70 ವರ್ಷಗಳ ಬಳಿಕ ಸೌದಿಯಲ್ಲಿ ಮದ್ಯ ಮಾರಾಟ ಮಳಿಗೆ ಆರಂಭ

KannadaprabhaNewsNetwork | Updated : Jan 26 2024, 07:40 AM IST

ಸಾರಾಂಶ

ಸೌದಿ ಅರೇಬಿಯಾದಲ್ಲಿ ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಮಾರಾಟ ಮಾಡುವ ಸಲುವಾಗಿ ಮದ್ಯ ಮಾರಾಟ ಮಳಿಗೆಯನ್ನು ತೆರೆಯಲು ಅಂತಿಮ ಹಂತದ ಸಿದ್ಧತೆಗಳು ನಡೆಸಿವೆ.

ರಿಯಾದ್‌: ಖಟ್ಟರ್‌ ಇಸ್ಲಾಂ ರಾಷ್ಟ್ರವಾಗಿರುವ ಸೌದಿ ಅರೇಬಿಯಾದಲ್ಲಿ 70 ವರ್ಷಗಳ ಬಳಿಕ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾರಾಟ ಮಾಡಲು ಮದ್ಯದಂಗಡಿಯನ್ನು ತೆರೆಯಲು ನಿರ್ಣಯ ತೆಗೆದುಕೊಳ್ಳಲಾಗಿದೆ. 

ಸೌದಿ ರಾಜಕುಮಾರನ ಕನಸಿನ ಯೋಜನೆಯಾದ ವಿಷನ್‌-2030ರಡಿಯಲ್ಲಿ ತನ್ನ ಆರ್ಥಿಕತೆಯನ್ನು ಮತ್ತಷ್ಟು ಸಶಕ್ತಗೊಳಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೊದಲ ಮದ್ಯದಂಗಡಿಯನ್ನು ರಾಜಧಾನಿ ರಿಯಾದ್‌ನಲ್ಲಿ ರಾಜತಾಂತ್ರಿಕ ಕಚೇರಿಗಳಿರುವ ಡಿಪ್ಲೊಮ್ಯಾಟಿಕ್‌ ಕ್ವಾರ್ಟರ್‌ ಪ್ರದೇಶದಲ್ಲಿ ತೆರೆಯಲು ಅಂತಿಮ ಸಿದ್ಧತೆಯಲ್ಲಿ ಸರ್ಕಾರ ತೊಡಗಿದೆ. 

ಇದಕ್ಕೂ ಮೊದಲು ಸೌದಿಯಲ್ಲಿರುವ ಮುಸ್ಲಿಮೇತರ ರಾಜತಾಂತ್ರಿಕ ಅಧಿಕಾರಿಗಳು ಮದ್ಯವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ಮೂಲಕ ತರಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. 

ಆದರೆ ಈ ಕ್ರಮದಲ್ಲಿ ದೇಶಕ್ಕೆ ಅನಿಯಂತ್ರಿತವಾಗಿ ಬರುವ ಮದ್ಯವನ್ನು ನಿಯಂತ್ರಿಸಲು ಹೊಸ ಕ್ರಮವನ್ನು ಕೈಗೊಳ್ಳಲಾಗಿದೆ ಎಂದೂ ತಿಳಿಸಿದೆ. 

ಪ್ರಸ್ತುತ ಸೌದಿ ಅರೆಬಿಯಾದಲ್ಲಿ ಮುಸ್ಲಿಮರಿಗೆ ಮದ್ಯ ಕುಡಿಯುವುದು ‘ಹರಾಮ್‌’(ನಿಷೇಧ) ಆಗಿದ್ದು, ಒಂದು ವೇಳೆ ಸಿಕ್ಕಿಬಿದ್ದಲ್ಲಿ ಅವರಿಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ. 

ಇತರ ಕೊಲ್ಲಿ ರಾಷ್ಟ್ರಗಳಲ್ಲಿ ಆಯ್ದ ಸ್ಥಳಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾ 2034ರಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು, ಜಾಗತಿಕ ಸಮುದಾಯದ ಮುಂದೆ ಟೀಕೆಗೆ ಗುರಿಯಾಗದಿರಲು ತನ್ನ ಕಠಿಣ ನಿಯಮಗಳನ್ನು ಒಂದೊಂದಾಗಿ ಸಡಿಲಗೊಳಿಸಲಿದೆ ಎನ್ನಲಾಗಿದೆ.

1950ರಲ್ಲಿ ಸೌದಿ ಅರೇಬಿಯಾ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು.

Share this article