ಇಸ್ರೇಲ್‌-ಇರಾನ್‌ ಘೋರ ಕದನಕ್ಕೂ ‘ಟ್ರಂಪ್‌ ವಿರಾಮ’

KannadaprabhaNewsNetwork |  
Published : Jun 25, 2025, 01:18 AM IST
ಡೊನಾಲ್ಡ್‌ ಟ್ರಂಪ್‌ | Kannada Prabha

ಸಾರಾಂಶ

ಮಧ್ಯಪ್ರಾಚ್ಯದಲ್ಲಿ ಭಾರೀ ವಿನಾಶದ ಆತಂಕ ಮೂಡಿಸಿದ್ದ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷಕ್ಕೆ ಮಂಗಳವಾರ ತೆರೆ ಬಿದ್ದಿದೆ. ಈ ಮುಂಚೆ ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮದೇ ಮಧ್ಯಸ್ಥಿಕೆಯಲ್ಲಿ ಇರಾನ್‌-ಇಸ್ರೇಲ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ, ಆದರೆ ವಾಸ್ತವವಾಗಿ ಕತಾರ್‌ ಕೂಡ ಮಧ್ಯಸ್ಥಿಕೆ ವಹಿಸಿ ಕದನವಿರಾಮ ಜಾರಿಗೆ ಶ್ರಮಿಸಿದ್ದಾಗಿ ಗೊತ್ತಾಗಿದೆ. ಈ ಮೂಲಕ 12 ದಿನಗಳಿಂದ ನಡೆಯುತ್ತಿದ್ದ ಸಮರಕ್ಕೆ ಕೊನೆ ಬಿದ್ದಂತಾಗಿದೆ.

-12 ದಿನಗಳ ಯುದ್ಧಕ್ಕೆ ಅಂತೂ ಬ್ರೇಕ್‌

- ನಾನೇ ‘ಡೀಲ್‌’ ಮಾಡಿಸಿದೆ: ಟ್ರಂಪ್‌

--

ಕದನವಿರಾಮ

ಸೂತ್ರ ಸಿದ್ಧ

ಆಗಿದ್ದು ಹೇಗೆ?

- ತನ್ನಲ್ಲಿನ ಅಮೆರಿಕ ನೆಲೆ ಮೇಲೆ ಇರಾನ್‌ ದಾಳಿಗೆ ಬೆಚ್ಚಿದ ಕತಾರ್

- ಯುದ್ಧ ತಣಿಸಲು ಯತ್ನಿಸೋಣ ಎಂದು ಟ್ರಂಪ್‌ಗೆ ಕತಾರ್‌ ಮೊರೆ

- ವಿರಾಮಕ್ಕೆ ಇರಾನ್‌ ನಾಯಕತ್ವದ ಮನವೊಲಿಸಿದ ಕತಾರ್ ದೊರೆ

- ಅತ್ತ ವಿರಾಮಕ್ಕೆ ಇಸ್ರೇಲ್‌ ಮನವೊಲಿಸಿದ ಡೊನಾಲ್ಡ್‌ ಟ್ರಂಪ್‌

- ಕೊನೆಗೆ 12 ದಿನಗಳ ಮಧ್ಯಪ್ರಾಚ್ಯ ಘನಘೋರ ಕದನಕ್ಕೆ ತೆರೆ

--===

ಕದನ ವಿರಾಮ

ಉಲ್ಲಂಘನೆಗೆ

ಟ್ರಂಪ್‌ ಗರಂಕದನ ವಿರಾಮ ಘೋಷಿಸಿದ ಬಳಿಕವೂ ಇರಾನ್‌ ದಾಳಿ ಮಾಡಿದ್ದರೆ, ಇಸ್ರೇಲ್‌ ಕೂಡ ಪ್ರತಿದಾಳಿಗೆ ಸಿದ್ಧವಾಗಿತ್ತು, ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗರಂ ಆಗಿದ್ದಾರೆ. ಎರಡೂ ದೇಶಗಳು ಒಪ್ಪಂದ ಉಲ್ಲಂಘಿಸಿವೆ. ಇನ್ನು ಇರಾನ್‌ ಮೇಲೆ ಯಾವುದೇ ಬಾಂಬ್ ಬೀಳಬಾರದು ಎಂದು ಮಿತ್ರ ಇಸ್ರೇಲ್‌ಗೆ ನೇರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆದಾದ ಬಳಿಕ ಉಭಯ ದೇಶಗಳಲ್ಲೂ ಯಾವುದೇ ದಾಳಿಯ ಸದ್ದು ಕೇಳಿಬರಲಿಲ್ಲ. ಕದನವಿರಾಮ ಜಾರಿ ಆಗಿದೆ ಎಂದು ಘೋಷಿಸಲಾಗಿದೆ.

==

ಟೆಹ್ರಾನ್‌/ಟೆಲ್ ಅವಿವ್‌: ಮಧ್ಯಪ್ರಾಚ್ಯದಲ್ಲಿ ಭಾರೀ ವಿನಾಶದ ಆತಂಕ ಮೂಡಿಸಿದ್ದ ಇಸ್ರೇಲ್‌ ಮತ್ತು ಇರಾನ್‌ ನಡುವಿನ ಸಂಘರ್ಷಕ್ಕೆ ಮಂಗಳವಾರ ತೆರೆ ಬಿದ್ದಿದೆ. ಈ ಮುಂಚೆ ಭಾರತ-ಪಾಕ್‌ ಯುದ್ಧ ನಿಲ್ಲಿಸಿದ್ದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತಮ್ಮದೇ ಮಧ್ಯಸ್ಥಿಕೆಯಲ್ಲಿ ಇರಾನ್‌-ಇಸ್ರೇಲ್‌ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ, ಆದರೆ ವಾಸ್ತವವಾಗಿ ಕತಾರ್‌ ಕೂಡ ಮಧ್ಯಸ್ಥಿಕೆ ವಹಿಸಿ ಕದನವಿರಾಮ ಜಾರಿಗೆ ಶ್ರಮಿಸಿದ್ದಾಗಿ ಗೊತ್ತಾಗಿದೆ. ಈ ಮೂಲಕ 12 ದಿನಗಳಿಂದ ನಡೆಯುತ್ತಿದ್ದ ಸಮರಕ್ಕೆ ಕೊನೆ ಬಿದ್ದಂತಾಗಿದೆ.

ಈ ನಡುವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕದನ ವಿರಾಮದ ಸುದ್ದಿ ಘೋಷಿಸಿದ ಬೆನ್ನಲ್ಲೇ ಮೂರು ಗಂಟೆಗಳ ಬಳಿಕ ಇರಾನ್‌ ನಡೆಸಿದ ಸರಣಿ ಕ್ಷಿಪಣಿ ದಾಳಿಗೆ ಇಸ್ರೇಲ್‌ನಲ್ಲಿ ನಾಲ್ವರು ನಾಗರಿಕರು ಮೃತಪಟ್ಟು, ಹಲವರು ಗಾಯಗೊಂಡರು. ಇದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಯಿತಾದರೂ ನಂತರ ಇರಾನ್‌ ಕೂಡ ಅಧಿಕೃತವಾಗಿ ಕದನ ವಿರಾಮ ಘೋಷಿಸಿತು. ಜತೆಗೆ, ಇನ್ನು ಮುಂದೆ ಇಸ್ರೇಲ್‌ ದಾಳಿ ನಡೆಸಿದರೆ ಪ್ರತಿ ದಾಳಿ ನಡೆಸುವುದಾಗಿಯೂ ಎಚ್ಚರಿಸಿತು.

ಟ್ರಂಪ್ ‘ಮಧ್ಯಸ್ಥಿಕೆ’ಯ 2ನೇ ಕದನವಿರಾಮ:

ಭಾನುವಾರವಷ್ಟೇ ಅಮೆರಿಕವು ಇರಾನ್‌ನ 3 ಪರಮಾಣು ಕೇಂದ್ರಗಳ ಮೇಲೆ ಭಾರೀ ಬಾಂಬ್‌ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಸೋಮವಾರ ರಾತ್ರಿಯಷ್ಟೇ ಇರಾನ್‌ ಕ್ಷಿಪಣಿ ದಾಳಿ ನಡೆಸಿತ್ತು. ಇದರಿಂದ ಅಮೆರಿಕ ಪ್ರತಿದಾಳಿ ನಡೆಸುವ ಆತಂಕ ವ್ಯಕ್ತವಾಗಿತ್ತಾದರೂ ಮಂಗಳವಾರ ಮುಂಜಾನೆ ಹೊತ್ತಿಗೆ ಡೊನಾಲ್ಡ್ ಟ್ರಂಪ್‌ ಅವರೇ ಕದನ ವಿರಾಮದ ವಿಚಾರ ಅಧಿಕೃತವಾಗಿ ಸಾಮಾಜಿಕ ಜಾಲತಾಣ ಮೂಲಕ ಘೋಷಿಸಿದರು. ಭಾರತ-ಪಾಕ್‌ ಯುದ್ಧದ ಬಳಿಕ ಟ್ರಂಪ್‌ ಘೋಷಿಸುತ್ತಿರುವ ಎರಡನೇ ಕದನ ವಿರಾಮ ಇದಾಗಿತ್ತು.

20 ಕ್ಷಿಪಣಿ ಹಾರಿಸಿದ ಇರಾನ್‌, ಗೊಂದಲ:

ಟ್ರಂಪ್‌ ಕದನ ವಿರಾಮ ಘೋಷಿಸಿದರೂ ಇರಾನ್‌ ವಿದೇಶಾಂಗ ಸಚಿವ ಸೈಯದ್‌ ಅಬ್ಬಾಸ್‌ ಅವರು ಅಂಥ ಯಾವುದೇ ಒಪ್ಪಂದ ಆಗಿಲ್ಲ ಎಂದು ಹೇಳುವ ಮೂಲಕ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ನಡುವೆ, ಇಸ್ರೇಲ್‌ ಮೇಲೆ 20 ಕ್ಷಿಪಣಿಗಳನ್ನು ಬಳಸಿ ಇರಾನ್‌ ದಾಳಿ ಕೂಡ ಮಾಡಿತು. ಇದರಿಂದ ಇಸ್ರೇಲ್‌ನ ಬೀರ್ಶೇಬಾ ನಗರದಲ್ಲಿ ಮೂರು ಕಟ್ಟಡಗಳಿಗೆ ಹಾನಿಯಾಗಿ, ನಾಲ್ವರು ನಾಗರಿಕರು ಸಾವಿಗೀಡಾದರು. ಆ ಬಳಿಕ ಇರಾನ್‌ ಸರ್ಕಾರ ಅಧಿಕೃತವಾಗಿ ಕದನ ವಿರಾಮ ಘೋಷಿಸಿದ ಬಳಿಕ ದಾಳಿ ಕೈಬಿಡಲಾಯಿತು.

ಸಾವಿರಕ್ಕೂ ಹೆಚ್ಚು ಮಂದಿ ಸಾವು:

ಈ ಹನ್ನೆರಡು ದಿನಗಳ ಯುದ್ಧದಲ್ಲಿ ಇಸ್ರೇಲ್‌ನಲ್ಲಿ 28 ಮಂದಿ ಸಾವಿಗೀಡಾಗಿದ್ದರೆ, 1 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದೇ ವೇಳೆ ಇರಾನ್‌ನಲ್ಲಿ 974 ಮಂದಿ ಸಾವಿಗೀಡಾಗಿ, 3458 ಮಂದಿ ಗಾಯಗೊಂಡಿದ್ದಾರೆ ಎಂದು ವಾಷಿಂಗ್ಟನ್‌ ಮೂಲದ ನಾಗರಿಕ ಹಕ್ಕುಗಳ ಹೋರಾಟಗಾರರು ತಿಳಿಸಿದ್ದಾರೆ.

ಭಿಕ್ಷೆ ಬೇಡಿದ್ರು ಟ್ರಂಪ್‌- ಇರಾನ್ ಟೀವಿ ವರದಿ:

ಇಸ್ರೇಲ್‌ ಮತ್ತು ಇರಾನ್‌ ಎರಡೂ ದೇಶಗಳು ಏಕಕಾಲದಲ್ಲಿ ಶಾಂತಿಯ ಪ್ರಸ್ತಾಪ ಇಟ್ಟರು. ಹೀಗಾಗಿ ಕದನ ವಿರಾಮ ಘೋಷಿಸಲಾಯಿತು ಎಂದು ಟ್ರಂಪ್‌ ಹೇಳಿಕೊಂಡರೆ, ಇರಾನ್‌ನ ಸರ್ಕಾರಿ ಸುದ್ದಿವಾಹಿನಿ ಮಾತ್ರ, ಟ್ರಂಪ್‌ ಅವರೇ ಕದನ ವಿರಾಮಕ್ಕಾಗಿ ಭಿಕ್ಷೆ ಬೇಡಿದರು ಎಂದು ತಿಳಿಸಿದೆ. ಈ ನಡುವೆ, ಕದನ ವಿರಾಮದಲ್ಲಿ ಕತಾರ್‌ ಮಹತ್ವದ ಪಾತ್ರವಹಿಸಿದ್ದಾಗಿ ಮೂಲಗಳು ತಿಳಿಸಿವೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಇರಾನ್‌ ಮೇಲೆ ದಾಳಿಗೆ ಅಮೆರಿಕ ಸೇನೆ ಸಿದ್ಧತೆ?
ಭಾರತದ ಮೇಲೆ ದಾಳಿಗಾಗಿ 1000 ಉಗ್ರರು ರೆಡಿ: ಅಜರ್‌