ಕಾಠ್ಮಂಡು : ನೇಪಾಳದಲ್ಲಿ ಭ್ರಷ್ಟಾಚಾರ ಮತ್ತು 26 ಸಾಮಾಜಿಕ ಜಾಲತಾಣ ವೇದಿಕೆಗಳ ನಿಷೇಧ ವಿರೋಧಿಸಿ ‘ಜೆನ್-ಝೀ’ ನಡೆಯುತ್ತಿದ್ದ ಯುವಕರ ಹಾಗೂ ಜನತೆಯ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಮತ್ತೊಂದು ದಿಕ್ಕಿಗೆ ಹೊರಳಿದೆ. ಪ್ರಧಾನಿ ಹಾಗೂ ಜನಪ್ರತಿನಿಧಿಗಳ ಮೇಲೆ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ ದುರಾಡಳಿತದ ಆರೋಪ ಹೊರಿಸಿದ ಜನತೆ ಸಂಸತ್ ಭವನ, ಅಧ್ಯಕ್ಷರ ಕಚೇರಿ, ಹಾಗೂ ಪ್ರಧಾನಿ ಖಾಸಗಿ ನಿವಾಸ, ಸಚಿವರ ಮನೆಗಳು, ಅಧ್ಯಕ್ಷೀಯ ಕಚೇರಿ- ಇತ್ಯಾದಿ ಮೇಲೆ ದಾಳಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಸೇನೆಯು ಪ್ರಧಾನಿ ಅನುಪಸ್ಥಿತಿಯಲ್ಲಿ ದೇಶದ ಭದ್ರತೆ ಹೊಣೆ ಹೊತ್ತಿದ್ದೇವೆ ಎಂದು ಸೇನೆ ಘೋಷಿಸಿದೆ. ಈ ದಂಗೆ ಇತ್ತೀಚಿನ ಬಾಂಗ್ಲಾದೇಶ, ಸಿರಿಯಾ ಹಾಗೂ ಶ್ರೀಲಂಕಾ ದಂಗೆ ನೆನಪಿಸಿದೆ.
ನಿನ್ನೆ ಮಹಾದಂಗೆ:
ನೇಪಾಳ ಸರ್ಕಾರ ಫೇಸ್ಬುಕ್, ಎಕ್ಸ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸೇರಿದಂತೆ 26 ಆ್ಯಪ್‌ಗಳ ಮೇಲೆ ನಿಷೇಧ ಹೇರಿತ್ತು. ಇದನ್ನು ವಿರೋಧಿಸಿ ಯುವಕರು ‘ಜೆನ್ ಝೀ’ (ಯುವಕರ ಹೋರಾಟ) ಪ್ರತಿಭಟನೆ ಆರಂಭಿಸಿದ್ದರು. ಸೋಮವಾರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿ, 20 ಜನ ಸಾವನ್ನಪ್ಪಿದರೆ, 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬಳಿಕ ಸರ್ಕಾರ ಆ್ಯಪ್‌ಗಳ ಮೇಲಿನ ನಿಷೇಧವನ್ನು ಹಿಂಪಡೆದಿತ್ತು. ಇದಕ್ಕೂ ಬಗ್ಗದ ಪ್ರತಿಭಟನಕಾರರು ಪ್ರಧಾನಮಂತ್ರಿ ಕಚೇರಿಗೆ ತೆರಳಿ, ಘೋಷಣೆಗಳನ್ನು ಕೂಗುತ್ತಾ, ‘ಭ್ರಷ್ಟಾಚಾರಿ ಆಗಿರುವ ಹಾಗೂ 20 ಯುವಕರ ಸಾವಿಗೆ ಕಾರಣ ಆಗಿರುವ ಪ್ರಧಾನಿ ಓಲಿ ರಾಜೀನಾಮೆ ನೀಡಬೇಕು’ ಎಂದು ಪಟ್ಟು ಹಿಡಿದಿದರು. ಸಂಸತ್ ಭವನ ಹಾಗೂ ಹಲವು ಮಂತ್ರಿಗಳ ಮನೆಗಳಗೆ ಬೆಂಕಿ ಹಚ್ಚಿದದರು.
ನೂರಾರು ಪ್ರತಿಭಟನಕಾರರು ಸಂಸತ್ ಕಟ್ಟಡದ ಆವರಣಕ್ಕೆ ನುಗ್ಗಿ, ಮುಖ್ಯ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಭವನದ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಪ್ರತಿಭಟನಕಾರರು ಮತ್ತು ದಟ್ಟ ಹೊಗೆಯಿಂದ ಆವೃತವಾದ ಸಂಸತ್ ಭವನದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರ್ಗಮಿತ ಪ್ರಧಾನಿ ಓಲಿ, ಅಧ್ಯಕ್ಷ ರಾಮಚಂದ್ರ ಪೌಡೇಲ್ ಅವರ ಖಾಸಗಿ ನಿವಾಸ, ಪ್ರಧಾನಿ ಪುಷ್ಪ ಕಮಲ್ ದಹಲ್, ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ್, ಮಾಜಿ ಗೃಹ ಸಚಿವ ರಮೇಶ್ ಲೇಖಕ್ ಅವರ ಮನೆಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದರು. ಲಲಿತಪುರ ಜಿಲ್ಲೆಯ ಸುನಕೋಠಿಯಲ್ಲಿರುವ ಸಂವಹನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಅವರ ನಿವಾಸದ ಮೇಲೆ ಯುವಕರು ಕಲ್ಲು ತೂರಾಟ ನಡೆಸಿದರು. ಗುರುಂಗ್ ಅವರು ಸಾಮಾಜಿಕ ಮಾಧ್ಯಮಗಳನ್ನು ನಿಷೇಧಿಸಲು ಆದೇಶಿಸಿದ್ದರು.
ಕಾಠ್ಮಂಡುವಿನ ಬುಧನಿಲ್ಕಾಂತದಲ್ಲಿರುವ ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ, ಇಂಧನ ಸಚಿವ ದೀಪಕ್ ಖಡ್ಕಾ ಅವರ ಮನೆಯನ್ನು ಸಹ ಧ್ವಂಸಗೊಳಿಸಿದರು. ದೇವುಬಾ ಮೇಲೆ ಹಲ್ಲೆ ಆಗಿದ್ದು ರಕ್ತ ಸುರಿಸುತ್ತಿದ್ದರು. ಮಾಜಿ ಪ್ರಧಾನಿ ಜಲನಾಥ್ ಖಾನಲ್ ಅವರ ಮನೆಯ ಮೇಲೆ ಪ್ರತಿಭಟನಾನಿರತ ಯುವಕರು ಬೆಂಕಿ ಹಚ್ಚಿದ ಪರಿಣಾಮ ಖಾನಲ್ ಅವರ ಪತ್ನಿ ರಾಜ್ಯಲಕ್ಷ್ಮಿ ಚಿತ್ರಾಕರ್ ಸಜೀವ ದಹನವಾದರು.
ನೇಪಾಳ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌಡೇಲ್ ಮೇಲೆ ಜನರು ಮುಗಿಬಿದ್ದು ಹಿಂಸಾತ್ಮಕ ದಾಳಿ ಮಾಡಿದರು. ಆಗ ಪೌಡೇಲ್ ಓಡಿ ಹೋದರು.
ರಾಜೀನಾಮೆ:
ಹಿಂಸೆ ಮಿತಿ ಮೀರುತ್ತಿದ್ದಂತೆಯೇ ಓಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಪೌಡೆಲ್ ಅವರಿಗೆ ರಾಜೀನಾಮೆ ಪತ್ರ ನೀಡಿರುವ ಓಲಿ, ನೇಪಾಳ ಎದುರಿಸುತ್ತಿರುವ ಅಸಾಧಾರಣ ಸಂದರ್ಭಗಳನ್ನು ಉಲ್ಲೇಖಿಸಿ, ಪ್ರಸ್ತುತ ಪರಿಸ್ಥಿತಿಯ ಸಾಂವಿಧಾನಿಕ ಮತ್ತು ರಾಜಕೀಯ ಪರಿಹಾರಕ್ಕೆ ದಾರಿ ಮಾಡಿಕೊಡಲು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಈ ನಡುವೆ ಪೌಡೇಲ್ ಕೂಡ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ ನೇಪಾಳಿ ಸೇನೆ ಇದನ್ನು ನಿರಾಕರಿಸಿದೆ.
ಪ್ರತಿಭಟನೆ ಆರಂಭವಾಗಿದ್ದೇಕೆ?:
ಇತ್ತೀಚೆಗೆ ನೇಪಾಳ ಸರ್ಕಾರದ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ರಾಜಕಾರಣಿಗಳ ಮಕ್ಕಳು ಐಷಾರಾಮಿ ಜೀವನ ನಡೆಸುತ್ತಿರುವ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಯುವಕರು ರಾಜಕಾರಣಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದರು. ಇದರ ನಡುವೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ, ಸೈಬರ್ ಅಪರಾಧ ಮಾಡಲಾಗುತ್ತಿದೆ ಎಂದು ಆರೋಪಿಸಿದ ಸರ್ಕಾರ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದು ಯುವಕರು ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡಿತು. ಇದರ ಮುಂದುವರಿದ ಭಾಗವಾಗಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಜನ ಭಾಗಶಃ ಕ್ಷಿಪ್ರಕ್ರಾಂತಿಗೆ ನಾಂದಿ ಹಾಡಿದರು.
ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜಕಾರಣಿಗಳ ಮಕ್ಕಳು ಮಾತ್ರ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದ ಪ್ರಧಾನಿ ಓಲಿ ರಾಜೀನಾಮೆ ನೀಡಬೇಕು ಮತ್ತು ಹೊಸ ಸರ್ಕಾರವನ್ನು ರಚಿಸಬೇಕು ಎಂಬ ಪ್ರಮುಖ ಬೇಡಿಕೆ ಮುಂದಿಟ್ಟರು.
ಪ್ರತಿಭಟನೆ ವೇಳೆ ಯುವಕರು ‘ನೆಪೋ ಮಕ್ಕಳಿಗೆ ಇಡೀ ದೇಶದ ಸಂಪತ್ತು ಹಂಚಿಕೆಯಾಗುತ್ತಿದೆ. ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿ, ತಮ್ಮ ಮಕ್ಕಳಿಗೆ ಐಷಾರಾಮಿ ಜೀವನ ಕಲ್ಪಿಸುತ್ತಿದ್ದಾರೆ. ನಮ್ಮ ಯುವಕರು ಮತ್ತು ಸ್ನೇಹಿತರನ್ನು ಕೊಲ್ಲುತ್ತಿರುವ ಹಿಟ್ಲರ್ ಸರ್ಕಾರದ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ಆಕ್ರೋಶ ಹೊರಹಾಕಿದರು. ‘ನೆಪೋ’ ಎಂದರೆ ಸ್ವಜನಪಕ್ಷಪಾತ ಎಂದರ್ಥ.
ಮೆರವಣಿಗೆ ನಡೆಸುವಾಗ ‘ಭ್ರಷ್ಟಾಚಾರವನ್ನು ಮುಚ್ಚಿ, ಸಾಮಾಜಿಕ ಮಾಧ್ಯಮವನ್ನಲ್ಲ’, ‘ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಬೇಡಿ’ ಮತ್ತು ‘ಯುವಕರು ಭ್ರಷ್ಟಾಚಾರದ ವಿರುದ್ಧ’ ಮುಂತಾದ ಫಲಕಗಳನ್ನು ಹಿಡಿದಿದ್ದರು. #NepoKid, #NepoBabies, #PoliticiansNepoBabyNepal ಮೊದಲಾದ ಹ್ಯಾಶ್‌ಟ್ಯಾಗ್‌ಗಳುಳ್ಳ ವಿಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡಿವೆ.