ನವದೆಹಲಿ: ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಸೇನಾಪಡೆಯ ತುಕಡಿಯ ವಾಪಸ್ಸಾತಿ ಸದ್ಯಕ್ಕಿಲ್ಲ ಎಂದು ಭಾರತ ಹೇಳಿದೆ. ಚೀನಾ ಬೆಂಬಲಿತ ಮಯಿಜು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ ಸೇನೆಯನ್ನು ಮರಳಿ ಕರೆಸಿಕೊಳ್ಳುವಂತೆ ಭಾರತಕ್ಕೆ ಹಲವು ಬಾರಿ ಸೂಚಿಸಿದ್ದಲ್ಲದೇ ಇದಕ್ಕಾಗಿ ಗಡುವನ್ನು ಸಹ ನೀಡಿದ್ದರು.
ದೆಹಲಿಯಲ್ಲಿ ಮಾಧ್ಯಮವೊಂದರ ಜೊತೆ ಗುರುವಾರ ಮಾತನಾಡಿದ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ಮಾಲ್ಡೀವ್ಸ್‌ನಿಂದ ಸೇನಾಪಡೆಯನ್ನು ಮರಳಿ ಕರೆಸಿಕೊಳ್ಳುವ ಬಗ್ಗೆ ಭಾರತ ಸರ್ಕಾರ ಯಾವುದೇ ಸೂಚನೆಯನ್ನು ನೀಡಿಲ್ಲ.
ನಾವು ಸರ್ಕಾರದ ಆದೇಶಕ್ಕಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ. ಮಯಿಜು ಮಾಲ್ಡೀವ್ಸ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದು, ದ್ವೀಪರಾಷ್ಟ್ರದಲ್ಲಿರುವ 80 ಮಂದಿ ಭಾರತೀಯ ಯೋಧರನ್ನು ಮರಳಿ ಕರೆಸಿಕೊಳ್ಳಲು ಭಾರತಕ್ಕೆ ಮಾಲ್ಡೀವ್ಸ್ ಗಡುವು ನೀಡಿದೆ.