ಮಾಸ್ಕೋ: 16 ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದಿದ್ದ ಉಗ್ರರ ಸರಣಿ ದಾಳಿಯನ್ನು ನೆನಪಿಸುವ ರೀತಿಯ ಭೀಕರ ದಾಳಿಯೊಂದು ಶುಕ್ರವಾರ ರಾತ್ರಿ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ.
ಇಲ್ಲಿನ ಬೃಹತ್ ಶಾಪಿಂಗ್ ಮಾಲ್ ಹಾಗೂ ಅದರೊಳಗೇ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮವೊಂದರ ಮೇಲೆ ಉಗ್ರಗಾಮಿಗಳು ಗುಂಡಿನ ಮಳೆಗರೆದಿದ್ದು, ಬಳಿಕ ಗ್ರೆನೇಡ್ ಎಸೆದು ಇಡೀ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ.
ಘಟನೆಯಲ್ಲಿ 133ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಷ್ಯಾ ಅಧ್ಯಕ್ಷರಾಗಿ ವ್ಲಾದಿಮಿರ್ ಪುಟಿನ್ ಅವರು ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಈ ದಾಳಿ ನಡೆದಿದ್ದು, ಇದರ ಹೊಣೆಯನ್ನು ಕುಖ್ಯಾತ ಉಗ್ರಗಾಮಿ ಸಂಘಟನೆ ಐಸಿಸ್ ಹೊತ್ತುಕೊಂಡಿದೆ.
ದಾಳಿಯ ತೀವ್ರತೆಗೆ ಶಾಪಿಂಗ್ ಮಾಲ್‌ನ ಸೂರು ಹೊತ್ತಿ ಉರಿದಿದ್ದು, ಅದನ್ನು ಅಗ್ನಿಶಾಮಕ ವಾಹನ ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿ ನಂದಿಸಲಾಗಿದೆ.
ಏತನ್ಮಧ್ಯೆ, 11 ಮಂದಿಯನ್ನು ರಷ್ಯಾ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ನಾಲ್ವರು ಭಯೋತ್ಪಾದಕ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದು, ಅವರನ್ನು ಉಕ್ರೇನ್ ಗಡಿಯ ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಷ್ಯಾ- ಉಕ್ರೇನ್ ಮೂರು ವರ್ಷಗಳಿಂದ ಸಮರದಲ್ಲಿ ನಿರತವಾಗಿರುವಾಗಲೇ, ಈ ಭಯೋತ್ಪಾದಕರ ದಾಳಿ ನಡೆದಿದೆ. ಈ ದಾಳಿಯ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ರಷ್ಯಾದ ಕೆಲವು ಜನನಾಯಕರು ಆಪಾದಿಸಿದ್ದಾರೆ.
ಇದನ್ನು ತಿರಸ್ಕರಿಸಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಭಯೋತ್ಪಾದಕ ವಿಧಾನವನ್ನು ಉಕ್ರೇನ್ ಎಂದಿಗೂ ಬಳಸುವುದಿಲ್ಲ. ಯುದ್ಧ ಭೂಮಿಯಲ್ಲೇ ಎಲ್ಲವೂ ನಿರ್ಧಾರವಾಗಲಿದೆ ಎಂದು ಗುಡುಗಿದ್ದಾರೆ.
ಇದೇ ವೇಳೆ, ಅಫ್ಘಾನಿಸ್ತಾನದ ಐಸಿಸ್ ಸಂಘಟನೆಯ ಶಾಖೆಯೊಂದು ದಾಳಿ ನಡೆಸಲಿದೆ ಎಂಬ ಗುಪ್ತಚರ ಮಾಹಿತಿಯನ್ನು ರಷ್ಯಾದ ಅಧಿಕಾರಿಗಳ ಜತೆ ಈ ಹಿಂದೆಯೇ ಹಂಚಿಕೊಳ್ಳಲಾಗಿತ್ತು ಎಂದು ಅಮೆರಿಕ ತಿಳಿಸಿದೆ.
ಗುಂಡಿನ ಸುರಿಮಳೆ: ಮಾಷ್ಕೋದ ಕ್ರೋಕಸ್ ಸಿಟಿ ಹಾಲ್‌ಗೆ ಶುಕ್ರವಾರ ಏಕಾಏಕಿ ಬಂದೂಕುಧಾರಿಗಳು ನುಗ್ಗಿ ಗುಂಡಿನ ದಾಳಿ ನಡೆಸಿದರು. ಮನಸೋ ಇಚ್ಛೆ ಗುಂಡು ಹಾರಿಸಿ ಸಿಕ್ಕಸಿಕ್ಕವರನ್ನೆಲ್ಲಾ ಕೊಂದರು.
ಈ ದೃಶ್ಯಗಳು ಸುದ್ದಿಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿ ಭಾರಿ ಸಂಚಲನಕ್ಕೆ ಕಾರಣವಾಯಿತು. ದಾಳಿಯ ತೀವ್ರತೆಗೆ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಸೂರಿಗೆ ಬೆಂಕಿ ಹೊತ್ತಿಕೊಂಡು ಪಸರಿಸಿತು.
ಬೆಂಕಿ ನಂದಿಸಲು ಅಗ್ನಿಶಾಮಕ ದಳಗಳು, ಹೆಲಿಕಾಪ್ಟರ್‌ಗಳು ಅವಿರತ ಶ್ರಮಿಸಿ, ಹಲವು ತಾಸಿನ ಬಳಿಕ ಯಶಸ್ವಿಯಾದವು.
ರಷ್ಯಾದ ರಕ್ಷಣಾ ತಂಡಗಳು ದಾಳಿ ಸ್ಥಳಕ್ಕೆ ಪ್ರವೇಶಿಸುವಷ್ಟರಲ್ಲಿ ದಾಳಿಕೋರರು ಪರಾರಿಯಾದರು. ನಂತರ ರಷ್ಯಾದ ತನಿಖಾಧಿಕಾರಿಗಳು ಪ್ರಕರಣ ಸಂಬಂಧ 11 ಮಂದಿಯನ್ನು ವಶಕ್ಕೆ ಪಡೆದರು.