ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧವನ್ನು ತಡೆಯಲು ನಾನು ಪ್ರಯತ್ನಿಸಿದ್ದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಕಾರ್ಗಿಲ್ ಯುದ್ಧ ನಡೆಯದಂತೆ ಮಾಡಲು ಸಾಕಷ್ಟು ಪ್ರಯತ್ನಪಟ್ಟಿದ್ದೆ. ಇದೇ ಕಾರಣಕ್ಕೆ ಅಂದಿನ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರು ನನ್ನನ್ನು ಸರ್ಕಾರದಿಂದ ಹೊರದೂಡಿದ್ದರು’ ಎಂದು ಹೇಳಿದ್ದಾರೆ. ಅಲ್ಲದೇ ಇದರ ಜೊತೆಗೆ ಪಾಕಿಸ್ತಾನ ಭಾರತ ಸೇರಿದಂತೆ ಇತರ ನೆರೆಯ ದೇಶಗಳೊಂದಿಗೆ ತನ್ನ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.