ಕನ್ನಡಪ್ರಭ ವಾರ್ತೆ ಕಾರವಾರ

ಕೈಗಾ ಅಣುವಿದ್ಯುತ್ ಸ್ಥಾವರವು ಇಂದು ಭೂಮಿ, ಮನೆ-ಮಠ ಕಳೆದುಕೊಂಡ ನಿರಾಶ್ರಿತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಉದ್ಯೋಗದಲ್ಲಿ ಸ್ಥಳೀಯರನ್ನು ಕಡೆಗಣಿಸುತ್ತಿರುವ ಆಡಳಿತ ಮಂಡಳಿಯ ಧೋರಣೆ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ವಂಚನೆ ಖಂಡಿಸಿ ಮಾ. 28ರಂದು ಕೈಗಾ ಚಲೋ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ವಿದ್ಯಾರ್ಥಿ ಒಕ್ಕೂಟದ ಮುಖಂಡ ರಾಘು ನಾಯ್ಕ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾದ 5 ಮತ್ತು 6ನೇ ಘಟಕಗಳಿಗಾಗಿ ಮಲ್ಲಾಪುರ ಹಾಗೂ ಕದ್ರಾ ಭಾಗದ ಜನರು ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆದರೆ ಆಡಳಿತ ಮಂಡಳಿಯು ಸ್ಥಳೀಯರಿಗೆ ಕೆಲಸ ನೀಡದೆ, ಉತ್ತರ ಪ್ರದೇಶ, ಬಿಹಾರ, ಕೇರಳ ಹಾಗೂ ತಮಿಳುನಾಡು ಮೂಲದವರಿಗೆ ಮಣೆ ಹಾಕುತ್ತಿದೆ. ಅಪ್ರೆಂಟಿಸ್ ತರಬೇತಿ ನೀಡಿದರೂ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಅಲ್ಲದೆ, ಕಾರವಾರದಲ್ಲಿ ಸಕಲ ಸೌಲಭ್ಯವಿದ್ದರೂ ಪರೀಕ್ಷಾ ಕೇಂದ್ರಗಳನ್ನು ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಮುಂಬೈಗೆ ನಿಗದಿಪಡಿಸುವ ಮೂಲಕ ಸ್ಥಳೀಯ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾ ಸುತ್ತಮುತ್ತಲಿನ 18 ಕಿಮೀ ವ್ಯಾಪ್ತಿಯ ಅಭಿವೃದ್ಧಿಗೆ ಶೇ. 2ರಷ್ಟು ಅಣುವಿದ್ಯುತ್ ಪ್ರಭಾವದಿಂದ ಸ್ಥಳೀಯರು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಜಿಲ್ಲಾಸ್ಪತ್ರೆಗೆ ಕನಿಷ್ಠ ಒಂದು ಎಂಆರ್‌ಐ ಸ್ಕ್ಯಾನರ್ ಒದಗಿಸಲು ಕೈಗಾ ಆಡಳಿತ ಮಂಡಳಿ ವಿಫಲವಾಗಿದೆ. ಕೈಗಾ ಉದ್ಯೋಗಿಗಳಿಗೆ ಮಂಗಳೂರಿನಲ್ಲಿ ಚಿಕಿತ್ಸೆ ಸಿಗುತ್ತಿದೆ, ಆದರೆ ಭೂಮಿ ನೀಡಿದ ನಿರಾಶ್ರಿತರು ಅನಾಥರಾಗಿದ್ದಾರೆ ಎಂದು ರಾಘು ನಾಯ್ಕ ದೂರಿದರು.

ಸ್ಥಳೀಯವಾಗಿ ಉದ್ಯೋಗ ಸಿಗದೆ ಜಿಲ್ಲೆಯ ವಿದ್ಯಾವಂತ ಯುವಕರು ಕೇವಲ ₹12-16 ಸಾವಿರ ವೇತನಕ್ಕಾಗಿ ಗೋವಾ, ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ ಎಂದರು.


28ರ ಬೆಳಗ್ಗೆ 9 ಗಂಟೆಗೆ ಸದಾಶಿವಗಡದಿಂದ ಪಾದಯಾತ್ರೆ ಆರಂಭವಾಗಲಿದ್ದು, ದಾರಿಯುದ್ದಕ್ಕೂ ಅಸ್ನೋಟಿ, ಹಣಕೋಣ ಹಾಗೂ ಹೋಟೆಗಾಳಿ ಸೇರಿದಂತೆ ವಿವಿಧ ಗ್ರಾಮಸ್ಥರು ಬೆಂಬಲ ನೀಡಲಿದ್ದಾರೆ. ಶನಿವಾರ ರಾತ್ರಿ ಹೋಟೆಗಾಳಿಯಲ್ಲಿ ಹಾಗೂ ಭಾನುವಾರ ಕದ್ರಾದಲ್ಲಿ ವಾಸ್ತವ್ಯ ಹೂಡಿ, ಸೋಮವಾರ ಬೆಳಗ್ಗೆ ಕೈಗಾ ಗೇಟ್ ತಲುಪಿ ಕೈಗಾ ಜಿಎಂ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ರಮಾಕಾಂತ ಗುನಗಿ, ಗೌರೀಶ ನಾಯ್ಕ, ಶಂಕರ ಗುನಗಿ, ಉದಯ ನಾಯ್ಕ, ಶಬ್ಬೀರ ಇದ್ದರು.