4ನೇ ಬಾರಿಗೆ ಆಯ್ಕೆಯಾದ ಅವಾಮಿ ಲೀಗ್‌ ನಾಯಕಿ ಶೇಖ್‌ ಹಸೀನಾ ಇದೀಗ ದೇಶಬಿಟ್ಟು ಪರಾರಿ

KannadaprabhaNewsNetwork |  
Published : Aug 06, 2024, 12:32 AM ISTUpdated : Aug 06, 2024, 05:00 AM IST
ಹಸಿನಾ | Kannada Prabha

ಸಾರಾಂಶ

ಸತತ 4 ಬಾರಿ ಮತ್ತು ಒಟ್ಟು 5 ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವಾಮಿ ಲೀಗ್‌ ನಾಯಕಿ ಶೇಖ್‌ ಹಸೀನಾ ಇದೀಗ ದೇಶದ ತೊರೆದು ಪರದೇಶದ ಪಾಲಾಗಿದ್ದಾರೆ.

ಢಾಕಾ: ಸತತ 4 ಬಾರಿ ಮತ್ತು ಒಟ್ಟು 5 ಬಾರಿ ಬಾಂಗ್ಲಾದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅವಾಮಿ ಲೀಗ್‌ ನಾಯಕಿ ಶೇಖ್‌ ಹಸೀನಾ ಇದೀಗ ದೇಶದ ತೊರೆದು ಪರದೇಶದ ಪಾಲಾಗಿದ್ದಾರೆ.

ಹಾಗೆ ನೋಡಿದರೆ ಅವಾಮಿ ಲೀಗ್‌ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿತ್ತು. ಅದರ ನಾಯಕರಾಗಿದ್ದ ಶೇಖ್‌ ಮುಜೀಬರ್‌ ರೆಹಮಾನ್‌, ಬಾಂಗ್ಲಾದ ಸಂಸ್ಥಾಪಕರೆಂದೇ ಗುರುತಿಸಿಕೊಂಡವರು. ಅವರ ಪುತ್ರಿಯಾಗಿ ರಾಜಕೀಯಕ್ಕೆ ಕಾಲಿಟ್ಟು ಉಕ್ಕಿನ ಮಹಿಳೆ ಎನ್ನಿಸಿಕೊಂಡಿದ್ದ ಹಸೀನಾ ಇದೀಗ ಅಸ್ತಿತ್ವದ ಪ್ರಶ್ನೆ ಎದುರಿಸುವ ಸ್ಥಿತಿ ತಲುಪಿದ್ದಾರೆ.

1947ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಜನಿಸಿದ ಹಸೀನಾ ಢಾಕಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ನಡೆಸುತ್ತಿದ್ದಾಗಲೇ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ತಂದೆ ರೆಹಮಾನ್‌ರನ್ನು ಪಾಕಿಸ್ತಾನ ಸರ್ಕಾರ ಬಂಧಿಸಿದ ಸಂದರ್ಭದಲ್ಲಿ ಅವರ ರಾಜಕೀಯ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

1975ರಲ್ಲಿ ತಂದೆ, ತಾಯಿ ಮತ್ತು ಮೂವರು ಸಹೋದರರನ್ನು ಕಳೆದುಕೊಂಡ ವೇಳೆ ಹಸೀನಾ ಮುಂದಿನ ಆರು ವರ್ಷ ಕಾಲ ಭಾರತದಲ್ಲಿ ಆಶ್ರಯ ಪಡೆದಿದ್ದರು. 1981ರಲ್ಲಿ ತಾಯ್ನಾಡಿಗೆ ಮರಳಿದ ಹಸೀನಾ, ತಮ್ಮ ತಂದೆ ಸ್ಥಾಪಿಸಿದ್ದ ಅವಾಮಿ ಲೀಗ್‌ನ ನಾಯಕಿಯಾದರು. ಸೇನಾ ಆಡಳಿತದಲ್ಲಿ ನಲುಗುತ್ತಿದ್ದ ಬಾಂಗ್ಲಾದಲ್ಲಿ ಪ್ರಜಾಪ್ರಭುತ್ವದ ಪರ ದನಿಯೆತ್ತಿ ಗೃಹ ಬಂಧನಕ್ಕೆ ಒಳಗಾಗಿದ್ದರು.

1991ರಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿ ಬಿಎನ್‌ಪಿಯ ಖಲೀದಾ ಜಿಯಾರ ವಿರುದ್ಧ ಸೋಲನ್ನು ಅನುಭವಿಸಿದ್ದರು. /ಆದರೂ ಹೋರಾಟ ನಿಲ್ಲಿಸದ ಸೀನಾ 1996ರಲ್ಲಿ ಬಾಂಗ್ಲಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2004ರಲ್ಲಿ ರ್‍ಯಾಲಿ ವೇಳೆ ಗ್ರೆನೇಡ್‌ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾದ ಅವರು 2009ರಲ್ಲಿ ಮತ್ತೆ ಪ್ರಧಾನಿ ಹುದ್ದೆಗೇರಿ  15 ವರ್ಷಗಳ ಕಾಲ ಆಡಳಿತ ನಡೆಸಿದರು. ಈ ಅವಧಿಯಲ್ಲಿ ಬಿಎನ್‌ಪಿಯ ಮಿತ್ರಪಕ್ಷವಾಗಿದ್ದ ಜಮಾತೆ-ಇ-ಇಸ್ಲಾಂ ಅನ್ನು ನಿಷೇಧಿಸಿ ಜಿಯಾರನ್ನು ಜೈಲಿಗಟ್ಟಿದರು.

ಬಾಂಗ್ಲಾ: ಹಸೀನಾ ವಿರೋಧಿ ಜಿಯಾ ಬಿಡುಗಡೆಗೆ ಆದೇಶ 

ಢಾಕಾ: ಬಾಂಗ್ಲಾದೇಶದಿಂದ ನಿರ್ಗಮಿತ ಪ್ರಧಾನಿ ಶೇಖ್‌ ಹಸೀನಾ ಪರಾರಿ ಬೆನ್ನಲ್ಲೇ, ಜೈಲು ಪಾಲಾಗಿದ್ದ ಅವರ ರಾಜಕೀಯ ಕಡುವೈರಿ ಹಾಗೂ ಬಾಂಗ್ಲಾದೇಶ ರಾಷ್ಟ್ರೀಯವಾದಿ ಪಕ್ಷ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರ ಬಿಡುಗಡೆಗೆ ಬಾಂಗ್ಲಾ ಅಧ್ಯಕ್ಷರು ಸೋಮವಾರ ರಾತ್ರಿ ಆದೇಶಿಸಿದ್ದಾರೆ. ವಿವಿಧ ಭ್ರಷ್ಟಾಚಾರ ಅರೋಪ ಹೊರಿಸಿ 2 ಬಾರಿ ಪ್ರಧಾನಿ ಆಗಿದ್ದ ಜಿಯಾರನ್ನು ಹಸೀನಾ ಜೈಲಿಗೆ ಹಾಕಿಸಿದ್ದರು. ಇದೇ ವೇಳೆ, ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬಂಧಿತರಾಗಿದ್ದ ಎಲ್ಲರ ಬಿಡುಗಡೆಗೂ ಅಧ್ಯಕ್ಷರು ಆದೇಶಿಸಿದ್ದಾರೆ. 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಉಗ್ರರಿಗೆ ಹೆದರಿ ಹೊಸ ವರ್ಷಾಚರಣೆಯೇ ರದ್ದು
ಬಾಂಗ್ಲಾ ಹಿಂದು ವ್ಯಕ್ತಿ ಹತ್ಯೆ : 7 ಮಂದಿ ಸೆರೆ