ದೋಹಾ (ಕತಾರ್): ಒಂದೂವರೆ ದಶಕಗಳ ಕಾಲ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದ ಎಂ.ಕೆಂಪಯ್ಯ ಆ ಕಾಲದಲ್ಲಿ ಏಷ್ಯಾದ ಅಪ್ರತಿಮ ಮಿಡ್ ಫೀಲ್ಡರ್ ಆಗಿದ್ದರು ಎಂದು ಏಷ್ಯನ್ ಫುಟ್ಬಾಲ್ ಒಕ್ಕೂಟದ ಕಾರ್ಯದರ್ಶಿ ದತುಕ್ ಸೇರಿ ವಿಂಡ್ಸರ್ ಜಾನ್ ಶ್ಲಾಘಿಸಿದ್ದಾರೆ.
ಕತಾರ್‌ನ ದೋಹಾದಲ್ಲಿ ನಡೆದ ಕೆಂಪಯ್ಯ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕೆಂಪಯ್ಯ ಕೇವಲ ಭಾರತ ಮಾತ್ರವಲ್ಲದೆ ಸಮಸ್ತ ಏಷ್ಯನ್ ಫುಟ್ಬಾಲ್ ಇತಿಹಾಸದಲ್ಲೇ ಅಪ್ರತಿಮ ಮಿಡ್ ಫೀಲ್ಡರ್ ಆಗಿದ್ದರು.
ಅವರು 1959ರಲ್ಲಿ ನಡೆದ ಮೆರ್ಡೇಕಾ ಕಪ್‌ನ ಉದ್ಘಾಟನಾ ಅವೃತ್ತಿಯಲ್ಲಿ ತೋರಿದ ಸಾಧನೆ ಅಪ್ರತಿಮವಾದುದು. 18ನೇ ಆವೃತ್ತಿಯ ಏಷ್ಯನ್ ಫುಟ್ಬಾಲ್ ಕಪ್ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಮಗಳು ಒಲಿಂಪಿಯನ್ ಕೆಂಪಯ್ಯ ಅವರ ಕುರಿತು ಬರೆದಿರುವ ಪುಸ್ತಕ ಬಿಡುಗಡೆ ಮಾಡಲು ಹರ್ಷವಾಗುತ್ತಿದೆ’ ಎಂದು ತಿಳಿಸಿದರು.
ಕೆಂಪಯ್ಯ ಅವರ ಮಗಳು ಸುಮಾ ಮಹೇಶ್ ಗೌಡ ಬರೆದ ‘ಒಲಿಂಪಿಯನ್ ಕೆಂಪಯ್ಯ: ಲೆಜೆಂಡರಿ ಮಿಡ್‌ಫೀಲ್ಡರ್ ಆಫ್ ಇಂಡಿಯನ್ ಫುಟ್ಬಾಲ್’ ಎಂಬ ಜೀವನಚರಿತ್ರೆಯನ್ನು ಬಿಡುಗಡೆ ಮಾಡಲಾಯಿತು.