬಹಿರಂಗಪಡಿಸಿರಲಿಲ್ಲ.