ಪೋಲೆಂಡಲ್ಲಿ ಮೋದಿ ಹವಾ! 45 ವರ್ಷ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಆಗಮಿಸುತ್ತಿರುವುದು ಇದೇ ಮೊದಲು

KannadaprabhaNewsNetwork | Updated : Aug 22 2024, 04:26 AM IST

ಸಾರಾಂಶ

ಪ್ರಧಾನಿ ಆದ ನಂತರ ಅನೇಕ ದೇಶಗಳ ಸುತ್ತಿದ್ದ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಬುಧವಾರ ಪೋಲೆಂಡ್‌ಗೆ ಆಗಮಿಸಿದ್ದಾರೆ.45 ವರ್ಷ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಆಗಮಿಸುತ್ತಿರುವುದು ಇದೇ ಮೊದಲು.

  ವಾರ್ಸಾ : ಪ್ರಧಾನಿ ಆದ ನಂತರ ಅನೇಕ ದೇಶಗಳ ಸುತ್ತಿದ್ದ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಬುಧವಾರ ಪೋಲೆಂಡ್‌ಗೆ ಆಗಮಿಸಿದ್ದಾರೆ.45 ವರ್ಷ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಆಗಮಿಸುತ್ತಿರುವುದು ಇದೇ ಮೊದಲು.

2 ದಿನಗಳ ಪ್ರವಾಸದಲ್ಲಿ ಗುರುವಾರ ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಸೆಬಾಸ್ಟಿಯನ್ ಡುಡಾ ಅವರನ್ನು ಭೇಟಿ ಮಾಡಲಿರುವ ಮೋದಿ, ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉದ್ಯಮಿಗಳು ಹಾಗೂ ಪೋಲೆಂಡ್‌ನ ವಿವಿಧ ವಲಯಗಳ ಗಣ್ಯರ ಜತೆ ಚರ್ಚೆ ಮಾಡಲಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮೋದಿ, ‘ಈ ಭೇಟಿಯು ಭಾರತ-ಪೋಲೆಂಡ್ ಸ್ನೇಹಕ್ಕೆ ವೇಗವನ್ನು ನೀಡುತ್ತದೆ. ಸ್ನೇಹದ ಹೊಸ ಶಕೆ ಆರಂಭವಾಗಲಿದೆ’ ಎಂದಿದ್ದಾರೆ.

ಮೋದಿ ಬುಧವಾರ ಸಂಜೆ ವಾರ್ಸಾಗೆ ಬರುತ್ತಿದ್ದಂತೆಯೇ ಪೋಲೆಂಡ್ ಮತ್ತು ಭಾರತೀಯ ಕಲಾವಿದರು ಗುಜರಾತಿ ಸಾಂಪ್ರದಾಯಿಕ ನೃತ್ಯದ ಮೂಲಕ ಅವರನ್ನು ಸ್ವಾಗತಿಸಿದರು. ಅಲ್ಲದೆ, ಪೋಲೆಂಡ್‌ನಲ್ಲಿರುವ ಭಾರತೀಯ ಸಮುದಾಯದವರು ಆತ್ಮೀಯ ಸ್ವಾಗತ ನೀಡಿದರು.

1979ರಲ್ಲಿ ಮೊರಾರ್ಜಿ ದೇಸಾಯಿ ಪೋಲೆಂಡ್‌ಗೆ ಭೇಟಿ ನೀಡಿದ್ದರು. ಆ ಬಳಿಕ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಇಂದು ಉಕ್ರೇನ್‌ಗೆ:

ಗುರುವಾರ ಪೋಲೆಂಡ್‌ ಪ್ರವಾಸ ಮುಗಿಸಲಿರುವ ಮೋದಿ ಇಲ್ಲಿಂದ ರೈಲಿನ ಮೂಲಕ 10 ತಾಸು ಪ್ರಯಾಣಿಸಿ ಉಕ್ರೇನ್‌ಗೆ ತೆರಳಲಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ಕಾರಣ ವಿಮಾನದಲ್ಲಿ ತೆರಳದೇ ಸುರಕ್ಷಿತವಾದ ರೈಲಲ್ಲಿ ಸಾಗಲಿದ್ದಾರೆ. ಇನ್ನು 1991ರಲ್ಲಿ ಉಕ್ರೇನ್‌ ಸ್ವತಂತ್ರ ದೇಶವಾಗಿ ಹೊರಹೊಮ್ಮಿದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹಿರಿಮೆಗೂ ಮೋದಿ ಪಾತ್ರರಾಗಲಿದ್ದಾರೆ.

==

ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಬಗ್ಗೆ ಉಕ್ರೇನ್‌ ಜತೆ ಚರ್ಚೆ: ಮೋದಿಪಿಟಿಐ ನವದೆಹಲಿಐರೋಪ್ಯ ದೇಶಗಳಾದ ಪೋಲೆಂಡ್‌ ಹಾಗೂ ಉಕ್ರೇನ್‌ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯಿಂದ ಪ್ರಯಾಣ ಬೆಳೆಸಿದ್ದು, ಮೊದಲು ಪೋಲೆಂಡ್‌ಗೆ ಬಂದಿಳಿದಿದ್ದಾರೆ. ಎರಡು ದಿನಗಳ ಕಾಲ ಪೋಲೆಂಡ್‌ನಲ್ಲಿರುವ ಮೋದಿ ಅವರು, ಬಳಿಕ 10 ತಾಸುಗಳ ಸುದೀರ್ಘ ರೈಲು ಪ್ರಯಾಣ ಮಾಡಿ ಶುಕ್ರವಾರ ಉಕ್ರೇನ್‌ ತಲುಪಲಿದ್ದಾರೆ. 1991ರಲ್ಲಿ ಉಕ್ರೇನ್‌ ಸ್ವತಂತ್ರಗೊಂಡ ಬಳಿಕ ಆ ದೇಶಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ.ಪ್ರವಾಸ ಆರಂಭಕ್ಕೂ ಮುನ್ನ ಹೇಳಿಕೆ ನೀಡಿರುವ ಮೋದಿ ಅವರು, ‘ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಭೇಟಿ ನೀಡುತ್ತಿದ್ದೇನೆ. ಈ ವೇಳೆ ಉಕ್ರೇನ್‌ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ಕುರಿತು ದೃಷ್ಟಿಕೋನವನ್ನು ಅವರ ಜತೆ ಹಂಚಿಕೊಳ್ಳುತ್ತೇನೆ. ಸ್ನೇಹಿತ ಹಾಗೂ ಪಾಲುದಾರ ದೇಶವಾಗಿ ಭಾರತವು ಉಕ್ರೇನ್‌ ಭಾಗದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಬಯಸುತ್ತದೆ’ ಎಂದಿದ್ದಾರೆ.ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ್ದು, ಎರಡೂವರೆ ವರ್ಷಗಳಿಂದ ಆ ಯುದ್ಧ ನಡೆಯುತ್ತಿದೆ. ಆರು ವಾರಗಳ ಹಿಂದೆ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ್ದರು. ಇದು ಉಕ್ರೇನ್‌ನ ಪಾಶ್ಚಾತ್ಯ ಮಿತ್ರರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಮೋದಿ ಅವರ ಉಕ್ರೇನ್‌ ಭೇಟಿಯನ್ನು ವಿಶ್ವವೇ ಎದುರು ನೋಡುತ್ತಿದೆ.ಉಕ್ರೇನ್‌ ಮೇಲೆ ಯುದ್ಧ ಸಾರಿದ ರಷ್ಯಾ ನಡೆಯನ್ನು ಭಾರತ ಈವರೆಗೂ ಖಂಡಿಸಿಲ್ಲ. ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಈ ವಿಷಯವನ್ನು ಪರಿಹರಿಸಿಕೊಳ್ಳುವಂತೆ ಸಲಹೆ ನೀಡುತ್ತಾ ಬಂದಿದೆ. ಉಕ್ರೇನ್‌ ಭೇಟಿ ವೇಳೆ ಮೋದಿ ಅವರು ಏನು ಮಾತನಾಡಲಿದ್ದಾರೆ ಎಂಬುದು ಭಾರಿ ಕುತೂಹಲ ಹುಟ್ಟಿಸಿದೆ.

==

ಜಾಮಸಾಹೇಬ್‌ ಸ್ಮಾರಕಕ್ಕೆ ಮೋದಿ ನಮನಪೋಲೆಂಡ್‌ನ ವಾರ್ಸಾದಲ್ಲಿರುವ ಜಾಮಸಾಹೇಬ್ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಗುಜರಾತ್‌ನ ಜಾಮ್‌ನಗರದ ಮಹಾರಾಜ ದಿಗ್ವಿಜಯ ಸಿಂಹಜಿ 6,000 ಪೋಲೆಂಡ್‌ ನಿರಾಶ್ರಿತರಿಗೆ ಆಶ್ರಯ ನೀಡಿದ್ದರು. ಆ ನಿಮಿತ್ತ ಪೋಲೆಂಡ್‌ನಲ್ಲಿ ಜಾಮಸಾಹೇಬ್‌ ಹೆಸರಿನ ಸ್ಮಾರಕ ನಿರ್ಮಿಸಲಾಗಿದೆ.

Share this article