ಯುಎಇ: ವಿಶ್ವದ 3ನೇ ದೊಡ್ಡ ದೇಗುಲ ಉದ್ಘಾಟಿಸಿದ ನರೇಂದ್ರ ಮೋದಿ

KannadaprabhaNewsNetwork | Updated : Feb 15 2024, 09:01 AM IST

ಸಾರಾಂಶ

ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೊದಲ ಹಿಂದೂ ದೇವಾಲಯ ಎನ್ನಿಸಿಕೊಂಡಿರುವ ಸ್ವಾಮಿನಾರಾಯಣ (ಬಾಪ್ಸ್) ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಉದ್ಘಾಟಿಸಿದರು.

ಅಬುಧಾಬಿ: ಮುಸ್ಲಿಂ ರಾಷ್ಟ್ರವಾದ ಯುಎಇಯ ಅಬುಧಾಬಿಯಲ್ಲಿ ನಿರ್ಮಾಣ ಮಾಡಲಾಗಿರುವ ಮೊದಲ ಹಿಂದೂ ದೇವಾಲಯ ಎನ್ನಿಸಿಕೊಂಡಿರುವ ಸ್ವಾಮಿನಾರಾಯಣ (ಬಾಪ್ಸ್) ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಸಂಜೆ ಉದ್ಘಾಟಿಸಿದರು. 

ಇದೇ ವೇಳೆ ದೇವಸ್ಥಾನದಲ್ಲಿ ಅಳವಡಿಸಿರುವ ಕಲ್ಲಿನ ಮೇಲೆ ‘ವಸುಧೈವ ಕುಟುಂಬಕಂ’ ಎಂಬುದನ್ನು ಉಳಿ, ಸುತ್ತಿಗೆ ಬಳಸಿ ಕೆತ್ತನೆ ಮಾಡಿ ಸನಾತನ ಧರ್ಮದ ಜಾಗತಿಕ ಭ್ರಾತೃತ್ವದ ಸಂದೇಶ ಸಾರಿದರು.

ತಿಳಿ ನಸುಗೆಂಪು ಬಣ್ಣದ ರೇಷ್ಮೆ ವಸ್ತ್ರ, ಜಾಕೆಟ್‌ ಮತ್ತು ಶಾಲು ಧರಿಸಿ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿ, ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಿರುವ ಬೃಹತ್‌ ದೇವಸ್ಥಾನವನ್ನು ಉದ್ಘಾಟಿಸಿದರು. 

ಬಳಿಕ ಬೋಚಾಸನವಾಸಿ ಶ್ರೀ ಅಕ್ಷರ್‌ ಪುರುಷೋತ್ತಮ್‌ ಸ್ವಾಮಿನಾರಾಯಣ ಸಂಸ್ಥೆ (ಬಾಪ್ಸ್‌) ನಿರ್ಮಿಸಿರುವ ಜಗತ್ತಿನ 1200 ಸ್ವಾಮಿನಾರಾಯಣ ದೇವಸ್ಥಾನಗಳಲ್ಲಿ ಆಯೋಜಿಸಿದ್ದ ವರ್ಚುವಲ್‌ ‘ಗ್ಲೋಬಲ್‌ ಆರತಿ’ ಕಾರ್ಯಕ್ರಮದಲ್ಲಿ ಭಾಗಿಯಾದರು.

ಗಂಗಾಜಲ ಪ್ರೋಕ್ಷಣೆ: ದೇವಸ್ಥಾನ ಉದ್ಘಾಟನೆಗೂ ಮುನ್ನ ಮೋದಿಯವರು ಗಂಗಾ ಮತ್ತು ಯಮುನಾ ನದಿಯ ನೀರನ್ನು ದೇವಸ್ಥಾನದ ಪ್ರದೇಶಕ್ಕೆ ಅರ್ಪಿಸಿದರು. ಸ್ವಾಮಿನಾರಾಯಣ ಪಂಥದ ಮಹಾಂತ ಸ್ವಾಮಿ ಮಹಾರಾಜರ ಮೂರ್ತಿಯ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದರು.

ಬಳಿಕ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ವಿವಿಧ ಧರ್ಮಗಳ ಜನರನ್ನು ಭೇಟಿ ಮಾಡಿದರು. ಅಬುಧಾಬಿಯ ಅಲ್‌ ರಹ್ಬಾದಲ್ಲಿ 27 ಎಕರೆಯಲ್ಲಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಲಾಗಿದೆ. 

ಈ ದೇವಸ್ಥಾನದಲ್ಲಿ ಯುಎಇಯ 7 ಎಮಿರೇಟ್ಸ್‌ಗಳನ್ನು ಪ್ರತಿನಿಧಿಸುವಂತೆ 7 ಗೋಪುರಗಳನ್ನು ನಿರ್ಮಾಣ ಮಾಡಲಾಗಿದೆ. 

ದೇವಸ್ಥಾನದ 7 ಗೋಪುರಗಳ ಕೆಳಗೆ ರಾಮ, ಶಿವ, ಜಗನ್ನಾಥ, ಕೃಷ್ಣ, ಸ್ವಾಮಿನಾರಾಯಣ, ತಿರುಪತಿ ಬಾಲಾಜಿ ಮತ್ತು ಅಯ್ಯಪ್ಪ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ಬಾಪ್ಸ್‌ ಹೇಳಿದೆ.

Share this article