ಟಿಯಾನ್‌ಜಿನ್ (ಚೀನಾ) : ತೆರಿಗೆ ದಾಳಿಯ ಮೂಲಕ ಜಾಗತಿಕ ಸಮುದಾಯವನ್ನು ತನ್ನ ಹಿಡಿತಕ್ಕೆ ತರಲು ಯತ್ನಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ, ಚೀನಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಶೃಂಗದ ವೇದಿಕೆ ಮೂಲಕ ಮೂಲಕ ಭಾರತ- ಚೀನಾ-ರಷ್ಯಾ ತಮ್ಮ ಒಗ್ಗಟ್ಟಿನ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿವೆ.
ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಈ ಶೃಂಗದಲ್ಲಿ ಒಟ್ಟಾಗಿದ್ದು, ಸಭೆಯ ಪಾರ್ಶ್ವದಲ್ಲಿ ಟ್ರಂಪ್ ಅವರ ತೆರಿಗೆ ಬೆದರಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ. ಅಲ್ಲದೆ, ಕ್ಸಿ ಅವರು ನೇರವಾಗಿಯೇ ‘ಕೆಲವು ದೇಶಗಳ ಶೀತಲ ಸಮರದ ಮನಸ್ಥಿತಿ ವಿರುದ್ಧ ಕೆಲಸ ಮಾಡಿ’ ಎಂದು ಶೃಂಗದಲ್ಲಿ ಹೇಳಿದ್ದಾರೆ. ಈ ಮೂಲಕ ಟ್ರಂಪ್‌ಗೆ ಜಂಟಿ ಟಕ್ಕರ್ ನೀಡಿದ್ದಾರೆ.
ಟಾರ್ಗೆಟ್ ಟ್ರಂಪ್!:
ಎರಡು ದಿನಗಳ ಕಾಲ ನಡೆದ ಶೃಂಗದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಡುವಿನ ಆಪ್ತತೆ, ರಷ್ಯಾ ಅಧ್ಯಕ್ಷ ಪುಟಿನ್ ಸ್ವತಃ ತಮ್ಮ ಕಾರಲ್ಲೇ ಮೋದಿಯನ್ನು ಕೂರಿಸಿ ರಹಸ್ಯ ಸಭೆ ನಡೆಸಿದ್ದು, ಮೂವರೂ ನಾಯಕರು ಒಂದೇ ಫೋಟೋದಲ್ಲಿ ಆತ್ಮೀಯತೆಯಿಂದ ಮಾತನಾಡಿದ್ದು, ಅಮೆರಿಕದ ಬೆದರಿಸುವ ತೆರಿಗೆ ನೀತಿಯ ಬಗ್ಗೆ ಸ್ವತಃ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಕಟುನುಡಿಗಳ ಗುರಿ ನೇರವಾಗಿ ವಾಷಿಂಗ್ಟನ್‌ನತ್ತ ನೆಟ್ಟಿದ್ದು ಕಂಡುಬಂತು.
ಶಾಂಘೈ ಸಹಕಾರ ಶೃಂಗದ ಬಗ್ಗೆ ಸಾಮಾನ್ಯವಾಗಿ ಹೆಚ್ಚಿನ ಗಮನ ಹರಿಸದ ಅಮೆರಿಕದ ಪ್ರತಿಷ್ಠಿತ ಮಾಧ್ಯಮಗಳು ಕೂಡಾ ‘ಈ ಮೂವರು ನಾಯಕರ ಮಹಾಸಂಗಮವು ಟ್ರಂಪ್‌ರನ್ನೇ ಉದ್ದೇಶಿಸಿತ್ತು’ ಎಂದು ವಿಶ್ಲೇಷಿಸುವ ಮೂಲಕ ತ್ರಿವಳಿ ನಾಯಕರ ಒಗ್ಗಟ್ಟು ಫಲ ಕೊಟ್ಟಿದೆ ಎಂದು ವಿಶ್ಲೇಷಿಸಿವೆ.
ಸೀಕ್ರೆಟ್ ಕಾರ್ ಟೂರ್:
ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಭಾರತದ ಪ್ರಧಾನಿ ಮೋದಿ ನೇರವಾಗಿ ಅಮೆರಿಕದ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲವಾದರೂ, ಶೃಂಗದ ವೇಳೆ ಇಬ್ಬರ ನಾಯಕರ ಅಪ್ಪುಗೆ, ಕಾರಿನಲ್ಲಿ ಇಬ್ಬರೂ ಪ್ರತ್ಯೇಕವಾಗಿ ಪ್ರಯಾಣ ಕೈಗೊಂಡು ನಡೆಸಿದ ರಹಸ್ಯ ಮಾತುಕತೆಯೇ ಟ್ರಂಪ್‌ಗೆ ಸ್ಪಷ್ಟ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ.
ಚೀನಾ ಕಿಡಿ:ಸೋಮವಾರ ಶೃಂಗ ಉದ್ದೇಶಿಸಿ ಮಾತನಾಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ‘ನಾವು ಪಾರದರ್ಶಕತೆ ಮತ್ತು ನ್ಯಾಯವನ್ನು ಉತ್ತೇಜಿಸಬೇಕು. ಶೀತಲ ಸಮರದ ಮನಸ್ಥಿತಿ, ಬೆದರಿಕೆ ನಡವಳಿಕೆಯನ್ನು ವಿರೋಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಕರೆ ನೀಡುವ ಮೂಲಕ ಜಾಗತಿಕ ಸಮುದಾಯದ ಮೇಲೆ ತೆರಿಗೆ ದಾಳಿ ನಡೆಸುತ್ತಿರುವ ಟ್ರಂಪ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು,ಮೋದಿ, ಪುಟಿನ್ ಮತ್ತು ಜಿನ್‌ಪಿಂಗ್ ತೋರಿದ ಒಗ್ಗಟ್ಟು ಅಮೆರಿಕದ ತೆರಿಗೆ ಯುದ್ಧವನ್ನು ತಡೆಯುವಲ್ಲಿ ಜಗತ್ತಿನ ಮೂರು ಪ್ರಮುಖ ದೇಶಗಳ ನಾಯಕರ ಇಚ್ಚಾಶಕ್ತಿಗೆ ಉದಾಹರಣೆಯಾಗಿ ಹೊರಹೊಮ್ಮಿದೆ.
ಹೀಗಾಗಿ ಈ ಶೃಂಗ ಸಹಜವಾಗಿಯೇ ಅಧ್ಯಕ್ಷ ಟ್ರಂಪ್ ಮೇಲೆ ಒತ್ತಡ ಹೇರಲಿದೆ. ಜೊತೆಗೆ ಈ ಬೆಳವಣಿಗೆ ಒಂದು ದೇಶದ ವಿರುದ್ಧ ಇನ್ನೊಂದು ದೇಶವನ್ನು ಎತ್ತಿಕಟ್ಟಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಮೆರಿಕಕ್ಕೆ ಹೊಸ ನೀತಿ ಪಾಠವಾಗಲಿದೆ. ಜಾಗತಿಕ ಮಟ್ಟದಲ್ಲಿ ಅಮೆರಿಕ ವಿರುದ್ಧ ಹೊಸ ಮೈತ್ರಿಗೆ ನಾಂದಿ ಹಾಡಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.