ಹೂಸ್ಟನ್: ಶಿಯಾಗಳ ಪರಮೋಚ್ಚ ನಾಯಕ ಖಮೇನಿ ಹತ್ಯೆ ಜಾಗತಿಕ ಮಟ್ಟದಲ್ಲಿ ಪ್ರತೀಕಾರದ ದಾಳಿಗೆ ಕಾರಣವಾಗಬಹುದು ಎಂಬ ಜಾಗತಿಕ ಗುಪ್ತಚರ ಸಂಸ್ಥೆ, ಭಾರತ ಸರ್ಕಾರದ ಕಳವಳದ ನಡುವೆಯೇ, ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿನಿ ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಾಳಿಕೋರ ಇರಾನ್ ಧ್ವಜದ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಎಂಬುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿದೆ.
ಟೆಕ್ಸಾಸ್ ವಿವಿಯಲ್ಲಿ ಪದವಿ ಓದುತ್ತಿದ್ದ ಭಾರತ ಮೂಲದ ಸವಿತಾ ಶಾನ್ (21) ಮೃತ ದುರ್ದೈವಿ. ಮೊನ್ನೆಯಷ್ಟೇ ಇರಾನ್‌ನಲ್ಲಿ ಭಾರತೀಯ ನಾವಿಕನೊಬ್ಬ ಸಾವನ್ನಪ್ಪಿದ್ದ. ಇದೀಗ ಯುದ್ಧಕ್ಕೆ 2ನೇ ಭಾರತೀಯ ವ್ಯಕ್ತಿ ಬಲಿಯಾದಂತಾಗಿದೆ.
ಆಗಿದ್ದೇನು?:
ಸವಿತಾ ಶಾನ್ ಟೆಕ್ಸಾಸ್‌ನ ವೆಸ್ಟ್ ಸಿಕ್ಸ್ತ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸವಿತಾ ಹಾಗೂ ರೈಡರ್ ಹ್ಯಾರಿಂಗ್ಟನ್ (19) ಇನ್ನೊಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇತರ 14 ಮಂದಿ ಗಾಯಗೊಂಡಿದ್ದಾರೆ. ದಾಳಿಕೋರ ಧರಿಸಿದ್ದ ಟೀಶರ್ಟ್ ಮೇಲೆ ಇರಾನ್‌ನ ಧ್ವಜದ ಚಿತ್ರ ಹಾಗೂ ‘ಅಲ್ಲಾಹುವಿನ ಆಸ್ತಿ’ (ಪ್ರಾಪರ್ಟಿ ಆಫ್ ಅಲ್ಲಾ) ಎಂದು ಬರೆದಿತ್ತು ಎಂದು ತಿಳಿದುಬಂದಿದೆ.
‘ಆರೋಪಿ ನ್ಡಿಯಾಗಾ ಡಯಾಗ್ನೆ
‘ಆರೋಪಿಯನ್ನು ನ್ಡಿಯಾಗಾ ಡಯಾಗ್ನೆ (53) ಎಂದು ಗುರುತಿಸಲಾಗಿದೆ. ಈತ ಸೆನೆಗಲ್ ಮೂಲದವನಾಗಿದ್ದು, ಅಮೆರಿಕಕ್ಕೆ ವಲಸೆ ಬಂದಿದ್ದಾನೆ. ಈತನಿಗೆ ಉಗ್ರವಾದದ ನಂಟಿರುವ ಶಂಕೆಯಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಘಟನೆ ಹಿಂದೆ ಉಗ್ರರ ಕೈವಾಡವಿರುವ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.
