ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಗೆದ್ದರೆ 370ನೇ ವಿಧಿ ಮರುಸ್ಥಾಪಿಸಲಾಗುವುದು : ಪಾಕ್‌

KannadaprabhaNewsNetwork |  
Published : Sep 20, 2024, 01:33 AM ISTUpdated : Sep 20, 2024, 04:41 AM IST
Congress flag

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಗೆದ್ದರೆ, ರದ್ದಾಗಿರುವ ಕಾಶ್ಮೀರದ ವಿಶೇಷ ಸ್ಥಾನಮಾನ (370ನೇ ವಿಧಿ) ಮರುಸ್ಥಾಪಿಸಲಾಗುವುದು ಎಂದ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌ 

ಶ್ರೀನಗರ/ಇಸ್ಲಾಮಾಬಾದ್‌: ‘ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಗೆದ್ದರೆ, ರದ್ದಾಗಿರುವ ಕಾಶ್ಮೀರದ ವಿಶೇಷ ಸ್ಥಾನಮಾನ (370ನೇ ವಿಧಿ) ಮರುಸ್ಥಾಪಿಸಲಿವೆ. ಈ ಮೈತ್ರಿಕೂಟವೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ನಾವು ಕೂಡ ಕಾಂಗ್ರೆಸ್‌-ಎನ್‌ಸಿ ಕಾರ್ಯಸೂಚಿಯ ಪರವಾಗಿದ್ದೇವೆ’ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್‌ ನೀಡಿದ ಹೇಳಿಕೆ ವಿವಾದಕ್ಕೀಡಾಗಿದೆ.

ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಗುರುವಾರ ಪ್ರತಿಕ್ರಿಯೆ ನೀಡಿದ್ದು, ‘ಕಾಂಗ್ರೆಸ್ ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪ್ರಣಾಳಿಕೆಗಳನ್ನು ನೋಡಿ ಪಾಕಿಸ್ತಾನವು ಸಂಭ್ರಮಿಸುತ್ತಿದೆ. ಆದರೆ ಜಗತ್ತಿನ ಯಾವುದೇ ಶಕ್ತಿಗೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಆಗದು’ ಎಂದು ಗುಡುಗಿದ್ದಾರೆ.

ಪಾಕ್‌ ಹೇಳಿದ್ದೇನು?:

ಎನ್‌ಸಿ ಪ್ರಣಾಳಿಕೆಯು ವಿಶೇಷ ಸ್ಥಾನಮಾನ ಕುರಿತಾದ 370ನೇ ವಿಧಿಯನ್ನು ಮರಳಿ ತರುವುದಾಗಿ ಭರವಸೆ ನೀಡಿದೆ. ಆದರೆ, ಕಾಂಗ್ರೆಸ್ ಪ್ರಣಾಳಿಕೆ ವಿಶೇಷ ಸ್ಥಾನಮಾನದ ಬಗ್ಗೆ ಮೌನವಾಗಿದ್ದು, ಯಾವುದೇ ಹೇಳಿಕೆ ನೀಡುತ್ತಿಲ್ಲ,ಈ ಬಗ್ಗೆ ಟೀವಿ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ‘ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಕೂಟ ಗೆಲ್ಲುವ ಹೆಚ್ಚಿನ ಅವಕಾಶ ಇದೆ. ಅವರು (ಮೈತ್ರಿಕೂಟ) 370ನೇ ವಿಧಿಯನ್ನು ಚುನಾವಣಾ ವಿಷಯವನ್ನಾಗಿ ಮಾಡಿದ್ದಾರೆ. ಈ ವಿಚಾರದಲ್ಲಿ ಪಾಕಿಸ್ತಾನ ಮತ್ತು ಎನ್‌ಸಿ-ಕಾಂಗ್ರೆಸ್ ಮೈತ್ರಿ ಒಂದೇ ಚಿಂತನೆ ಹೊಂದಿವೆ’ ಎಂದಿದ್ದಾರೆ.

ಮೋದಿ ತಪರಾಕಿ:

ಪಾಕ್‌ ಹೇಳಿಕೆಗೆ ಗುರುವಾರ ಜಮ್ಮು ಮತ್ತು ಕಾಶ್ಮೀರದ ಕಟ್ರಾ ಬಳಿಯ ರಿಯಾಸಿಯಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಪಾಕಿಸ್ತಾನದ ಅಜೆಂಡಾ ಕಾಂಗ್ರೆಸ್-ಎನ್‌ಸಿ ಅಜೆಂಡಾ ಆಗಿದೆ. ಪಾಕಿಸ್ತಾನ ರಕ್ಷಣಾ ಸಚಿವರು ಕಾಂಗ್ರೆಸ್-ಎನ್‌ಸಿ ಪ್ರಣಾಳಿಕೆಯನ್ನು ಬೆಂಬಲಿಸಿದ್ದಾರೆ ಹಾಗೂ ಕಾಂಗ್ರೆಸ್‌ನ ಕಾರ್ಯಸೂಚಿಯು ಪಾಕಿಸ್ತಾನದ ಕಾರ್ಯಸೂಚಿಯಾಗಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಹೇಳಿದ್ದಾರೆ, 

ಆದರೆ ಜಗತ್ತಿನ ಯಾವುದೇ ಶಕ್ತಿಗೆ 370ನೇ ವಿಧಿ ಮರುಸ್ಥಾಪಿಸಲು ಆಗದು’ ಎಂದಿದ್ದಾರೆ.ಬಿಜೆಪಿ ವಕ್ತಾರ ತರುಣ್‌ ಚುಗ್‌ ಮಾತನಾಡಿ, ‘ಕಾಂಗ್ರೆಸ್‌ ಪಕ್ಷ ದೇಶವಿರೋಧಿಗಳ ಜತೆ ಕೈಜೋಡಿಸಿದೆ’ ಎಂದು ಕಿಡಿಕಾರಿದ್ದಾರೆ.ಆಗಸ್ಟ್ 5, 2019ರಂದು, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 370ನೇ ವಿಧಿ ರದ್ದು ಮಾಡಿತ್ತು. ಜಮ್ಮು-ಕಾಶ್ಮೀರ ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಹೊಸದಾಗಿ ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ಮಾಡಿತ್ತು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ ಯಹೂದಿಗಳ ನರಮೇಧ!
ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌