ಸರಬ್ಜಿತ್‌ ಸಿಂಗ್ ಹಂತಕ ಪಾಕಲ್ಲಿ ನಿಗೂಢ ವ್ಯಕ್ತಿಗಳ ಗುಂಡಿಗೆ ಬಲಿ!

KannadaprabhaNewsNetwork |  
Published : Apr 15, 2024, 01:23 AM ISTUpdated : Apr 15, 2024, 04:06 AM IST
ಸರಬ್ಜಿತ್‌ | Kannada Prabha

ಸಾರಾಂಶ

ಉಗ್ರ ಹಫೀಜ್‌ ಸಯೀದ್‌ ಆಪ್ತನಾಗಿದ್ದ ಹಂತಕ ಅಮೀರ್ ತಾಂಬಾ ಬಲಿಯೊಂದಿಗೆ ಭಾರತಕ್ಕೆ ಬೇಕಾದ ವಿದೇಶಿ ಉಗ್ರರ ನಿಗೂಢ ಸಾವು 24ಕ್ಕೆ ಏರಿಕೆಯಾಗಿದೆ.

ಲಾಹೋರ್‌: ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದ ಭಾರತದ ಪಂಜಾಬ್‌ ಪ್ರಜೆ ಸರಬ್ಜಿತ್‌ ಸಿಂಗ್‌ ಹತ್ಯೆ ಪ್ರಕರಣದ ಆರೋಪಿಯೊಬ್ಬನನ್ನು ಪಾಕಿಸ್ತಾನದಲ್ಲಿ ನಿಗೂಢವಾಗಿ ಕೊಲ್ಲಲಾಗಿದೆ. ಇದರೊಂದಿಗೆ ಭಾರತಕ್ಕೆ ಬೇಕಾದ ವಿದೇಶಿ ಉಗ್ರಗಾಮಿಗಳು ವಿದೇಶಿ ನೆಲದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಆಮೀರ್‌ ತಾಂಬಾ ಎಂಬಾತನೇ ಹತ್ಯೆಯಾದವ. ಈತ ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆ ಸಂಸ್ಥಾಪಕ ಹಫೀಜ್‌ ಸಯೀದ್‌ ಆಪ್ತನೂ ಹೌದು. ಬೈಕ್‌ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಗುಂಡಿಟ್ಟು ಈತನನ್ನು ಕೊಂದಿದ್ದಾರೆ. ಲಾಹೋರ್‌ನ ಇಸ್ಲಾಮ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ತಾಂಬಾನನ್ನು ತಕ್ಷಣವೇ ಆಸ್ಪತ್ರೆಗೆ ಒಯ್ಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಗೂಢಚರ್ಯೆ ಆರೋಪದ ಮೇರೆಗೆ 1990ರಲ್ಲಿ ಸರಬ್ಜಿತ್‌ ಸಿಂಗ್‌ನನ್ನು ಪಾಕಿಸ್ತಾನ ಬಂಧಿಸಿತ್ತು. 23 ವರ್ಷಗಳ ಕಾಲ ಆತ ಪಾಕಿಸ್ತಾನ ಜೈಲಿನಲ್ಲಿದ್ದ. ಈ ನಡುವೆ, 2013ರಲ್ಲಿ ಸರಬ್ಜಿತ್‌ ಸಿಂಗ್‌ಗೆ ಜೈಲಿನಲ್ಲೇ ತಾಂಬಾ ಹಾಗೂ ಮುದಾಸ್ಸರ್‌ ಎಂಬಿಬ್ಬರು ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರು. ಸಂಸತ್‌ ಭವನದ ದಾಳಿ ಪ್ರಕರಣದ ರೂವಾರಿ ಅಫ್ಜಲ್‌ ಗುರುವನ್ನು ದೆಹಲಿಯಲ್ಲಿ ಗಲ್ಲಿಗೇರಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿತ್ತು. ಬಳಿಕ ಸರಬ್ಜಿತ್‌ ಸಿಂಗ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಹೃದಯ ಸ್ತಂಭನದಿಂದ ಆತ 2013ರ ಮೇನಲ್ಲಿ ಕೊನೆಯುಸಿರೆಳೆದಿದ್ದ.

ಈ ನಡುವೆ, ತಾಂಬಾ ಹಾಗೂ ಮುದಾಸ್ಸರ್‌ನನ್ನು ಸಾಕ್ಷ್ಯಾಧಾರಗಳ ಕೊರತೆ ಕಾರಣ 2018ರಲ್ಲಿ ಪಾಕಿಸ್ತಾನ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ಪಾಕ್‌ ಜೈಲಿನಲ್ಲೇ ಈತ ಸರಬ್ಜಿತ್‌ನನ್ನು ಕೊಂದಿದ್ದ ಗೂಢಚರ್ಯೆ ಆರೋಪದ ಮೇರೆಗೆ 1990ರಲ್ಲಿ ಭಾರತದ ಸರಬ್ಜಿತ್‌ ಸಿಂಗ್‌ನನ್ನು ಪಾಕಿಸ್ತಾನ ಬಂಧಿಸಿತ್ತು. 23 ವರ್ಷಗಳ ಕಾಲ ಆತ ಪಾಕಿಸ್ತಾನದ ಜೈಲಿನಲ್ಲಿದ್ದ. 2013ರಲ್ಲಿ ಆತನಿಗೆ ಜೈಲಿನಲ್ಲೇ ತಾಂಬಾ ಹಾಗೂ ಮುದಾಸ್ಸರ್‌ ಎಂಬಿಬ್ಬರು ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರು. ಸಂಸತ್‌ ಭವನದ ದಾಳಿಕೋರ ಅಫ್ಜಲ್‌ ಗುರುವನ್ನು ದೆಹಲಿಯಲ್ಲಿ ಗಲ್ಲಿಗೇರಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿತ್ತು. ಬಳಿಕ ಸರಬ್ಜಿತ್‌ ಸಾವನ್ನಪ್ಪಿದ್ದ.

PREV

Recommended Stories

ಪಿಒಕೆನಲ್ಲಿ ಪಹಲ್ಗಾಂ ಉಗ್ರನ ಸಾಂಕೇತಿಕ ಅಂತ್ಯಕ್ರಿಯೆ!
ಶ್ವೇತಭವನ ವಕ್ತಾರೆಯ ತುಟಿ, ಸೌಂದರ್ಯ ಹೊಗಳಿದ ಟ್ರಂಪ್!