ಈಗ ಅಮೆರಿಕ - ಇರಾನ್‌ ಷರತ್ತಿನ ಸಮರ

Published : Mar 26, 2026, 06:45 AM IST
iran us israel conflict

ಸಾರಾಂಶ

ಮಧ್ಯಪ್ರಾಚ್ಯ ಕದನ ವಿರಾಮಕ್ಕೆ ಉತ್ಸುಕತೆ ತೋರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅದನ್ನು ಜಾರಿಗೊಳಿಸಲು ಶತ್ರುದೇಶ ಇರಾನ್‌ ಮುಂದೆ 15 ಷರತ್ತುಗಳನ್ನು ಒಡ್ಡಿದ್ದಾರೆ. ಇದರಲ್ಲಿ ಇರಾನ್ ಅಣ್ವಸ್ತ್ರ ತ್ಯಾಗ ಹಾಗೂ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಸೇರಿದೆ.

ವಾಷಿಂಗ್ಟನ್‌/ ಟೆಹ್ರಾನ್‌: ಮಧ್ಯಪ್ರಾಚ್ಯ ಕದನ ವಿರಾಮಕ್ಕೆ ಉತ್ಸುಕತೆ ತೋರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅದನ್ನು ಜಾರಿಗೊಳಿಸಲು ಶತ್ರುದೇಶ ಇರಾನ್‌ ಮುಂದೆ 15 ಷರತ್ತುಗಳನ್ನು ಒಡ್ಡಿದ್ದಾರೆ. ಇದರಲ್ಲಿ ಇರಾನ್ ಅಣ್ವಸ್ತ್ರ ತ್ಯಾಗ ಹಾಗೂ ಹೋರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಸೇರಿದೆ. ಇದಕ್ಕೆ ಒಪ್ಪಿದರೆ ಇರಾನ್‌ ಮೇಲಿನ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸೇರಿ ಹಲವು ಆಫರ್‌ಗಳನ್ನೂ ಮುಂದಿಟ್ಟಿದ್ದಾರೆ.

ಆದರೆ, ಈ ಪ್ರಸ್ತಾಪವನ್ನು ತಿರಸ್ಕರಿಸಿರುವ ಇರಾನ್‌ ತಾನೂ ಕೂಡ ಕದನ ನಿಲ್ಲಿಸಲು 8 ಪ್ರತಿ ಷರತ್ತುಗಳನ್ನು ಒಡ್ಡಿದೆ. ಕೊಲ್ಲಿ ರಾಷ್ಟ್ರಗಳಲ್ಲಿ ಅಮೆರಿಕ ಸೇನಾ ನೆಲೆಗಳನ್ನು ಬಂದ್ ಮಾಡುವುದು, ಹೋರ್ಮುಜ್‌ ಜಲಸಂಧಿಯ ಸಾರ್ವಭೌಮತೆಗೆ ಅಮೆರಿಕ ಮನ್ನಣೆ ನೀಡುವುದು ಮತ್ತು ದಾಳಿಯಿಂದಾದ ಹಾನಿಯ ವೆಚ್ಚವನ್ನು ಭರಿಸುವುದು ಸೇರಿದಂತೆ ಹಲವು ಷರತ್ತುಗಳಿಗೆ ಒಪ್ಪಿದರೆ ಮಾತ್ರ ಶಾಂತಿ ಮಾತುಕತೆಗೆ ಬರುವುದಾಗಿ ಸ್ಪಷ್ಟಪಡಿಸಿದೆ.

ಟ್ರಂಪ್ 15 ಅಂಶದ ಪ್ರಸ್ತಾಪ:

ಟ್ರಂಪ್‌ ಅವರು ಇರಾನ್‌ ಮುಂದೆ 15 ಅಂಶದ ಪ್ರಸ್ತಾಪ ಇರಿಸಿದ್ದು, ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಒಲವು ತೋರಿದ್ದ ಪಾಕಿಸ್ತಾನದ ಮುಖಾಂತರ ಈ ಷರತ್ತಿನ ಪತ್ರವನ್ನು ಹಸ್ತಾಂತರಿಸಿದ್ದು ವಿಶೇಷ.

ಮಾತುಕತೆ ನಡೆಸಲು 1 ತಿಂಗಳು ಯುದ್ಧವಿರಾಮ ಜಾರಿಯಾಗಬೇಕು, ಇರಾನ್‌ ಪರಮಾಣು ಸಾಮರ್ಥ್ಯವನ್ನು ಸಂಪೂರ್ಣವಾಗಿ ತ್ಯಜಿಸಬೇಕು, ಹೋರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸಬೇಕು, ಸಶಸ್ತ್ರ ಗುಂಪುಗಳಿಗೆ ನೆರವು ನಿಲ್ಲಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಟ್ರಂಪ್‌ ವಿಧಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ನಿರ್ಬಂಧ ತೆರವು ಸೇರಿದಂತೆ ಹಲವು ಆಫರ್‌ಗಳನ್ನು ನೀಡಿದ್ದಾರೆ.

8 ಷರತ್ತು ವಿಧಿಸಿ ಇರಾನ್‌ ತಿರಸ್ಕಾರ:

ಆದರೆ ಟ್ರಂಪ್ ಪ್ರಸ್ತಾಪವನ್ನು ಇರಾನ್ ತಿರಸ್ಕರಿಸಿದ್ದು, ತನ್ನ ಷರತ್ತುಗಳನ್ನು ಪೂರೈಸಿದರೆ ಮಾತ್ರ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವುದಾಗಿ ಹೇಳಿದೆ. ಕದನ ವಿರಾಮಕ್ಕೆ ಕಾಲಮಿತಿಯನ್ನು ಹಾಕುವ ಟ್ರಂಪ್‌ ನಡೆ ಅಕ್ಷಮ್ಯ. ಅವರ ಪ್ರಸ್ತಾಪಗಳು ಅತಿರೇಕದಿಂದ ಕೂಡಿವೆ ಎಂದಿದೆ.

‘ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವು ಇರಾನ್‌ಗೆ ಮಾತ್ರ ಬಿಟ್ಟದ್ದು. ಯುದ್ಧದ ಅಂತ್ಯದ ಸಮಯವನ್ನು ನಿರ್ದೇಶಿಸಲು ಟ್ರಂಪ್‌ಗೆ ನಾವು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಮಧ್ಯಪ್ರಾಚ್ಯದಲ್ಲಿನ ತನ್ನೆಲ್ಲ ನೆಲೆಗಳನ್ನು ಅಮೆರಿಕ ತೆರವು ಮಾಡಬೇಕು. ಹೋರ್ಮುಜ್ ಜಲಸಂಧಿಯ ಮೇಲಿನ ತನ್ನ ಸಾರ್ವಭೌಮತ್ವವನ್ನು ಅಮೆರಿಕ ಗುರುತಿಸಬೇಕು. ಅದು ನಮ್ಮ ನೈಸರ್ಗಿಕ, ಕಾನೂನುಬದ್ಧ ಹಕ್ಕು. ಯುದ್ಧದ ಹಾನಿಯನ್ನು ಅಮೆರಿಕ ಭರಿಸಬೇಕು. ಇನ್ನು ಯುದ್ಧ ಮರುಕಳಿಸದಂತೆ ಅಮೆರಿಕ ಖಚಿತ ಭರವಸೆ ನೀಡಬೇಕು. ತನ್ನ ಮೇಲಷ್ಟೇ ಅಲ್ಲ, ಇರಾನ್‌ನಲ್ಲಿನ ಅಮೆರಿಕ ವಿರೋಧಿಗಳ ಮೇಲೂ ದಾಳಿ ಮಾಡಬಾರದು. ನಮ್ಮ ಎಲ್ಲಾ ಷರತ್ತುಗಳು ಪೂರೈಸುವವರೆಗೆ ರಕ್ಷಣಾತ್ಮಕ ಕಾರ್ಯಾಚರಣೆ ಮುಂದುವರಿಯುತ್ತವೆ’ ಟೆಹ್ರಾನ್ ಸ್ಪಷ್ಟಪಡಿಸಿದೆ.

ಅಮೆರಿಕದ ಇತರೆ ಷರತ್ತುಗಳು

- ಅಮೆರಿಕದಲ್ಲಿನ ಇರಾನ್‌ ಬೆಂಬಲಿತ ಚಟುವಟಿಕೆಗೆ ಬ್ರೇಕ್‌- ಸಶಸ್ತ್ರ ಗುಂಪುಗಳಿಗೆ ಬೆಂಬಲ ಕೊನೆಗೊಳಿಸುವುದು

- ಕ್ಷಿಪಣಿಗಳ ವ್ಯಾಪ್ತಿ, ಸಂಖ್ಯೆಯ ಮೇಲೆ ಮಿತಿ

- ಸ್ವರಕ್ಷಣೆಗಾಗಿ ಭವಿಷ್ಯದ ಕ್ಷಿಪಣಿ ಬಳಕೆ ನಿರ್ಬಂಧ

- ಆತ್ಮರಕ್ಷಣೆಗೆ ಮಾತ್ರ ಸೇನೆ, ದಾಳಿ ಉದ್ದೇಶಕ್ಕಿಲ್ಲ

ಅಮೆರಿಕದ ಷರತ್ತು

1. ಒಪ್ಪಂದದ ಚರ್ಚೆಗೆ 1 ತಿಂಗಳ ಕದನ ವಿರಾಮ

2. ಇರಾನ್‌ ಅಣು ಸಾಮರ್ಥ್ಯ ಕಡಿತಗೊಳಿಸಬೇಕು

3. ಯುರೇನಿಯಂ ಸಂಸ್ಕರಣೆಯನ್ನು ನಿಲ್ಲಿಸಬೇಕು

4. ಹೋರ್ಮುಜ್ ಜಲಸಂಧಿ ಮುಕ್ತಗೊಳಿಸಬೇಕು

5. 3 ಅಣು ಘಟಕ ಬಂದ್‌, ಎಎಇಎ ತಪಾಸಣೆಗೆ ಮುಕ್ತ

ಇರಾನ್‌ನ ಪ್ರತಿ ಷರತ್ತು

1. ಕೊಲ್ಲಿಯಲ್ಲಿನ ಅಮೆರಿಕದ ಎಲ್ಲಾ ಸೇನಾ ನೆಲೆ ಬಂದ್‌

2. ದಾಳಿಯಿಂದಾದ ನಷ್ಟವನ್ನು ಅಮೆರಿಕ ಭರಿಸಬೇಕು

3. ಹೋರ್ಮುಜ್‌ ಮೇಲಿನ ಸಾರ್ವಭೌಮತೆ ಒಪ್ಪಬೇಕು

4, ಹೋರ್ಮುಜ್‌ನಲ್ಲಿ ಹಡಗುಗಳಿಂದ ಶುಲ್ಕ ಸಂಗ್ರಹ

5. ಮತ್ತೆ ಯುದ್ಧ ಮಾಡದ ಬಗ್ಗೆ ಭರವಸೆ ನೀಡಬೇಕು

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಟ್ರಂಪ್ ಅಳಿಯ ಬೇಡ, ವ್ಯಾನ್ಸ್ ಜತೆ ಮಾತುಕತೆಗೆ ಸಿದ್ಧ : ಇರಾನ್‌
ಪರಮಾಣು ಶಸ್ತ್ರಾಸ್ತ್ರ ತ್ಯಾಗಕ್ಕೆ ಇರಾನ್‌ ಒಪ್ಪಿದೆ : ಟ್ರಂಪ್‌