ನಿಜ್ಜರ್‌ ಕೇಸ್‌ ಸಂಘರ್ಷ: ಭಾರತ, ಕೆನಡಾ ಸಂಬಂಧಕ್ಕೆ ಎಳ್ಳುನೀರು! ಖಲಿಸ್ತಾನಿ ಉಗ್ರನ ಪರ ನಿಂತು ಮೊಂಡಾಟ

ಸಾರಾಂಶ

ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಕೆನಡಾದ ಜಸ್ಟಿನ್‌ ಟ್ರುಡೋ ನೇತೃತ್ವದ ಸರ್ಕಾರದ ನಿರ್ಧಾರ, ಉಭಯ ದೇಶಗಳ ನಡುವೆ ಭಾರೀ ರಾಜತಾಂತ್ರಿಕ ಸಮರಕ್ಕೆ ಕಾರಣ

ಟೊರಂಟೋ/ನವದೆಹಲಿ: ಕೆನಡಾದಲ್ಲಿ ಸಂಭವಿಸಿದ್ದ ಖಲಿಸ್ತಾನಿ ಉಗ್ರ ಹರ್ದೀಪ್‍ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಕೆನಡಾದ ಜಸ್ಟಿನ್‌ ಟ್ರುಡೋ ನೇತೃತ್ವದ ಸರ್ಕಾರದ ನಿರ್ಧಾರ, ಉಭಯ ದೇಶಗಳ ನಡುವೆ ಭಾರೀ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿದೆ. ಕೆನಡಾ ಸರ್ಕಾರದ ಇಂಥ ನಿರ್ಧಾರದ ಬೆನ್ನಲ್ಲೇ ಕಂಡು ಕೇಳರಿಯದ ಭಾರಿ ಬಿರುಸಿನ ವಿದ್ಯಮಾನ ನಡೆದಿದ್ದು, ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಅಂತ್ಯಗೊಂಡಿದೆ.

ಕೆನಡಾ ನಿರ್ಧಾರ ಖಂಡಿಸಿ ಕೆನಡಾದಿಂದ ಎಲ್ಲ 6 ರಾಜತಾಂತ್ರಿಕರ ವಾಪಸ್‌ಗೆ ಭಾರತ ನಿರ್ಧಾರ ಕೈಗೊಂಡಿದೆ. ಇದರಿಂದ ಅವಮಾನ ಅವಮಾನಕ್ಕೆ ಒಳಗಾದ ಕೆನಡಾ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತನ್ನಲ್ಲಿನ ಎಲ್ಲ 6 ಭಾರತೀಯ ದೂತರ ವಜಾಗೆ ನಿರ್ಧರಿಸಿದೆ. ಸೇರಿಗೆ ಸವ್ವಾಸೇರು ಎಂಬಂತೆ ಭಾರತವು ಇದಕ್ಕೆ ಪ್ರತಿಯಾಗಿ ಭಾರತದಲ್ಲಿನ ಕೆನಡಾ ರಾಯಭಾರಿ ಸ್ಟೀವರ್ಟ್ ರಾಸ್ ವೀಲರ್ ಸೇರಿ ಎಲ್ಲ 6 ರಾಜತಾಂತ್ರಿಕರನ್ನು ಸೆ.19ರ ರಾತ್ರಿ 11.59ರೊಳಗೆ ಭಾರತ ಬಿಡಲು ತಾಕೀತು ಮಾಡಿದೆ.

ಈ ವಿದ್ಯಮಾನಗಳ ಬಳಿಕ ನಿಜ್ಜರ್‌ ಹತ್ಯೆ ಬಳಿಕ ಹಳಸಿದ್ದ ಭಾರತ-ಕೆನಡಾ ಸಂಬಂಧವು ಮತ್ತಷ್ಟು ಹದಗೆಟ್ಟಂತಾಗಿದೆ.

ಆಗಿದ್ದೇನು?:

ನಿಜ್ಜರ್‌ನನ್ನು 2023ರ ಜೂ.18ರಂದು ಕೆನಡಾದ ಸರ್ರೆಯಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿತ್ತು. ಬಳಿಕ ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಹೇಳಿತ್ತು. ಇದು ಎರಡೂ ದೇಶಗಳ ರಾಜತಾಂತ್ರಿಕ ಯುದ್ಧಕ್ಕೆ ನಾಂದಿ ಹಾಡಿತ್ತು.

ಈಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಕೆನಡಾ, ಸೋಮವಾರ ಭಾರತಕ್ಕೆ ರಾಜತಾಂತ್ರಿಕ ಪತ್ರವೊಂದನ್ನು ಕಳಿಸಿ, ‘ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ನಿಜ್ಜರ್‌ ಪ್ರಕರಣದಲ್ಲಿ ‘ಪರ್ಸನ್‌ ಆಫ್‌ ಇಂಟರೆಸ್ಟ್‌’ (ವಿಚಾರಣೆಗೆ ಬೇಕಾದ ವ್ಯಕ್ತಿಗಳು)’ ಎಂದು ಹೆಸರಿಸಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಇಲಾಖೆ ದಿಲ್ಲಿಯಲ್ಲಿನ ಕೆನಡಾ ರಾಯಭಾರಿ ವೀಲರ್‌ರನ್ನು ಸೋಮವಾರ ಸಂಜೆ ಕರೆಸಿಕೊಂಡು, ‘ನಿಮ್ಮ ಆರೋಪ ಸುಳ್ಳು. ಕೆನಡಾದಲ್ಲಿ ಭಾರತೀಯ ರಾಜತಾಂತ್ರಿಕ ಸಿಬ್ಬಂದಿಯ ಜೀವ ಸುರಕ್ಷಿತವಾಗಿಲ್ಲ. ಜಸ್ಟಿನ್‌ ಟ್ರುಡೋ ಸರ್ಕಾರದ ನಡೆಯಿಂದ ಅವರ ಜೀವ ಅಪಾಯದಲ್ಲಿದೆ. ಹೀಗಾಗಿ ಅವರನ್ನು ಸ್ವದೇಶಕ್ಕೆ ವಾಪಸ್‌ ಕರೆಸಿಕೊಳ್ಳುತ್ತಿದ್ದೇವೆ’ ಎಂದು ಖಡಕ್ಕಾಗಿ ಹೇಳಿದೆ.

ಅಲ್ಲದೆ, ‘ಈ ಹಿಂದೆ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದಾಗ ನಾವು, ‘ಸಾಕ್ಷ್ಯ ನೀಡಿ. ಪರಿಶೀಲಿಸುತ್ತೇವೆ’ ಎಂದಿದ್ದೆವು. ಆದರೆ ಕೆನಡಾ ಸಾಕ್ಷ್ಯ ನೀಡದೇ ಏಕಾಏಕಿ ಭಾರತದ ರಾಯಭಾರಿಗಳ ವಿಚಾರಣೆಗೆ ಮುಂದಾಗಿದೆ. ಹೀಗಾಗಿ ಇದು ರಾಜಕೀಯ ಲಾಭ ಪಡೆಯಲು ಕೈಗೊಂಡ ಕ್ರಮ ಎಂಬುದು ಸಾಬೀತಾಗಿದೆ. ನಾವು ಕೆನಡಾದ ಇಂಥ ತಂತ್ರಕ್ಕೆ ಮಣಿಯಲ್ಲ’ ಎಂದು ಭಾರತ ಕಿಡಿಕಾರಿದೆ.

ಆದರೆ ಇದರ ಬೆನ್ನಲ್ಲೇ ಭಾರತವು ವಾಪಸು ಕರೆಸಿಕೊಳ್ಳುವ ಘೋಷಣೆ ಮಾಡಿದ್ದ ಭಾರತದ ರಾಯಭಾರಿ ಸಂಜಯ ವರ್ಮಾ ಸೇರಿ ‘6 ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸಲಾಗಿದೆ’ ಎಂದು ಕೆನಡಾ ಹೇಳಿದೆ. ಭಾರತ ಕೂಡ ಇದಾದ ಬಳಿಕ ಪ್ರಕಟಣೆ ಹೊರಡಿಸಿ ರಾಯಭಾರಿ ವೀಲರ್‌ ಸೇರಿ 6 ಕೆನಡಾ ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸಿದೆ.

ಸಾಕ್ಷ್ಯ ನೀಡಿದ್ದೇವೆ- ಕೆನಡಾ ಮೊಂಡು ವಾದ:

ಈ ನಡುವೆ ಸೋಮವಾರ ಭಾರತದ ವಿದೇಶಾಂಗ ಇಲಾಖೆ ಮುಂದೆ ಹಾಜರಾಗಿದ್ದ ಕೆನಡಾ ರಾಯಭಾರಿ ಸ್ಟೀವರ್ಟ್‌ ರಾಸ್‌ ವೀಲರ್‌, ‘ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರದ ಬಗ್ಗೆ ತಿರಸ್ಕರಿಸಲಾಗದಂಥ ಸಾಕ್ಷ್ಯಗಳನ್ನು ನಾವು ಈಗಾಗಲೇ ಭಾರತಕ್ಕೆ ಹಸ್ತಾಂತರ ಮಾಡಿದ್ದೇವೆ. ಹೀಗಾಗಿ ಈ ಹಿಂದೆ ಭರವಸೆ ನೀಡಿದಂತೆ ನಡೆದುಕೊಳ್ಳುವ ಹೊಣೆ ಭಾರತದ ಮೇಲಿದೆ’ ಎಂದು ಹೇಳಿದ್ದಾರೆ.

ಏನಿದು ಸಂಘರ್ಷ?

- ಕಳೆದ ವರ್ಷ ಸಂಭವಿಸಿದ್ದ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕೇಸಲ್ಲಿ ಭಾರತದ ರಾಯಭಾರಿಯ ತನಿಖೆಗೆ ನಿರ್ಧರಿಸಿದ ಕೆನಡಾ ಸರ್ಕಾರ

- ಭಾರತದ ಆಕ್ರೋಶ: ಕೆನಡಾದಿಂದ ಎಲ್ಲ 6 ರಾಜತಾಂತ್ರಿಕರ ವಾಪಸ್‌ಗೆ ನಿರ್ಧಾರ

- ಅದರ ಬೆನ್ನಲ್ಲೇ ಎಲ್ಲ 6 ಭಾರತೀಯ ರಾಜತಾಂತ್ರಿಕರನ್ನೂ ಉಚ್ಚಾಟಿಸಿದ ಕೆನಡಾ

- ಭಾರತದಿಂದಲೂ ಸಡ್ಡು: ಇಲ್ಲಿರುವ ಎಲ್ಲ 6 ಕೆನಡಾ ರಾಜತಾಂತ್ರಿಕರ ಉಚ್ಚಾಟನೆ

- ಹೀಗಾಗಿ ಭಾರತ ಮತ್ತು ಕೆನಡಾ ನಡುವೆ ಇದ್ದ ರಾಜತಾಂತ್ರಿಕ ಸಂಬಂಧವೇ ಅಂತ್ಯ

Share this article