ಬಾಹ್ಯಾಕಾಶದಲ್ಲಿ ಭಾರತದ ಪರವಾಗಿ ಶುಭಾಂಶು ಶುಕ್ಲಾ 7 ಪ್ರಯೋಗ

Published : Jun 27, 2025, 06:57 AM IST
Group Captain Shubhanshu Shukla shares his first in-flight experience aboard Ax-4 (Image Source: Axiom Space)

ಸಾರಾಂಶ

14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ.

14 ದಿನ ಐಎಸ್​ಎಸ್​ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನ ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗ ಮಾಡಲಿದ್ದಾರೆ. ವಿಶೇಷವೆಂದರೆ ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗ ಹಾಗೂ ದೆಹಲಿಯ 2, ಕೇರಳದ 1 ಪ್ರಯೋಗ ನಡೆಯಲಿದೆ.

ಕರ್ನಾಟಕದ ಪ್ರಯೋಗಗಳು ಯಾವುವು? ಸಿದ್ಧಪಡಿಸಿದ್ದು ಎಲ್ಲಿ?

1. ಮಯೋಜೆನೆಸಿಸ್ (ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ)

2. ನೀರು ಕರಡಿ ಪ್ರಯೋಗ (ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ)

3. ಎಲೆಕ್ಟ್ರಾನಿಕ್ ಡಿಸ್​ಪ್ಲೇ (ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ)

4. ಮೊಳಕೆ ಬೀಜಗಳ ಅಧ್ಯಯನ (ಧಾರವಾಡದ ಕೃಷಿ ವಿವಿ)

1. ಮಯೋಜೆನೆಸಿಸ್: ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸ್ನಾಯು ನಷ್ಟ ಅನುಭವಿಸುತ್ತಾರೆ. ಉದಾಹರಣೆಗೆ ಸುನೀತಾ ವಿಲಿಯಮ್ಸ್ ಐಎಸ್ಎಸ್‌ನಲ್ಲಿ 9.5 ತಿಂಗಳ ಕಾಲ ಸೇವೆ ಸಲ್ಲಿಸಿ ಭೂಮಿಗೆ ಬಂದಾಗ ಅವರ ಕಾಲು ಮತ್ತು ಬೆನ್ನಿನ ಸ್ನಾಯುಗಳು ಗಮನಾರ್ಹವಾಗಿ ದುರ್ಬಲವಾಗಿದ್ದವು. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯು ಕ್ಷೀಣತೆಗೆ ಕಾರಣವೇನು ಎಂಬುದರ ಬಗ್ಗೆ ಶುಕ್ಲಾ ಪ್ರಯೋಗ ನಡೆಸಲಿದ್ದಾರೆ. ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ ಈ ಪ್ರಯೋಗವನ್ನು ಸಿದ್ಧಪಡಿಸಿದೆ.

2. ನೀರು ಕರಡಿ ಪ್ರಯೋಗ: ವಾಯೇಜರ್ ಟಾರ್ಡಿಗ್ರೇಡ್ಸ್ ಎಂದು ಕರೆಯಲ್ಪಡುವ ನೀರು ಕರಡಿಗಳು ಬಾಹ್ಯಾಕಾಶದಲ್ಲಿ ಹೇಗೆ ಬದುಕುಳಿಯುತ್ತವೆ ಎಂಬ ಬಗ್ಗೆ ಸಂಶೋಧನೆ ಮಾಡಲಾಗುತ್ತದೆ. ಇದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಿಂದ ಸಿದ್ಧಪಡಿಸಲಾಗಿದೆ.

3. ಎಲೆಕ್ಟ್ರಾನಿಕ್ ಡಿಸ್​ಪ್ಲೇ: ಬಾಹ್ಯಾಕಾಶದಲ್ಲಿ ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಪರದೆಗಳನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳನ್ನು ಶುಕ್ಲಾ ಸಂಶೋಧಿಸಲಿದ್ದಾರೆ. ಇದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದೆ.

4. ಮೊಳಕೆ ಬೀಜಗಳ ಅಧ್ಯಯನ: ಬಾಹ್ಯಾಕಾಶ ಆಧರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಹೆಸರುಕಾಳು ಮತ್ತು ಮೆಂತ್ಯ ಬೀಜಗಳ ಮೊಳಕೆಯ ಅಧ್ಯಯನ ಮಾಡಲಾಗುತ್ತದೆ. ಧಾರವಾಡದ ಕೃಷಿ ವಿವಿ ಇವುಗಳನ್ನು ಕಳಿಸಿಕೊಟ್ಟಿದೆ.

5. ಆಹಾರ ಬೆಳೆಗಳ ಅಧ್ಯಯನ: ಬಾಹ್ಯಾಕಾಶದಲ್ಲಿ ವಿವಿಧ ಆಹಾರ ಬೆಳೆಗಳ ಬೆಳವಣಿಗೆ ಮತ್ತು ಆನುವಂಶಿಕ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಕೇರಳದ ತಿರುವನಂತಪುರಂನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಇದನ್ನು ಸಿದ್ಧಪಡಿಸಿದೆ.

6. ಪಾಚಿಗಳ ಅಧ್ಯಯನ: ಗುರುತ್ವಾಕರ್ಷಣೆ ಇಲ್ಲದ ಜಾಗದಲ್ಲಿ ಸೂಕ್ಷ್ಮ ಪಾಚಿಗಳು ಹೇಗೆ ಬೆಳೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು 3 ತಳಿಗಳ ಪಾಚಿಗಳ ಬೆಳವಣಿಗೆ, ಚಯಾಪಚಯ ಕ್ರಿಯೆ ಮತ್ತು ಆನುವಂಶಿಕ ಚಟುವಟಿಕೆಗಳ ಅಧ್ಯಯನ ಮಾಡಲಾಗುತ್ತದೆ. ಇದನ್ನು ದೆಹಲಿಯ ಐಸಿಜಿಇಬಿಯ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.

7. ಸೈನೋಬ್ಯಾಕ್ಟೀರಿಯಾ: ಬಾಹ್ಯಾಕಾಶದಲ್ಲಿ 2 ವಿಧದ ಸೈನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ ಮಾಡಲಾಗುತ್ತದೆ. ದೆಹಲಿಯ ಐಸಿಜಿಇಬಿಯ ವಿಜ್ಞಾನಿಗಳು ಈ ಪ್ರಯೋಗವನ್ನು ಸಿದ್ಧಪಡಿಸಿದ್ದಾರೆ.

 

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.
Read more Articles on

Recommended Stories

ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಿದ್ಧತೆ?
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌