ನೆಸ್ಟ್ಲೆ ಸೆರಿಲ್ಯಾಕ್‌ನಲ್ಲಿ ಭಾರೀ ಸಕ್ಕರೆ ಪತ್ತೆ!

ಮಕ್ಕಳ ಆಹಾರ ಉತ್ಪನ್ನದಲ್ಲಿ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್‌ ಮೂಲದ ನೆಸ್ಟ್ಲೆ, ಭಾರತದಲ್ಲಿ ತಾನು ಮಾರಾಟ ಮಾಡುತ್ತಿರುವ ಸೆರಿಲ್ಯಾಕ್‌ ಆಹಾರದಲ್ಲಿ ಭಾರೀ ಪ್ರಮಾಣದ ಸಕ್ಕರೆಯನ್ನು ಬಳಸುತ್ತಿದೆ.

KannadaprabhaNewsNetwork | Published : Apr 18, 2024 7:43 PM IST / Updated: Apr 19 2024, 04:19 AM IST

ನವದೆಹಲಿ: ಮಕ್ಕಳ ಆಹಾರ ಉತ್ಪನ್ನದಲ್ಲಿ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್‌ ಮೂಲದ ನೆಸ್ಟ್ಲೆ, ಭಾರತದಲ್ಲಿ ತಾನು ಮಾರಾಟ ಮಾಡುತ್ತಿರುವ ಸೆರಿಲ್ಯಾಕ್‌ ಆಹಾರದಲ್ಲಿ ಭಾರೀ ಪ್ರಮಾಣದ ಸಕ್ಕರೆಯನ್ನು ಬಳಸುತ್ತಿದೆ. ಯುರೋಪಿಯನ್‌ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಭಾರೀ ಹೆಚ್ಚಿದೆ ಎಂದು ಸಂಶೋಧನಾ ವರದಿಯೊಂದು ಆತಂಕಕಾರಿ ವರದಿ ಪ್ರಕಟಿಸಿದೆ.

ಸ್ವಿಜರ್ಲೆಂಡ್‌ ಮೂಲದ ‘ಪಬ್ಲಿಕ್‌ ಐ ಆ್ಯಂಡ್‌ ಇಂಟರ್‌ನ್ಯಾಷನಲ್‌ ಬೇಬಿ ಫುಡ್‌ ಆ್ಯಕ್ಷನ್‌ ನೆಟ್‌ವರ್ಕ್‌’ (ಐಬಿಎಫ್‌ಎಎನ್‌) ಎಂಬ ಸರ್ಕಾರೇತರ ಸಂಸ್ಥೆಯೊಂದು ವಿಶ್ವದ ವಿವಿಧ ದೇಶಗಳಲ್ಲಿ ನೆಸ್ಟ್ಲೆಸೆರಿಲ್ಯಾಕ್‌ ಸೇರಿದಂತೆ 150 ಮಕ್ಕಳ ಬಳಕೆಯ ಆಹಾರ ಉತ್ಪನ್ನಗಳನ್ನು ಪರಿಶೀಲಿಸಿದಾಗ ಈ ಅಂಶ ಬೆಳಕಿಗ ಬಂದಿದೆ.ವರದಿಯಲ್ಲಿ ಏನಿದೆ?:

ಆಹಾರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜರ್ಮನಿ, ಬ್ರಿಟನ್‌ನಲ್ಲಿ ಮಾರಾಟ ಮಾಡಲಾಗುತ್ತಿರುವ ಗೋಧಿಯಿಂದ ತಯಾರಿಸಿದ ಸೆರಿಲ್ಯಾಕ್‌ನಲ್ಲಿ ಯಾವುದೇ ಸಕ್ಕರೆ ಅಂಶಗಳಿಲ್ಲ. ಆದರೆ ಭಾರತದಲ್ಲಿ ಪ್ರತಿ ಒಂದು ಬಾರಿ ಬಳಕೆಗೆ ಶಿಫಾರಸು ಮಾಡಲಾದ ಆಹಾರದಲ್ಲಿ 2.7 ಗ್ರಾಂನಷ್ಟು ಸಕ್ಕರೆ ಪತ್ತೆಯಾಗಿದೆ. ಇದನ್ನು ಕಂಪನಿ ತನ್ನ ಉತ್ಪನ್ನಗಳ ಮೇಲೂ ನಮೂದಿಸಿದೆ. 

ಇದು ಅಂತಾರಾಷ್ಟ್ರೀಯ ಆಹಾರ ಭದ್ರತಾ ಮಾರ್ಗಸೂಚಿಯಲ್ಲಿ ಸೂಚಿಸಿರುವ ಪ್ರಮಾಣಕ್ಕಿಂತ ಭಾರೀ ಅಧಿಕವಾಗಿದೆ.ಹೀಗೆ ಅಧಿಕ ಸಕ್ಕರೆ ಅಂಶ ಹೊಂದಿರುವ ಆಹಾರ ಉತ್ಪನ್ನಗಳನ್ನು ನೆಸ್ಟ್ಲೆ ಕೇವಲ ಭಾರತದಲ್ಲಿ ಮಾತ್ರ ಮಾರಾಟ ಮಾಡುತ್ತಿಲ್ಲ. ಬದಲಾಗಿ ಏಷ್ಯಾ ಮತ್ತು ಆಫ್ರಿಕಾದ ಹಲವು ಬಡದೇಶಗಳಲ್ಲೂ ಮಾರಾಟ ಮಾಡುತ್ತಿದೆ. ಈ ಪೈಕಿ ಥಾಯ್ಲೆಂಡ್‌ನ ಉತ್ಪನ್ನಗಳಲ್ಲಿ 6 ಗ್ರಾಂನಷ್ಟು ಸಕ್ಕರೆ ಪತ್ತೆಯಾಗಿದೆ ಎಂದು ವರದಿ ಹೇಳಿದೆ.ಈ ಕುರಿತು ಮಾತನಾಡಿದ ಭಾರತೀಯ ಮಕ್ಕಳ ವೈದ್ಯ ಡಾ.ಅರುಣ್‌ ಗುಪ್ತಾ, ‘ಸಕ್ಕರೆ ಅಂಶ ಜಾಸ್ತಿ ಹಾಕುವುದರಿಂದ ಮಕ್ಕಳ ಆಹಾರದ ಸಿಹಿ ಹೆಚ್ಚುತ್ತದೆ. ಇದರಿಂದ ಮಕ್ಕಳಿಗೂ ಆಹಾರವನ್ನು ಸೇವಿಸುವಾಗ ಸಂತೋಷವಾಗುವ ಜೊತೆಗೆ ಪೋಷಕರೂ ಹೆಚ್ಚು ಸಂತೋಷದಿಂದ ಅಂತಹ ಆಹಾರಗಳನ್ನು ಖರೀದಿಸುತ್ತಾರೆ. ಇದರಿಂದ ಕಂಪನಿ ಆದಾಯ ಹೆಚ್ಚುತ್ತದೆ. ಭಾರತದಲ್ಲಿ ನಿಯಂತ್ರಣಾ ಕ್ರಮಗಳು ಕಠಿಣವಾಗಿಲ್ಲದ ಕಾರಣ ಕಂಪನಿಗಳು ಇಂಥ ವಿಷಯವನ್ನು ಸುಲಭವಾಗಿ ಮುಂದುವರೆಸುತ್ತವೆ’ ಎಂದು ಹೇಳಿದ್ದಾರೆ.

ಈ ನಡುವೆ ವರದಿ ಕುರಿತು ಪ್ರತಿಕ್ರಿಯಿಸಿರುವ ನೆಸ್ಟ್ಲೆ ಇಂಡಿಯಾದ ವಕ್ತಾರರು, ‘ನವಜಾತ ಶಿಶುಗಳ ಆಹಾರ ಉತ್ಪನ್ನಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಕಾಪಾಡುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ ಕಳೆದ 5 ವರ್ಷಗಳಲ್ಲಿ ನಾವು ಸಕ್ಕರೆ ಬಳಕೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆ ಮಾಡಿದ್ದೇವೆ’ ಎಂದು ಹೇಳಿದ್ದಾರೆ.

Share this article