ನವದೆಹಲಿ: ಆಪರೇಷನ್ ಸಿಂದೂರದ ಸಮಯದಲ್ಲಿ ಭಾರತವು ಪಾಕಿಸ್ತಾನದ ಕಿರಾನಾ ಪರಮಾಣು ನೆಲೆ ಮೇಲೆ ದಾಳಿ ಮಾಡಿತ್ತು, ಈ ವೇಳೆ ಅದಕ್ಕೆ ಹಾನಿ ತಡೆಯಲು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಸಂಧಾನಕ್ಕೆ ಅಮೆರಿಕ ಮುಂದಾಗಿತ್ತು ಎಂಬ ವರದಿಗಳ ಬೆನ್ನಲ್ಲೇ ಪಾಕ್‌ನ ಪರಮಾಣು ನೆಲೆಗಳ ಕೀಲಿ ಕೈ ಅಮೆರಿಕದ ಬಳಿ ಇದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿಕೆ ನೀಡಿರುವ ಜಾನ್ ಕಿರಿಯಾಕೌ, ‘ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ನಿಯಂತ್ರಣವನ್ನು ಪಾಕಿಸ್ತಾನ ಸರ್ಕಾರವು ಅಮೆರಿಕದ ಜನರಲ್ ಒಬ್ಬರ ಕೈಗೆ ನೀಡಿದೆ’ ಎಂದಿದ್ದಾರೆ. ವಿಶೇಷವೆಂದರೆ 2 ದಶಕಗಳ ಹಿಂದೆ ಪಾಕಿಸ್ತಾನದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗಾಗಿ ಜಾನ್ ಅವರನ್ನು ಸಿಎಐ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿತ್ತು. ಈ ಕಾರ್ಯಾಚರಣೆಯನ್ನು ಸಿಐಎ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜಂಟಿಯಾಗಿ ನಿರ್ವಹಿಸಿದ್ದವು. ಹೀಗಾಗಿ ಅವರ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಕಳೆದ ತಿಂಗಳಷ್ಟೆ ಪಾಕಿಸ್ತಾನದ ಭದ್ರತಾ ತಜ್ಞ ಇಮ್ತಿಯಾಜ್ ಗುಲ್, ‘ಪಾಕಿಸ್ತಾನದ ಮಹತ್ವದ ನೂರ್ ಖಾನ್ ವಾಯುನೆಲೆಯು ಅಮೆರಿಕದ ನಿಯಂತ್ರಣದಲ್ಲಿದೆ. ಪಾಕಿಸ್ತಾನದ ಹಿರಿಯ ಸೇನಾಧಿಕಾರಿಗಳಿಗೆ ಸಹ ಅಲ್ಲಿಗೆ ಪ್ರವೇಶವಿಲ್ಲ’ ಎನ್ನುವ ಮೂಲಕ ಪಾಕಿಸ್ತಾನದಲ್ಲಿ ವಿವಾದವನ್ನು ಹುಟ್ಟುಹಾಕಿದ್ದರು.
ಭಾರತಕ್ಕೆ ಸಯೀದ್, ಮಸೂದ್‌ಗಡೀಪಾರಿಗೆ ಸಿದ್ಧ:
ಇಸ್ಲಾಮಾಬಾದ್: ಲಷ್ಕರ್ -ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್, ಜೈಷ್- ಎ- ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನಂಥ ಉಗ್ರರನ್ನು ವಿಶ್ವಾಸವೃದ್ಧಿಯ ಕ್ರಮವಾಗಿ ಭಾರತಕ್ಕೆ ಗಡೀಪಾರು ಮಾಡಲು ಪಾಕಿಸ್ತಾನಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ, ಈ ಪ್ರಕ್ರಿಯೆಯಲ್ಲಿ ಭಾರತ ಕೂಡ ಸಹಕಾರ ನೀಡಲು ಸಿದ್ಧವಾಗಿರಬೇಕು ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅಚ್ಚರಿಯ ಹೇಳಿಕೆ ಹೇಳಿದ್ದಾರೆ.
ಜತೆಗೆ. ಮಸೂದ್ ಅಜರ್ ಎಲ್ಲಿದ್ದಾನೆಂದು ಗೊತ್ತಿಲ್ಲ. ಆತ ಅಫ್ಘಾನಿಸ್ತಾನದಲ್ಲಿರಬಹುದು. ಭಾರತ ಪಾಕಿಸ್ತಾನದ ನೆಲದಲ್ಲಿದ್ದಾನೆಂದು ಸಾಕ್ಷಿ ನೀಡಿದರೆ ಅಜರ್ ವಿರುದ್ಧ ಕ್ರಮಕೈಗೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕರನ್ನು ಬೆಂಬಲಿಸುವ ವಿಚಾರದಲ್ಲಿ ಪಾಕಿಸ್ತಾನದ ರಾಜಕಾರಣಿಗಳು ಇದೀಗ ವಿಶ್ವದ ಮುಂದೆ ಹೊಸ ನಾಟಕ ಶುರುವಿಟ್ಟುಕೊಂಡಿದ್ದಾರೆ.