ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ಜಂಟಿದಾಳಿಯಿಂದ ನುಜ್ಜುಗುಜ್ಜಾಗುತ್ತಿರುವ ಇರಾನ್‌ ಇದ್ದಕ್ಕಿದ್ದಂತೆ ಯುದ್ಧ ಸ್ಥಗಿತದ ಮಾತುಗಳನ್ನಾಡತೊಡಗಿದೆ. ‘ಯುದ್ಧ ನಿಲ್ಲಿಸಲು ನಾವು ತಯಾರಿದ್ದೇವೆ. ಆದರೆ ಘನತೆಯುತ ಮಾತುಕತೆಗೆ ಮುಂದಾಗಲು ಸಿದ್ಧರಿದ್ದೇವೆ’ ಎಂದ ಇರಾನ್‌ ಸರ್ವೋಚ್ಚ ನಾಯಕ 

 ಟೆಹ್ರಾನ್‌ : ಅಮೆರಿಕ ಮತ್ತು ಇಸ್ರೇಲ್‌ನ ಭೀಕರ ಜಂಟಿದಾಳಿಯಿಂದ ನುಜ್ಜುಗುಜ್ಜಾಗುತ್ತಿರುವ ಇರಾನ್‌ ಇದ್ದಕ್ಕಿದ್ದಂತೆ ಯುದ್ಧ ಸ್ಥಗಿತದ ಮಾತುಗಳನ್ನಾಡತೊಡಗಿದೆ. ‘ಯುದ್ಧ ನಿಲ್ಲಿಸಲು ನಾವು ತಯಾರಿದ್ದೇವೆ. ಆದರೆ ಘನತೆಯುತ ಮಾತುಕತೆಗೆ ಮುಂದಾಗಲು ಸಿದ್ಧರಿದ್ದೇವೆ’ ಎಂದು ಇರಾನ್‌ ಸರ್ವೋಚ್ಚ ನಾಯಕನ ವಿಶೇಷ ಪ್ರತಿನಿಧಿ ಅಬ್ದುಲ್‌ ಮಜೀದ್‌ ಹಕೀಂ ಇಲಾಹಿ ಹೇಳಿದ್ದಾರೆ. ಇನ್ನೊಂದು ತಿಂಗಳು ಈ ದಾಳಿಗಳು ನಡೆಯುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ ಬೆನ್ನಲ್ಲೇ ಇರಾನ್‌ ಕಡೆಯಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹ. 

ಎಎನ್‌ಐ ಜತೆ ಮಾತನಾಡಿದ ಹಕೀಂ

ಎಎನ್‌ಐ ಜತೆ ಮಾತನಾಡಿದ ಹಕೀಂ, ‘ಒಂದೊಮ್ಮೆ ನಮ್ಮ ಮೇಲಿನ ಆಕ್ರಮಣ ನಿಲ್ಲಿಸಲು ಅವರು (ಅಮೆರಿಕ ಮತ್ತು ಇಸ್ರೇಲ್‌) ಮುಂದಾದರೆ ಹಾಗೂ ಪ್ರಸ್ತುತ ಹೇರಲಾಗಿರುವ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸುವ ಭರವಸೆ ನೀಡಿದರೆ ನಾವು ದಾಳಿ ನಿಲ್ಲಿಸಿ ಮಾತುಕತೆಗೆ ಮುಂದಾಗುತ್ತೇವೆ. ಆದರೆ ಅದು ಗೌರವಯುತವಾಗಿರಬೇಕೇ ಹೊರತು ಇರಾನ್‌ ಹಿತಾಸಕ್ತಿಗೆ ವಿರುದ್ಧವಾಗಿ ಇರಬಾರದು. ನಮಗೆ ನಮ್ಮ ಹಕ್ಕುಗಳು ಬೇಕು’ ಎಂದು ಹೇಳಿದ್ದಾರೆ.

ಯುದ್ಧವನ್ನು ನಿಲ್ಲಿಸುವ ಜವಾಬ್ದಾರಿಯೂ ಅವರದ್ದೇ

‘ದಾಳಿಯನ್ನು ಅಮೆರಿಕ ಶುರು ಮಾಡಿರುವುದರಿಂದ ಈ ಯುದ್ಧವನ್ನು ನಿಲ್ಲಿಸುವ ಜವಾಬ್ದಾರಿಯೂ ಅವರದ್ದೇ’ ಎಂದಿರುವ ಅವರು, ಈ ಹಿಂದೆ ಒಮಾನ್‌ ಮಧ್ಯಸ್ಥಿತಿಕೆಯಲ್ಲಿ ಜಿನೇವಾದಲ್ಲಿ ನಡೆದ ಮಾತುಕತೆಯನ್ನು ಸ್ಮರಿಸಿದ್ದಾರೆ. ‘ಅಮೆರಿಕದೊಂದಿಗಿನ ನಮ್ಮ ಮಾತುಕತೆ ಅಂತಿಮ ಹಂತ ತಲುಪಿತ್ತು. ಅಲ್ಲಿನ ವಿದೇಶಾಂಗ ಸಚಿವರು ಕೂಡ ಒಳ್ಳೆ ಒಪ್ಪಂದ ಕುದುರಿದೆ ಎಂದು ಸಂತಸ ವ್ಯಕ್ತಪಡಿಸಿದ್ದರು. ನಾವು ಮತ್ತು ಅಮೆರಿಕ ಸೇರಿ ಜಂಟಿಯಾಗಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ, ಸಂಘರ್ಷ ಅಂತ್ಯ ಹಾಡಲು ಎದುರುನೋಡುತ್ತಿದ್ದೆವು’ ಎಂದು ಅವರು ತಿಳಿಸಿದ್ದಾರೆ.