;Resize=(412,232))
ನವದೆಹಲಿ: ಫ್ರಾನ್ಸ್‌ನಲ್ಲಿ ಜೆನ್ ಝೀಗಳ ಪ್ರತಿಭಟನೆ ತೀವ್ರವಾಗಿರುವ ನಡುವೆಯೇ, ಅಲ್ಬೇನಿಯಾ, ಬೆಲ್ಜಿಯಂ, ಅರ್ಜೆಂಟೀನಾ ಸೇರಿದಂತೆ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಪ್ರತಿಭಟನೆಯ ಬಿಸಿ ತೀವ್ರವಾಗಿದ್ದು, ಬೆಲೆ ಏರಿಕೆ, ಹಣದುಬ್ಬರ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಮತ್ತು ಆರ್ಥಿಕ ಅಸಮಾನತೆಯ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಏಕಕಾಲಕ್ಕೆ ವಿವಿಧ ದೇಶಗಳಲ್ಲಿ ಇಂತಹ ಜನಾಗ್ರಹ ಭುಗಿಲೆದ್ದಿರುವುದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಅಲ್ಬೇನಿಯಾದಲ್ಲಿ ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಮತ್ತು ಯುವಜನತೆ (ಜೆನ್‌ಝೀಗಳು) ಅತಿಯಾದ ಶಿಕ್ಷಣ ವೆಚ್ಚ, ವಿವಿಗಳ ಕಳಪೆ ಮೂಲಸೌಕರ್ಯಗಳು, ನಿರುದ್ಯೋಗ ಮತ್ತು ಸರ್ಕಾರದ ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದಿದ್ದಾರೆ. ಇದರೊಂದಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜ್ಯಾರೆಡ್ ಕುಶ್ನರ್ ಅವರ ಹೂಡಿಕೆಯಿರುವ ಕರಾವಳಿ ತೀರದ ಐಷಾರಾಮಿ ರೆಸಾರ್ಟ್ ಯೋಜನೆಗೆ ಸರ್ಕಾರದ ಬೆಂಬಲ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಚಳವಳಿಯನ್ನು ‘ಫ್ಲೆಮಿಂಗೊ ಕ್ರಾಂತಿ’ ಎಂದು ಕರೆಯಲಾಗುತ್ತಿದೆ.
ಬೆಲ್ಜಿಯಂ ಸರ್ಕಾರ ತರುತ್ತಿರುವ ಕಠಿಣ ಆರ್ಥಿಕ ಕ್ರಮಗಳು, ಸಾರ್ವಜನಿಕ ಬಜೆಟ್ ಕಡಿತ ಮತ್ತು ಹೆಚ್ಚುತ್ತಿರುವ ದಿನಬಳಕೆ ವಸ್ತುಗಳ ಬೆಲೆಗಳ ವಿರುದ್ಧ ಕಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ಬೀದಿಗಿಳಿದಿದ್ದಾರೆ. ಇದರೊಂದಿಗೆ, ಉನ್ನತ ಶಿಕ್ಷಣದ ಶುಲ್ಕ ಏರಿಕೆ ಹಾಗೂ ಸೌಲಭ್ಯಗಳ ಕೊರತೆಯನ್ನು ಪ್ರಶ್ನಿಸಿ ವಿದ್ಯಾರ್ಥಿ ಸಂಘಟನೆಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ರಾಜಧಾನಿ ಬ್ರಸೆಲ್ಸ್‌ನಲ್ಲಿ ಮಾಸ್ಕ್ ಧರಿಸಿದ ನೂರಾರು ಯುವಕರು ಮತ್ತು ಪೊಲೀಸರ ನಡುವೆ ತೀವ್ರ ಘರ್ಷಣೆಗಳು ನಡೆದಿವೆ.
ಪೋರ್ಚುಗಲ್‌ನಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ವಸತಿ ಬಿಕ್ಕಟ್ಟನ್ನು ವಿರೋಧಿಸಿ ಜನಾಕ್ರೋಶ ಭುಗಿಲೆದ್ದಿದೆ. ದೇಶದಲ್ಲಿ 2017ರಿಂದೀಚೆಗೆ ಮನೆಗಳ ಬೆಲೆ ದುಪ್ಪಟ್ಟಾಗಿದೆ ಮತ್ತು ಹೊಸ ಮನೆಗಳ ಬಾಡಿಗೆ ದರವೂ ಗಣನೀಯವಾಗಿ ಹೆಚ್ಚಾಗಿದೆ. ಲಿಸ್ಬನ್‌ನಂತಹ ನಗರಗಳಲ್ಲಿ ಸಂಬಳಕ್ಕಿಂತ ಹೆಚ್ಚು ಭಾಗ (ಸುಮಾರು 116%) ಕೇವಲ ಬಾಡಿಗೆಗೇ ವ್ಯಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಧನ ಹಾಗೂ ಅಗತ್ಯ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಟಲಿ:
ಇಟಲಿಯಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಕಡಿಮೆ ವೇತನ ಮತ್ತು ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಮಿಲನ್, ಬೊಲೊನ್ಯಾ ಮತ್ತು ಟುರಿನ್ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಸರ್ಕಾರದ ಬಲಪಂಥೀಯ ನೀತಿಗಳ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅರ್ಜೆಂಟೀನಾ:
ಅರ್ಜೆಂಟೀನಾದಲ್ಲಿ ಅಧ್ಯಕ್ಷ ಜೇವಿಯರ್ ಮಿಲೀ ಅವರ ಸರ್ಕಾರದ ತೀವ್ರ ಆರ್ಥಿಕ ಕಠಿಣ ಕ್ರಮಗಳು ಮತ್ತು ಸಾರ್ವಜನಿಕ ಶಿಕ್ಷಣದ ಅನುದಾನ ಕಡಿತವನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಇತ್ತೀಚೆಗೆ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಕಾರ್ಮಿಕ ಸಂಘಟನೆಗಳು ಸಂಸತ್ತಿನ ಮುಂಭಾಗದಲ್ಲಿ ಬೃಹತ್ ರ‍್ಯಾಲಿ ನಡೆಸಿದ್ದು, ಇದು ಹಿಂಸಾತ್ಮಕ ಸಂಘರ್ಷಕ್ಕೆ ತಿರುಗಿದೆ.
ಟರ್ಕಿ:
ಟರ್ಕಿಯಲ್ಲಿ ಹಣದುಬ್ಬರ, ಜೀವನ ವೆಚ್ಚದ ತೀವ್ರ ಏರಿಕೆ ಮತ್ತು ಅಸಮರ್ಪಕ ಪಿಂಚಣಿ ವಿರುದ್ಧ ನಿವೃತ್ತರು ಹಾಗೂ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಸೂಕ್ತ ಪಿಂಚಣಿ ಮೊತ್ತಕ್ಕಾಗಿ ಆಗ್ರಹಿಸಿ ಪಿಂಚಣಿದಾರರು ಅಂಕಾರಾದಲ್ಲಿರುವ ಸಾಂವಿಧಾನಿಕ ನ್ಯಾಯಾಲಯದ ಹೊರಗೆ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಎಲ್ಲಿ, ಏಕಾಗಿ ಹೋರಾಟ?
ಅರ್ಜೆಂಟೀನಾ: ಆರ್ಥಿಕ ಕಠಿಣ ಕ್ರಮಗಳು ಮತ್ತು ಸಾರ್ವಜನಿಕ ಶಿಕ್ಷಣದ ಅನುದಾನ ಕಡಿತವನ್ನು ವಿರೋಧಿಸಿ ಹೋರಾಟ
ಇಟಲಿ: ಹೆಚ್ಚುತ್ತಿರುವ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕಡಿಮೆ ವೇತನ, ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿಗೆ ವಿರೋಧ
ಪೋರ್ಚುಗಲ್: ಪೋರ್ಚುಗಲ್‌ನಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ವಸತಿ ಬಿಕ್ಕಟ್ಟನ್ನು ಜನರ ಪ್ರತಿಭಟನೆ
ಬೆಲ್ಜಿಯಂ: ಸರ್ಕಾರದ ಕಠಿಣ ಆರ್ಥಿಕ ಕ್ರಮ, ಬಜೆಟ್ ಕಡಿತ ಮತ್ತು ಹೆಚ್ಚುತ್ತಿರುವ ದಿನಬಳಕೆ ವಸ್ತುಗಳ ಬೆಲೆಗಳ ವಿರುದ್ಧ
ಅಲ್ಬೇನಿಯಾ: ಅತಿಯಾದ ಶಿಕ್ಷಣ ವೆಚ್ಚ, ವಿವಿಗಳ ಕಳಪೆ ಮೂಲಸೌಕರ್ಯ, ನಿರುದ್ಯೋಗ, ವ್ಯಾಪಕ ಭ್ರಷ್ಟಾಚಾರದ ವಿರುದ್ಧ
ಟರ್ಕಿ: ಹೆಚ್ಚಿದ ಭಾರೀ ಹಣದುಬ್ಬರ, ಇದರಿಂದ ಜೀವನ ವೆಚ್ಚದ ತೀವ್ರ ಏರಿಕೆ ಮತ್ತು ಅಸಮರ್ಪಕ ಪಿಂಚಣಿ ವಿರುದ್ಧ ಆಕ್ರೋಶ