ಕಾಠ್ಮಂಡು: ಆ.26ರಂದು ನೇಪಾಳದಲ್ಲಿ ಹಿಮಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ದಿನದಿನಕ್ಕೂ ಏರಿಕೆಯಾಗುತ್ತಿದ್ದು, ಸೋಮವಾರದ ಹೊತ್ತಿಗೆ 939ಕ್ಕೆ ತಲುಪಿದೆ. 4250 ಜನ ಇನ್ನೂ ಕಾಣೆಯಾಗಿದ್ದು, ಇವರಲ್ಲಿ 85 ಮಂದಿ ಭದ್ರತಾ ಪಡೆ ಸಿಬ್ಬಂದಿಯಾಗಿದ್ದರೆ, 320 ವಿದೇಶಿಗರಾಗಿದ್ದಾರೆ.
ನೆರೆಪೀಡಿತ ಜಿಲ್ಲೆಗಳಲ್ಲಿ ತುಂಬಿರುವ ಕೆಸರು ಆವೃತ ಅವಶೇಷಗಳಡಿಯಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ಜಾರಿಯಲ್ಲಿದೆ. ಕೆಲ ಜಲವಿದ್ಯುತ್ ಯೋಜನೆಗಳ ತಾಣಗಳಲ್ಲಿದ್ದ ಕಾರ್ಮಿಕರ ಪತ್ತೆ ಸವಾಲಿನ ಕೆಲಸವಾಗಿದ್ದು, 933 ಕೆಲಸಗಾರರನ್ನು ಹುಡುಕಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಭಾರತ ಮತ್ತು ಚೀನಾದಿಂದ ಆಗಮಿಸಿರುವ ತಂಡಗಳು ನೇಪಾಳಿ ತಂಡಗಳಿಗೆ ನೆರವಾಗುತ್ತಿವೆ. ಅಧಿಕಾರಿಗಳ ಪ್ರಕಾರ ತ್ರಿಶೂಲಿ, ಲಾಂಗ್‌ಟಾಂಗ್ ಖೋಲಾ ಸೇರಿದಂತೆ ಕೆಲ ತಾಣಗಳಿಂದ 279 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ 600 ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಸಾಧ್ಯತೆಯಿದೆ. ಭಾರೀ ಉಪಕರಣಗಳು ಮತ್ತು ಸ್ಫೋಟಕಗಳನ್ನು ಬಳಸಿ, ಸುರಂಗದ ಬಾಯಿಗೆ ಅಡ್ಡಲಾಗಿರುವ ಅವಶೇಷಗಳನ್ನು ಸರಿಸಿ, ಒಳಗಿರುವವರನ್ನು ತಲುಪುವ ಯತ್ನಗಳು ನಡೆಯುತ್ತಿವೆ.
ನೆರೆಪೀಡಿತ ಪ್ರದೇಶವಾದ ರಸುವಾದ ಚಿಲಿಮೆ ಎಂಬಲ್ಲಿಂದ ನೇಪಾಳದ ಭದ್ರತಾ ಸಿಬ್ಬಂದಿ 3 ಭಾರತೀಯರು ಹಾಗೂ ಒಬ್ಬ ನೇಪಾಳಿಯನ್ನು ರಕ್ಷಿಸಿದ್ದಾರೆ. ಈ ಬಗ್ಗೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಜತೆಗೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸಲು ದೂತಾವಾಸ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅತ್ತ ರಕ್ಷಣಾ ಕಾರ್ಯದಲ್ಲಿ ನೆರವಾಗಲೆಂದು ನೇಪಾಳಕ್ಕೆ ತೆರಳಿರುವ ಭಾರತೀಯ ತಂಡಗಳು ಭಾನುವಾರದಿಂದ ಕೆಲಸ ಆರಂಭಿಸಿವೆ. ಅವಶೇಷಗಳಡಿ ಸಿಗುತ್ತಿರುವ ಗುರುತು ಪತ್ತೆಯಾಗದ ಮೃತದೇಹಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವ ಕೆಲಸವನ್ನು 19 ಜನರ ವಿಧಿವಿಜ್ಞಾನ ತಂಡವು ಮಾಡುತ್ತಿದೆ. ಅತ್ತ ಸುರಂಗ ರಕ್ಷಣಾ ತಂಡವು ಚಿಲಿಮೆ ಮತ್ತು ಲಾಂಗ್‌ಟಾಂಗ್‌ನಲ್ಲಿರುವ ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ===
ನದಿ ಪಥ ಬದಲು: ಮುಳುಗಿದ ಪುರಾತನ ಸಾಲಿಗ್ರಾಮ
ಕಾಠ್ಮಂಡು: ನೇಪಾಳದಲ್ಲಿ ನದಿ ಹರಿವಿನ ಬದಲಾವಣೆ ಮತ್ತು ನೀರಿನ ಮಟ್ಟ ಏರಿಕೆಯಿಂದಾಗಿ ಲಕ್ಷಾಂತರ ಹಿಂದೂಗಳು ಪೂಜಿಸುವ ಶತಮಾನಗಳಷ್ಟು ಹಳೆಯದಾದ ದೈತ್ಯ ಸಾಲಿಗ್ರಾಮ ಕಲ್ಲಿನ ಮೇಲೆ ಪರಿಣಾಮ ಬೀರಿದೆ. ನೇಪಾಳದ ಗುಲ್ಮಿ, ಸಯಾಂಗ್ಜಾ ಮತ್ತು ಪರ್ಬತ್ ಜಿಲ್ಲೆಗಳ ಸಂಗಮವಾದ ಸೆಟಿಬೆನಿಯಲ್ಲಿರುವ ಈ ಪವಿತ್ರ ಕಲ್ಲು, ಸೇತಿ ನದಿಯ ಪಥ ಬದಲಾವಣೆಯಿಂದಾಗಿ ಮುಳುಗಿದೆ. ಹೀಗಾಗಿ ಯಾತ್ರಿಕರು ಅದನ್ನು ತಲುಪಲು ಕಷ್ಟವಾಗುತ್ತಿದೆ. ದೂರದಿಂದಲೇ ಪ್ರಾರ್ಥನೆ ಸಲ್ಲಿಸಿ ಜನ ಹಿಂದಿರುಗುತ್ತಿದ್ದು, ಇಂಥ ಪವಿತ್ರ ಸ್ಥಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.