ನವದೆಹಲಿ: ಏಡನ್‌ಕೊಲ್ಲಿಯಲ್ಲಿ ಉಪಟಳವನ್ನು ಮುಂದುವರೆಸಿರುವ ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಉಗ್ರರು ಶನಿವಾರ 22 ಮಂದಿ ಭಾರತೀಯ ಸಿಬ್ಬಂದಿಯಿದ್ದ ಬ್ರಿಟಿಷ್ ತೈಲ ಸಾಗಣೆ ಹಡಗಿನ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ ಹಡಗಿಗೆ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಈ ಹಡಗಿನ ರಕ್ಷಣೆಗೆ ಐಎನ್‌ಎಸ್ ವಿಶಾಖಪಟ್ಟಣ ಯುದ್ಧನೌಕೆಯನ್ನು ನಿಯೋಜನೆ ಮಾಡಲಾಗಿದೆ.
ಅರಬ್ಬೀ ಸಮುದ್ರದಲ್ಲಿ ಹೌತಿ ಉಗ್ರರು ಪದೇ ಪದೇ ದಾಳಿ ನಡೆಸುತ್ತಿರುವುದರಿಂದ ಇಲ್ಲಿ ಸಾಗುವ ಹಡಗುಗಳ ರಕ್ಷಣೆಗಾಗಿ ಭಾರತೀಯ ನೌಕಾಪಡೆ ತನ್ನ ಹಡಗುಗಳನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಇಸ್ರೇಲ್ ಹಮಾಸ್ ನಡುವಿನ ಯುದ್ಧ ಆರಂಭವಾದಾಗಿನಿಂದ ಅರಬ್ಬೀ ಸಮುದ್ರ ಮತ್ತು ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ದಾಳಿಯ ಪ್ರಮಾಣವೂ ಸಹ ಅಧಿಕಗೊಂಡಿದೆ.
ಜ.18ರಂದು ಸಹ ಭಾರತೀಯ ನೌಕರರಿದ್ದ ಹಡಗಿನ ಮೇಲೆ ಹೌತಿ ಉಗ್ರರು ದಾಳಿ ನಡೆಸಿದ್ದರು. ಈ ಸಮಯದಲ್ಲೂ ಐಎನ್‌ಎಸ್ ವಿಶಾಖಪಟ್ಟಣಂ ಸಹಾಯಕ್ಕೆ ಧಾವಿಸಿತ್ತು. ಡಿ.23ರಲ್ಲೂ ಲೈಬಿರಿಯಾದ ಹಡಗಿನ ಮೇಲೆ ಡ್ರೋನ್ ದಾಳಿ ನಡೆಸಿದ್ದು, ಈ ವೇಳೆ ಭಾರತದ ಕಮಾಂಡೋಗಳು ಹಡಗನ್ನು ಕಾಪಾಡಿದ್ದರು. ಇದಕ್ಕೂ ಮುನ್ನ ಭಾರತಕ್ಕೆ ಧಾವಿಸುತ್ತಿದ್ದ ಹಡಗಿನ ಮೇಲೆ ದಾಳಿ ನಡೆದಿತ್ತು.ಅಮೆರಿಕ ಹಡಗಿನ ಮೇಲೂ ಹೌತಿ ದಾಳಿ:
ಭಾರತೀಯರಿದ್ದ ಹಡಗಿಗೂ ಮುನ್ನ ಯೆಮನ್‌ನ ಹೌತಿ ಬಂಡುಕೋರರು ಏಡನ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಅಮೆರಿಕದ ಯುದ್ಧನೌಕೆಯ ಮೇಲೆ ಶುಕ್ರವಾರ ಬೆಳಗ್ಗೆ ದಾಳಿ ಮಾಡಿದ್ದಾರೆ.ದಾಳಿಗೆ ಪ್ರತಿಯಾಗಿ ಸ್ಥಳೀಯ ಕಾಲಮಾನದಂತೆ ಶನಿವಾರ ಮುಂಜಾನೆಯೇ ಅಮೆರಿಕ ಪಡೆಗಳು ಹೌತಿಗಳ ನೌಕೆ ಮೇಲೆ ಪ್ರತಿದಾಳಿ ನಡೆಸಿವೆ ಎಂದು ಅಮೆರಿಕ ಮಿಲಿಟರಿ ಸೆಂಟ್ರಲ್ ಕಮಾಂಡ್ ಹೇಳಿದೆ.