ವಾಷಿಂಗ್ಟನ್: ಮಂಗಳ ಗ್ರಹದ ಅಧ್ಯಯನಕ್ಕೆ ನಾಸಾ ಕಳುಹಿಸಿರುವ ಪರ್‌ಸರ್ವರನ್ಸ್ ರೋವರ್, ಅಲ್ಲಿನ ಜೆಝೆರೋ ಕುಳಿಯೊಂದರ ತಳದಲ್ಲಿನ ಸರೋವರದ ಕೆಸರನ್ನು ಪರಿಶೀಲಿಸಿದೆ.
ಮಂಗಳ ಗ್ರಹದಲ್ಲಿ ಪುರಾತನ ಸರೋವರ ಇದ್ದದ್ದು ಇದರೊಂದಿಗೆ ಖಚಿತಗೊಂಡಿದೆ. ತನ್ಮೂಲಕ ಕೆಂಪು ಗ್ರಹದಲ್ಲಿ ಜೀವಿಗಳು ಇರಬಹುದು ಎಂಬ ಆಶಾವಾದಕ್ಕೆ ಮತ್ತಷ್ಟು ಬಲ ದೊರೆತಂತಾಗಿದೆ.
ಒಂದು ಹಂತದಲ್ಲಿ ಈ ಕುಳಿ ನೀರಿನಿಂದ ಆವೃತ್ತವಾಗಿತ್ತು. ಅದರ ತಳದಲ್ಲಿ ಹಲವಾರು ಪದರಗಳ ಕೆಸರು ಇತ್ತು ಎಂದು ‘ಸೈನ್ಸ್ ಅಡ್ವಾನ್ಸಸ್’ ಎಂಬ ಜರ್ನಲ್‌ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.
ಕಾಲಾಂತರದಲ್ಲಿ ಸರೋವರ ಬತ್ತಿ ಹೋಗಿದೆ. ಅಲ್ಲಿಗೆ ನೀರನ್ನು ಪೂರೈಸುತ್ತಿದ್ದ ನದಿ ಸೃಷ್ಟಿಸಿರುವ ಕೆಸರು ದೊಡ್ಡ ಕಣಿವೆಯನ್ನು ರಚನೆ ಮಾಡಿದೆ. ಸರೋವರ ಬತ್ತಿದ ಬಳಿಕ ಅದರಲ್ಲಿನ ಕೆಸರು ಕೂಡ ಕರಗಿಹೋಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಒಂದು ಕಾರಿನಷ್ಟು ಗಾತ್ರ ಇರುವ ಈ ರೋವರ್ ತನ್ನ ಒಡಲಲ್ಲಿ 7 ವೈಜ್ಞಾನಿಕ ಸಾಧನಗಳನ್ನು ಇಟ್ಟುಕೊಂಡು 30 ಮೈಲು ಅಗಲವಿರುವ ಕುಳಿಯಲ್ಲಿ ಅಧ್ಯಯನ ನಡೆಸುತ್ತಿದೆ.
ಅದರಲ್ಲಿನ ಭೂಗರ್ಭ, ವಾತಾವರಣಗಳನ್ನು ಅಧ್ಯಯನ ನಡೆಸಿ, 2021ರಿಂದ ಮಾದರಿಗಳನ್ನು ಸಂಗ್ರಹಿಸುತ್ತಿದೆ. ಅದು ಸಂಗ್ರಹಿಸಿರುವ ಮಣ್ಣು ಹಾಗೂ ಕಲ್ಲನ್ನು ಭವಿಷ್ಯದಲ್ಲಿ ಭೂಮಿಗೆ ತಂದು ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.