ವ್ಯಾಟಿಕನ್ ಸಿಟಿ: ವಿಶ್ವಾದ್ಯಂತ ಇರುವ 140 ಕೋಟಿ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು ಈಸ್ಟರ್ ದಿನವಾದ ಸೋಮವಾರ ಮೆದುಳಿನ ರಕ್ತಸ್ರಾವದಿಂದ ಇಹಲೋಕ ತ್ಯಜಿಸಿದ್ದಾರೆ. ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 88 ವರ್ಷ ವಯಸ್ಸಾಗಿತ್ತು.
ಕೆಲವು ದಿನಗಳ ಶೋಕಾಚರಣೆ ಬಳಿಕ ಪೋಪ್ ಅವರ ಅಂತ್ಯಕ್ರಿಯೆ ವ್ಯಾಟಿಕನ್ ಸಿಟಿ ಹೊರಗೆ ನಡೆಯಲಿದೆ. ಇದೇ ವೇಳೆ 20 ದಿನ ಬಳಿಕ ಹೊಸ ಪೋಪ್ ಆಯ್ಕೆ ನಡೆಯಲಿದೆ.
‘ಬೆಳಗ್ಗೆ 7.35ರ ಹೊತ್ತಿಗೆ ರೋಮ್‌ನ ಬಿಷಪ್ ಆದ ಫ್ರಾನ್ಸಿಸ್ ಅವರು ತನ್ನ ತಂದೆಯ ಮನೆಗೆ ಹಿಂತಿರುಗಿದ್ದಾರೆ. ಅವರು ತಮ್ಮ ಸಂಪೂರ್ಣ ಜೀವನ ದೇವರು ಮತ್ತು ಚರ್ಚ್‌ನ ಸೇವೆಗೆ ಮುಡುಪಾಗಿಟ್ಟಿದ್ದರು’ ಎಂದು ವ್ಯಾಟಿಕನ್‌ನ ಟೀವಿ ಚಾನೆಲ್‌ನಲ್ಲಿ ಕಾರ್ಡಿನಲ್ ಕೆವಿನ್ ಫರ್ರೆಲ್ ಅವರು ಪ್ರಕಟಿಸುವ ಮೂಲಕ ಸಾವಿನ ಸುದ್ದಿಯನ್ನು ಘೋಷಣೆ ಮಾಡಿದರು.
ಪೋಪ್ ಫ್ರಾನ್ಸಿಸ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ವಿಶ್ವಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ. ಪೋಪ್ ಅವರ ಸರಳತೆ, ಸಹಾನುಭೂತಿ, ಬಡವರ ಪರವಾದ ಕಾಳಜಿಯನ್ನು ಸ್ಮರಿಸಿದ್ದಾರೆ.
ಕಾಡಿದ ಅನಾರೋಗ್ಯ:
ಕೆಲ ಸಮಯದಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಫೆ.14ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯೂಮೋನಿಯಾದಿಂದಾಗಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಬಿಗಡಾಯಿಸಿತ್ತು. ಐದು ವಾರಗಳ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಿ ಮಾ.23ರಂದು ಆಸ್ಪತ್ರೆಯ ಬಾಲ್ಕನಿಯಲ್ಲಿ ಮೊದಲ ಬಾರಿ ಕಾಣಿಸಿಕೊಂಡು ಸಾರ್ವಜನಿಕರಿಗೆ ಗೆಲುವಿನ ಚಿಹ್ನೆ ತೋರಿಸಿದ್ದರು. 38 ದಿನದ ಆಸ್ಪತ್ರೆ ವಾಸದ ನಂತರ ಅವರು ವ್ಯಾಟಿಕನ್‌ಗೆ ಮರಳಿ ವಿಶ್ರಾಂತಿಯಲ್ಲಿದ್ದರು. ಈ ನಡುವೆ, ಏ.19ರಂದು ಅವರು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಅವರನ್ನು ಭೇಟಿಯಾಗಿದ್ದರು. ಮರುದಿನ ಅಂದರೆ ಈಸ್ಟರ್ ಸಂಡೆ ಹಿನ್ನೆಲೆಯಲ್ಲಿ ವ್ಯಾಟಿಕನ್‌ನ ಸೈಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಲ್ಲಿ ಸಾಜನಿಕರಿಗೆ ದರ್ಶನ ನೀಡಿದ್ದರು. ಆದರೆ ಅದಾದ ಒಂದೇ ದಿನದಲ್ಲಿ ಅವೆರು ಅಸುನೀಗಿದ್ದು ಆಘಾತಕಾರಿ ವಿಚಾರ.
ಐಫೆಲ್ ಗೋಪುರದ ದೀಪ ಆಫ್:ಪೋಪ್ ನಿಧನದ ಸ್ಮರಣಾರ್ಥವಾಗಿ ಪ್ಯಾರಿಸ್‌ನ ಜಗದ್ವಿಖ್ಯಾತ ಐಫೆಲ್ ಗೋಪುರದ ವಿದ್ಯುದ್ದೀಪ ಆರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ರೀತಿ ಅನೇಕ ಕಡೆ ವಿಶಿಷ್ಟ ರೀತಿಯಲ್ಲಿ ಧರ್ಮಗುರುವಿನ ನಿಧನಕ್ಕೆ ಕಂಬನಿ ಮಿಡಿಯಲಾಗಿದೆ.
ವ್ಯಾಟಿಕನ್ ಹೊರಗೆ ಅಂತ್ಯಕ್ರಿಯೆ
ಸಾಮಾನ್ಯವಾಗಿ ಪೋಪ್‌ಗಳ ಅಂತ್ಯಕ್ರಿಯೆ ವ್ಯಾಟಿಕನ್ ನಗರದಲ್ಲೇ ನಡೆಯವುದು ಈವರೆಗೆ ನಡೆದುಬಂದ ಸಂಪ್ರದಾಯ. ಆದರೆ, ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಮಾತ್ರ ಅವರ ಇಚ್ಛೆಯಂತೆ ವ್ಯಾಟಿಕನ್ ಹೊರಗೆ ನಡೆಯಲಿದೆ. ರೋಮ್‌ನಲ್ಲಿರುವ ಸಾಂಟಾ ಮರಿಯಾ ಮಾಗಿಯೋರೆ ಬೆಸಿಲಿಕಾದಲ್ಲಿ ಅವರ ಪೋಪ್ ಫ್ರಾನ್ಸಿಸ್ ಅವರು ಮಣ್ಣಾಗಲಿದ್ದಾರೆ. ಸಂಪ್ರದಾಯದ ಪ್ರಕಾರ ಪೋಪ್‌ಗಳ ಅಂತ್ಯಕ್ರಿಯೆ ವೇಳೆ ಮೂರು ಖಾಲಿ ಶವಪೆಟ್ಟಿಗೆಗಳನ್ನೂ ಮಣ್ಣು ಮಾಡಲಾಗುತ್ತದೆ. ಆದರೆ, ಫ್ರಾನ್ಸಿಸ್ ಅವರು ತಮ್ಮ ಪಾರ್ಥಿವ ಶರೀರವನ್ನು ಮರ ಮತ್ತು ಸತುವಿನಿಂದ ನಿರ್ಮಿಸಿದ ಒಂದೇ ಶವಪೆಟ್ಟಿಗೆಯಲ್ಲಿಟ್ಟು ಅಂತ್ಯಕ್ರಿಯೆ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆಯೇ ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಹೇಳಲಾಗಿದೆ.
ಭಾರತದಲ್ಲಿ 3 ದಿನ ಶೋಕಾಚರಣೆ:
ಪೋಪ್ ಫ್ರಾನ್ಸಿಸ್ ಅವರ ನಿಧನಕ್ಕೆ ಸಂತಾಪ ಸೂಚಕವಾಗಿ ಭಾರತ ಸರ್ಕಾರ ದೇಶಾದ್ಯಂತ 3 ದಿನಗಳ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ.
1936-2025--
- ಕ್ರಿಶ್ಚಿಯನ್ನರ ಪರಮೋಚ್ಚ ಧರ್ಮಗುರು ದೇಹಾಂತ್ಯ
- 12 ವರ್ಷ ಕಾಲ ಪೋಪ್ ಆಗಿದ್ದ ಫ್ರಾನ್ಸಿಸ್
- ಪೋಪ್ ಹುದ್ದೆಗೇರಿದ್ದ ಲ್ಯಾಟಿನ್ ಅಮೆರಿಕದ ಮೊದಲ ಧರ್ಮಗುರು
- ಮೊದಲ ಬಾರಿ ವ್ಯಾಟಿಕನ್ ಹೊರಗೆ ಪೋಪ್ ಅಂತ್ಯಕ್ರಿಯೆ
- ಸುಧಾರಣೆ, ಬಡವರ ಪರ ಕಾಳಜಿಗೆ ಹೆಸರಾಗಿದ್ದ ಪೋಪ್
- 20 ದಿನದೊಳಗೆ ನಡೆಯಲಿದೆ ಹೊಸ ಪೋಪ್ ನೇಮಕ