ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್‌ಗೆ ನಡೆದ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು, ಅತಂತ್ರ ಸಂಸತ್ ರಚನೆಯಾಗಿದೆ. ವಿಶೇಷವೆಂದರೆ ಭ್ರಷ್ಟಾಚಾರದ ಕಾರಣ ಚುನಾವಣೆ ಸ್ಪರ್ಧೆಯಿಂದ ಅನರ್ಹಗೊಂಡಿದ್ದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಕ್ಷ (ಪಿಪಿಪಿ) ನಾಯಕರು ಪಕ್ಷೇತರರಾಗಿ ಸ್ಪರ್ಧಿಸಿದ್ದರೂ, 101 ಸ್ಥಾನಗಳಲ್ಲಿ ಗೆದ್ದು ದೊಡ್ಡ ಗುಂಪಾಗಿ ಹೊರಹೊಮ್ಮಿದ್ದಾರೆ.
ಆದರೆ ಯಾವುದೇ ಪಕ್ಷ ಕೂಡಾ ಸರಳ ಬಹುಮತದ ಸನಿಹಕ್ಕೂ ಬಾರದ ಕಾರಣ ಮೂರು ಪ್ರಮುಖ ಪಕ್ಷಗಳಾದ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ನೇತೃತ್ವದ ಪಕ್ಷೇತರರು, ನವಾಜ್ ಷರೀಫ್‌ರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಮತ್ತು ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ ಪಾರ್ಟಿ (ಪಿಪಿಪಿ) ನಡುವೆ ಸರ್ಕಾರ ರಚನೆಗೆ ಹಗ್ಗಜಗ್ಗಾಟ ಮುಂದುವರೆದಿದೆ.
ಪಕ್ಷೇತರರೇ ನಂ.1: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು 101 ಸ್ಥಾನ ಗೆಲ್ಲುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ನವಾಜ್ ಷರೀಫ್‌ರ ಪಿಎಂಎಲ್-ಎನ್ 72, ಬಿಲಾವಲ್‌ರ ಪಿಪಿಪಿ 54 ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳು 27 ಸ್ಥಾನ ಗೆದ್ದಿವೆ.
ಬಹುಮತವಿಲ್ಲ: ಪಾಕ್ ಸಂಸತ್‌ನಲ್ಲಿ 369 ಸ್ಥಾನ ಇದೆಯಾದರೂ, ಈ ಪೈಕಿ 266ಕ್ಕೆ ಮಾತ್ರ ಚುನಾವಣೆ ನಡೆಯುತ್ತದೆ.
ಸರ್ಕಾರ ರಚನೆಗೆ 133 ಸ್ಥಾನ ಬೇಕು. ಉಳಿದ ಸ್ಥಾನಗಳನ್ನು ಪಕ್ಷಗಳು ಗೆದ್ದ ಸಂಖ್ಯೆ ಆಧಾರದ ಮೇಲೆ ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ.
ಹೀಗಾಗಿ ಸರಳ ಬಹುಮತಕ್ಕೆ 369 ಸ್ಥಾನಗಳ ಪೈಕಿ 169 ಮತಗಳನ್ನು ಪಡೆಯುವುದು ಅನಿವಾರ್ಯ.
ಸೆಣಸಾಟ: ಇಮ್ರಾನ್ ಬೆಂಬಲಿತರು ನಂ.1 ಸ್ಥಾನದಲ್ಲಿದ್ದರೂ, ಅವರು ಯಾವುದೇ ಪಕ್ಷ ಪ್ರತಿನಿಧಿಸದ ಕಾರಣ ನೇರವಾಗಿ ಸರ್ಕಾರ ರಚಿಸುವುದು ಸಾಧ್ಯವಿಲ್ಲ.
ಒಂದೋ ಅವರು ಯಾವುದಾದರೂ ಪಕ್ಷ ಸೇರಿ ಅದರ ಮೂಲಕ ಸರ್ಕಾರ ರಚಿಸಬೇಕು. ಇಲ್ಲವೇ ಪಿಟಿಐ ಪಕ್ಷದ ಕ್ರಿಕೆಟ್ ಬ್ಯಾಟ್ ಚಿಹ್ನೆಯನ್ನು ಕಾನೂನು ಹೋರಾಟದ ಮೂಲಕ ಮರಳಿ ಪಡೆದು, ಆ ಪಕ್ಷವನ್ನು ಸೇರಿ ಬಳಿಕ ಸರ್ಕಾರ ರಚಿಸಬೇಕು.
ಇದು ಸುದೀರ್ಘ ಪ್ರಕ್ರಿಯೆ. ಹೀಗಾಗಿ ನಾವೇ ಚುನಾವಣೆ ಗೆದ್ದಿದ್ದಾಗಿ ಇಮ್ರಾನ್ ಘೋಷಿಸಿಕೊಂಡಿದ್ದರೂ, ದೇಶದ ಚುನಾವಣಾ ನಿಯಮಗಳ ಅನ್ವಯ ಪಕ್ಷೇತರರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸುವ ಅವಕಾಶವಿಲ್ಲದ ಕಾರಣ ಅವರಿಗೆ ಸರ್ಕಾರ ರಚಿಸುವ ತಕ್ಷಣದ ಅವಕಾಶ ಇಲ್ಲ.
ಇನ್ನೊಂದೆಡೆ ನವಾಜ್ ಷರೀಫ್ ತಮ್ಮ ಸೋದರ ಶಹಬಾಜ್ ಷರೀಫ್ ಅವರ ಮೂಲಕ ಪಿಪಿಪಿ ಹಾಗೂ ಇತರೆ ಸಣ್ಣಪುಟ್ಟ ಪಕ್ಷಗಳ ಜೊತೆ ಮಾತುಕತೆ ನಡೆಸುವ ಮೂಲಕ ಸರ್ಕಾರ ರಚನೆಯ ಪ್ರಯತ್ನ ಮುಂದುವರೆಸಿದ್ದಾರೆ.
ಪಾಕಿಸ್ತಾನ ಸೇನೆ ಕೂಡಾ ನವಾಜ್ ಷರೀಫ್ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಯ ಪರವಾಗಿ ಬಹಿರಂಗವಾಗಿಯೇ ಹೇಳಿಕೆ ನೀಡಿದೆ.
ಫೆ.15ಕ್ಕೆ ಕೆಲವೆಡೆ ಮರು ಮತದಾನ:ಈ ನಡುವೆ ಮತ ಎಣಿಕೆ ವೇಳೆ ಅಕ್ರಮ ಎಸಗಲಾಗಿದೆ ಎಂದು ದೇಶದ ವಿವಿಧ ಕೋರ್ಟ್‌ಗಳಲ್ಲಿ ಪಿಟಿಐ, ಪಿಪಿಪಿ ಮತ್ತು ಪಿಎಂಎಲ್-ಎನ್ ಪ್ರತ್ಯೇಕವಾಗಿ ದೂರು ಸಲ್ಲಿಸಿವೆ.
ಈ ಮೊದಲು ವಿಜೇತರು ಎಂದು ಘೋಷಿಸಲಾದ ಅಭ್ಯರ್ಥಿಗಳನ್ನು ಬಳಿಕ ಪರಾಜಿತರೆಂದು ಪ್ರಕಟಿಸಲಾಗಿದೆ ಎಂದು ಅವು ದೂರಿವೆ. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಫೆ.15ಕ್ಕೆ ಮರುಮತದಾನಕ್ಕೆ ಆದೇಶಿಸಲಾಗಿದೆ.