;Resize=(412,232))
ವಾಷಿಂಗ್ಟನ್: ‘ಇರಾನ್ ಕಡೆ ಬೃಹತ್ ಅಮೆರಿಕದ ನೌಕಾಪಡೆ ಸಾಗುತ್ತಿದೆ. ಹೀಗಾಗಿ ಆ ದೇಶ ತನ್ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ನಿಲ್ಲಿಸಲು ಒಪ್ಪಂದಕ್ಕೆ ಮುಂದಾಗಬೇಕು. ಬೇಗ ಬೇಗನೆ ಮಾತುಕತೆಗೆ ಬರಬೇಕು. ಸಮಯ ಮೀರುತ್ತಿದೆ. ಇಲ್ಲದೇ ಹೋದರೆ ದಾಳಿ ವಿನಾಶಕಾರಿಯಾಲಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಇರಾನ್ ಮೇಲೆ ದಾಳಿಯ ಬೆದರಿಕೆ ಹಾಕಿದ್ದಾರೆ.
ತಮ್ಮ ‘ಟ್ರುತ್ ಸೋಷಿಯಲ್’ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಟ್ರಂಪ್, ‘ಇರಾನ್ ಕಡೆಗೆ ‘ಅಬ್ರಹಾಂ ಲಿಂಕನ್’ ನೌಕೆಯ ನೇತೃತ್ವದ ಬೃಹತ್ ನೌಕಾಪಡೆ ಸಾಗುತ್ತಿದೆ. ಅದು ಹೆಚ್ಚಿನ ಶಕ್ತಿ, ಉತ್ಸಾಹ ಮತ್ತು ಉದ್ದೇಶದೊಂದಿಗೆ ವೇಗವಾಗಿ ಚಲಿಸುತ್ತಿದೆ, ಇದು ವೆನಿಜುವೆಲಾಗೆ ಕಳುಹಿಸಲಾದ ವಿಮಾನವಾಹಕ ನೌಕೆಗಿಂತ ದೊಡ್ಡ ನೌಕಾಪಡೆಯಾಗಿದೆ. ಅಗತ್ಯಬಿದ್ದರೆ ಹಿಂಸೆಯೊಂದಿಗೆ ತ್ವರಿತವಾಗಿ ತನ್ನ ಧ್ಯೇಯ ಪೂರೈಸಲು ಸಾಧ್ಯವಾಗುತ್ತದೆ. ಆದರೆ ಅದಕ್ಕೂ ಮುನ್ನ ಇರಾನ್ ಪರಮಾಣು ನಿಶ್ಶಸ್ತ್ರೀಕರಣಕ್ಕೆ ಮುಂದಾಗಬೇಕು. ಮಾತುಕತೆಗೆ ಬರಬೇಕು. ಹೀಗಾದರೆ ಎಲ್ಲ ಪಕ್ಷಗಳಿಗೆ ಒಳ್ಳೆಯದು. ಸಮಯ ಮೀರುತ್ತಿದೆ’ ಎಂದಿದ್ದಾರೆ.
‘ನಾನು ಮೊದಲು ಒಮ್ಮೆ ಇರಾನ್‌ಗೆ ಒಪ್ಪಂದ ಮಾಡಿಕೊಳ್ಳಿ ಎಂದಿದ್ದೆ. ಅವರು ಹಾಗೆ ಮಾಡಲಿಲ್ಲ. ಹೀಗಾಗಿ ಆಪರೇಷನ್ ಮಿಡ್‌ನೈಟ್ ಹ್ಯಾಮರ್ ನಡೆಸಿದ್ದೆವು. ಆದರೆ ಇನ್ನು ಮುಂದಿನ ದಾಳಿ ವಿನಾಶಕಾರಿಯಾಲಿದೆ. ತುಂಬಾ ಕೆಟ್ಟದಾಗಿರುತ್ತದೆ. ಧನ್ಯವಾದಗಳು’ ಎಂದಿದ್ದಾರೆ.
ನಮ್ಮ ಯುದ್ಧನೌಕೆ ಇರಾನ್‌ನತ್ತ ಗುರಿಯೊಂದಿಗೆ
ಅಣ್ವಸ್ತ್ರ ತಯಾರಿ, ಬಳಕೆ ನಿಷೇಧ ಒಪ್ಪಂದಕ್ಕೆ ಇರಾನ್‌ಗೆ ಅಮೆರಿಕ ತಾಕೀತು
ಈ ಕುರಿತು ಮಾತುಕತೆಗೆ ಬರುವಂತೆ ಹಲವು ಬಾರಿ ಟ್ರಂಪ್ ಸರ್ಕಾರ ಸೂಚನೆ
ಆದರೆ ಅಮೆರಿಕದ ಅಣು ನಿಶ್ಯಸ್ತ್ರೀಕರಣ ಒತ್ತಡಕ್ಕೆ ಮಣಿಯಲು ಇರಾನ್ ನಕಾರ
ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಟ್ರಂಪ್ ಪದೇ ಪದೇ ದಾಳಿಯ ಎಚ್ಚರಿಕೆ