1000 ಕಿ.ಮೀ ದೂರದ ಪ್ರಯಾಣಕ್ಕೂ ಉ.ಕೊರಿಯಾ ಅಧ್ಯಕ್ಷನಿಂದ ರೈಲು ಬಳಕೆಬೀಜಿಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜೊಂಗ್ ಉನ್, ಚೀನಾದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಂಗಳವಾರ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದರು. ವಿಶೇಷವೆಂದರೆ ಕಿಮ್ ಹೀಗೆ ಆಗಮಿಸಿದ್ದು ವಿಶೇಷ ಬುಲೆಟ್ ಪ್ರೂಫ್ ರೈಲಿನಲ್ಲಿ!
ಹೌದು. ಉ.ಕೊರಿಯಾ ರಾಜಧಾನಿ ಪ್ಯೋಂಗ್ಯಾಂಗ್‌ನಿಂದ ಬೀಜಿಂಗ್‌ಗೆ ಹೆಚ್ಚು ಕಡಿಮೆ 1000 ಕಿ.ಮೀ ದೂರವಿದೆ. ಈ ಪೂರ್ಣ ದೂರವನ್ನು ಅವರು ತಮ್ಮ ವಿಶೇಷ ರೈಲಿನಲ್ಲೇ ಕ್ರಮಿಸಿದ್ದಾರೆ.ರೈಲಿನಲ್ಲೇ ಏಕೆ?:
ಉ.ಕೊರಿಯಾ ಬಳಿ ಅತ್ಯಾಧುನಿಕ ವಿಮಾನಗಳಿಲ್ಲ. ಜೊತೆಗೆ ಕಿಮ್‌ಗೆ ವಿಮಾನ ಪ್ರಯಾಣ ಭಯ. ಹೀಗಾಗಿ 2011ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶದೊಳಗೆ ದೂರ ಪ್ರದೇಶಕ್ಕೆ ಸಂಚರಿಸಲು, ಮಿತ್ರ ದೇಶಗಳಾದ ರಷ್ಯಾ, ಚೀನಾ, ವಿಯೆಟ್ನಾಂಗೆ ಸಂಚರಿಸಲು ಅವರು ರೈಲನ್ನೇ ಬಳಸುತ್ತಾರೆ.ಎಲ್ಲಾ ಸೌಲಭ್ಯ:
ಹಲವು ಬೋಗಿಗಳನ್ನು ಒಳಗೊಂಡ ಈ ವಿಶೇಷ ಬುಲೆಟ್ ಪ್ರೂಫ್ ರೈಲನ್ನು ಕೇವಕ ಕಿಮ್ ಮಾತ್ರ ಬಳಸುತ್ತಾರೆ. ಅದರೊಳಗೆ ಮೀಟಿಂಗ್ ಹಾಲ್, ಔತಣ ಕೊಠಡಿ, ಭದ್ರತಾ ಸಿಬ್ಬಂದಿ ಇರಲು ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇವೆ. ಕೊರಿಯಾದ ರೀತಿಯಲ್ಲೇ ಚೀನಾದ ರೈಲು ಹಳಿ ವ್ಯವಸ್ಥೆ ಇರುವ ಕಾರಣ ಚೀನಾದೊಳಗೆ ಕಿಮ್ ರೈಲು ಸಂಚಾರಕ್ಕೆ ಅಡ್ಡಿ ಇಲ್ಲ. ಆದರೆ ರಷ್ಯಾದಲ್ಲಿ ಹಳಿ ವ್ಯವಸ್ಥೆ ಬೇರೆ ಇರುವ ಕಾರಣ, ಈ ಹಿಂದೆ ರಷ್ಯಾ ಗಡಿಗೆ ಕಿಮ್ ರೈಲು ಪ್ರವೇಶ ಮಾಡಿದ ಬಳಿಕ ಅದರ ಚಕ್ರಗಳ ವ್ಯವಸ್ಥೆಯನ್ನೇ ಬದಲಾಯಿಸಲಾಗಿತ್ತು.ಈ ಹಿಂದೆಯೂ ಸಂಚಾರ:
2023ರಲ್ಲಿ ರಷ್ಯಾಕ್ಕೆ ಕೂಡಾ ಕಿಮ್ ರೈಲಲ್ಲೇ ಹೋಗಿದ್ದರು. ಬಳಿಕ ಡೊನಾಲ್ಡ್ ಟ್ರಂಪ್‌ರನ್ನು ವಿಯೆಟ್ನಾಂನಲ್ಲಿ ಭೇಟಿ ಮಾಡಲು ರೈಲಿನಲ್ಲೇ 60 ಗಂಟೆ ಪ್ರಯಾಣ ಕೈಗೊಂಡಿದ್ದರು. ಅದಕ್ಕೂ ಮುನ್ನ 2018ರಲ್ಲಿ ಸಿಂಗಾಪುರದಲ್ಲಿ ಟ್ರಂಪ್ ಭೇಟಿಗೆ ಚೀನಾ ನೀಡಿದ್ದ ವಿಮಾನದಲ್ಲಿ ತೆರಳಿದ್ದರು.