ನವದೆಹಲಿ : ಭಾರತದ ಮೇಲೆ ಇತ್ತೀಚೆಗಷ್ಟೇ ಶೇ.25ರಷ್ಟು ಪ್ರತಿತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾದಿಂದ ತೈಲ ಖರೀದಿ ಮಾಡಿದ್ದಕ್ಕೆ ದಂಡದ ರೂಪದಲ್ಲಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ಹೇರುವುದಾಗಿ ಘೋಷಿಸಿದ್ದಾರೆ. ಈ ಕುರಿತ ಕಾರ್ಯಾದೇಶಕ್ಕೆ ಅವರು ಬುಧವಾರ ಸಹಿ ಹಾಕಿದ್ದಾರೆ. ತೆರಿಗೆ ಗುರುವಾರದದಿಂದ ಹಾಗೂ ದಂಡ ಆ.27ರಿಂದ ಜಾರಿಗೆ ಬರಲಿದೆ.
ಹೀಗಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಪೈಕಿ ವಿನಾಯ್ತಿ ಇರುವ ಕೆಲವೊಂದಿಷ್ಟನ್ನು ಬಿಟ್ಟು ಉಳಿದೆಲ್ಲಾ ವಸ್ತುಗಳ ಮೇಲೆ ಇನ್ನು ಶೇ.50ರಷ್ಟು ತೆರಿಗೆ ಜಾರಿಯಾಗಿ ಅವು ಅಮೆರಿಕದಲ್ಲಿ ದುಬಾರಿ ಎನ್ನಿಸಿಕೊಳ್ಳಲಿವೆ.
ಈ ನಡುವೆ ಅಮೆರಿಕದ ಹೆಚ್ಚುವರಿ ತೆರಿಗೆ, ನ್ಯಾಯಸಮ್ಮತವಲ್ಲದ, ಸಮರ್ಥಿಸಿಕೊಳ್ಳಲಾಗದ ಮತ್ತು ಆಧಾರರಹಿತ ಕ್ರಮ ಎಂದು ಭಾರತ ಸರ್ಕಾರ ಬಣ್ಣಿಸಿದೆ. ಮತ್ತೊಂದೆಡೆ ಇದು ಆರ್ಥಿಕ ಬ್ಲ್ಯಾಕ್‌ಮೇಲ್ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಟ್ರಂಪ್ ಕ್ರಮವನ್ನು ಟೀಕಿಸಿದ್ದಾರೆ.
ರಷ್ಯಾದಿಂದ ಚೀನಾ, ಟರ್ಕಿ ಸೇರಿದಂತೆ ಹಲವು ದೇಶಗಳು ತೈಲ ಖರೀದಿ ಮಾಡಿದ್ದರೂ, ಅವುಗಳಿಗಿಂತ ಹೆಚ್ಚಿನ ತೆರಿಗೆಯನ್ನು ಭಾರತದ ಮೇಲೆ ಟ್ರಂಪ್ ಪ್ರಕಟಿಸಿದ್ದಾರೆ. ಹೀಗಾಗಿ ವ್ಯಾಪಾರ ಒಪ್ಪಂದ ಕುದುರಿಸಲು ಭಾರತದ ಮೇಲೆ ಒತ್ತಡ ಹೇರುವ ತಂತ್ರ ಇರಬಹುದು ಎಂದು ವಿಶ್ಲೇಷಿಸಲಾಗಿದೆ.
ತೈಲಕ್ಕೆ ದಂಡ:
‘ಭಾರತ ಸರ್ಕಾರ ರಷ್ಯಾದಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತೈಲ ಖರೀದಿ ಮಾಡುತ್ತಿದೆ. ಅದರನ್ವಯ, ಜಾರಿಯಲ್ಲಿರುವ ಕಾನೂನಿನ ಅನ್ವಯ ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಜಾರಿಗೊಳಿಸಲಾಗುತ್ತಿದೆ. ಇದು ಈಗಾಗಲೇ ಆ ವಸ್ತುಗಳ ಮೇಲೆ ಇರುವ ತೆರಿಗೆ, ಶುಲ್ಕ ಮತ್ತು ಸುಂಕಕ್ಕೆ ಹೊರತಾಗಿ ಇರಲಿದೆ’ ಎಂದು ಅಧ್ಯಕ್ಷ ಟ್ರಂಪ್ ತಮ್ಮ ಕಾರ್ಯಾದೇಶದಲ್ಲಿ ಹೇಳಿದ್ದಾರೆ. ಈ ಆದೇಶದ ಅನ್ವಯ ಅಮೆರಿಕಕ್ಕೆ ಆಮದಾಗುವ ಭಾರತದ ವಸ್ತುಗಳ ಮೇಲಿನ ತೆರಿಗೆ ಶೇ.50ಕ್ಕೆ ಹೆಚ್ಚಳವಾಗಲಿದೆ. ಈ ಪೈಕಿ ಈ ಮೊದಲೇ ಘೋಷಿಸಿದ್ದ ಶೇ.25ರಷ್ಟು ತೆರಿಗೆ ಆ.7ರಿಂದ ಮತ್ತು ಬುಧವಾರ ಘೋಷಿಸಿದ ಹೆಚ್ಚುವರಿ ತೆರಿಗೆ ಆ.27ರಿಂದ ಜಾರಿಗೆ ಬರಲಿದೆ.
ಭಾರತಕ್ಕೆ ಹೊರೆ:
ಯಾವ ರಷ್ಯಾ ತೈಲ ಖರೀದಿ ವಿಷಯ ಮುಂದಿಟ್ಟುಕೊಂಡು ಭಾರತದ ಮೇಲೆ ಟ್ರಂಪ್ ಹೆಚ್ಚುವರಿ ಶೇ.25ರಷ್ಟು ತೆರಿಗೆ ಹಾಕಿದ್ದಾರೋ, ಅದೇ ರಷ್ಯಾದಿಂದ ತೈಲ ಖರೀದಿ ಮಾಡುವ ಉಳಿದ ದೇಶಗಳಿಗೆ ಅದೇ ಪ್ರಮಾಣದ ತೆರಿಗೆ ಹಾಕಿಲ್ಲ. ಜೊತೆಗೆ ಭಾರತದ ನೆರೆಹೊರೆಯ ಮತ್ತು ಹಲವು ವಸ್ತುಗಳ ರಫ್ತಿನಲ್ಲಿ ಭಾರತಕ್ಕೆ ಪ್ರತಿಸ್ಪರ್ಧಿಗಳಾಗಿರುವ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಮೇಲೇ ಹೆಚ್ಚಿನ ತೆರಿಗೆ ಹಾಕಿದ್ದಾರೆ.
ತೆರಿಗೆ ಏಕೆ?:
ಭಾರತ ತನ್ನ ಬೇಡಿಕೆಯ ಪೈಕಿ ಶೇ.88ರಷ್ಟು ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ 2021ರವರೆಗೂ ರಷ್ಯಾದಿಂದ ಆಮದು ಪ್ರಮಾಣ ಕೇವಲ ಶೇ.0.2ರಷ್ಟಿತ್ತು. ಆದರೆ ಉಕ್ರೇನ್ ಮೇಲಿನ ಯುದ್ಧದ ಬಳಿಕ ರಷ್ಯಾದ ಮೇಲೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ನಿರ್ಬಂಧ ಹೇರಿದವು. ಆಗ ರಷ್ಯಾ ಅತ್ಯಂತ ಅಗ್ಗದ ದರದಲ್ಲಿ ತೈಲ ಮಾರಾಟಕ್ಕೆ ಮುಂದಾಯಿತು. ಹೀಗಾಗಿ ತನ್ನ ನಿತ್ಯದ ಆಮದಾದ 50 ಲಕ್ಷ ಬ್ಯಾರೆಲ್‌ಗಳ ಪೈಕಿ ಭಾರತ ರಷ್ಯಾದಿಂದ 16 ಲಕ್ಷ ಬ್ಯಾರೆಲ್ ಖರೀದಿ ಆರಂಭಿಸಿತು. ರಷ್ಯಾ ಭಾರತಕ್ಕೆ ಅತಿದೊಡ್ಡ ತೈಲ ಪೂರೈಕೆ ದೇಶವಾಗಿ ಹೊರಹೊಮ್ಮಿತು. ಹೀಗೆ ಸಂಗ್ರಹಿಸಿದ ಹಣವನ್ನು ರಷ್ಯಾ, ಉಕ್ರೇನ್ ಮೇಲಿನ ಯುದ್ಧಕ್ಕೆ ಬಳಸುತ್ತಿದೆ. ಹೀಗಾಗಿ ರಷ್ಯಾದಿಂದ ತೈಲ ಖರೀದಿ ಮಾಡಿದವರ ಮೇಲೆ ಹೆಚ್ಚಿನ ತೆರಿಗೆ ಹಾಕುವ ನಿರ್ಧಾರವನ್ನು ಟ್ರಂಪ್ ಪ್ರಕಟಿಸಿದ್ದಾರೆ.
ರಾಹುಲ್ ಕಿಡಿ:
ಅಮೆರಿಕ ಅಧ್ಯಕ್ಷರ ಕ್ರಮವು ಭಾರತದೊಂದಿಗೆ ನ್ಯಾಯಸಮ್ಮತವಲ್ಲದ ವ್ಯಾಪಾರ ಒಪ್ಪಂದ ಕುದುರಿಸಲು ಭಾರತವನ್ನು ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅಲ್ಲದೆ ಭಾರತೀಯರ ಹಿತಾಸಕ್ತಿ ಕುಂದದಂತೆ ಪ್ರಧಾನಿ ಮೋದಿ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.--
ಯಾರ ಮೇಲೆ ಎಷ್ಟು ತೆರಿಗೆ?:
ಭಾರತಕ್ಕೆ ಶೇ.50, ಬ್ರೆಜಿಲ್ ಶೇ.50, ಮ್ಯಾನ್ಮಾರ್ ಶೇ.40, ಥಾಯ್ಲೆಂಡ್ ಶೇ.36, ಕಾಂಬೋಡಿಯಾ ಶೇ.36, ಬಾಂಗ್ಲಾದೇಶ ಶೇ.35, ಇಂಡೋನೇಷ್ಯಾ ಶೇ.32, ಚೀನಾ ಶೇ.30, ಶ್ರೀಲಂಕಾ ಶೇ.30, ಮಲೇಷ್ಯಾ ಶೇ.25, ಫಿಲಿಪ್ಪೀನ್ಸ್ ಶೇ.20, ವಿಯೆಟ್ನಾಂ ಶೇ.20ರಷ್ಟು ತೆರಿಗೆ ಒಳಪಟ್ಟಿವೆ. ಈ ಎಲ್ಲಾ ದೇಶಗಳಿಂದ ಭಾರತಕ್ಕೆ ಹೆಚ್ಚಿನ ತೆರಿಗೆ ಕಾರಣ, ಅವುಗಳ ಜೊತೆ ಭಾರತದ ವಸ್ತುಗಳು ಸ್ಪರ್ಧಿಸಬೇಕಿದೆ.
ಇದು ನ್ಯಾಯಸಮ್ಮತ ಅಲ್ಲ: ಭಾರತ ಎದಿರೇಟು
ನವದೆಹಲಿ: ’ಅಮೆರಿಕದ ತೆರಿಗೆ ಹೇರಿಕೆಯನ್ನು ನ್ಯಾಯಸಮ್ಮತವಲ್ಲ, ಸಮರ್ಥಿಸಿಕೊಳ್ಳಲಾಗದ ಕ್ರಮ’ ಎಂದು ಭಾರತ ಟೀಕಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ, ‘ರಾಷ್ಟ್ರೀಯ ಹಿತಾಸಕ್ತಿ ಕಾಪಾಡಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಿದೆ. ಅಮೆರಿಕ ಕೈಗೊಂಡ ಕ್ರಮಗಳು ನ್ಯಾಯಸಮ್ಮತವಲ್ಲದ, ಸಮರ್ಥಿಸಿಕೊಳ್ಳಲಾಗದ ಮತ್ತು ಅಸಮಂಜಸ ಎಂಬ ನಮ್ಮ ನಿಲುವನ್ನು ನಾವು ಪುನರುಚ್ಚರಿಸುತ್ತೇವೆ. ರಷ್ಯಾದಿಂದ ತೈಲ ಖರೀದಿಯು 140 ಕೋಟಿ ಭಾರತೀಯರ ಇಂಧನ ಭದ್ರತೆ ಖಚಿತಪಡಿಸುವ ಮತ್ತು ಮಾರುಕಟ್ಟೆ ಅಂಶಗಳನ್ನು ಒಳಗೊಂಡಿದೆ ಎಂದು ಈಗಾಗಲೇ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಇತರೆ ಹಲವು ದೇಶಗಳು ಕೂಡಾ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಇದೇ ರೀತಿಯ ಕ್ರಮ ಕೈಗೊಂಡಿದ್ದರೂ, ಭಾರತವನ್ನು ಮಾತ್ರವೇ ಅಮೆರಿಕ ಗುರಿಯಾಗಿಸಿಕೊಂಡಿದ್ದು ದುರದೃಷ್ಟಕರ’ ಎಂದು ಹೇಳಿದೆ.
ಯಾವ ವಸ್ತುಗಳ ಮೇಲೆ ಪರಿಣಾಮ?
ಔಷಧ, ಎಲೆಕ್ಟ್ರಾನಿಕ್ಸ್, ಮುತ್ತು/ಹರಳು, ಆಭರಣ, ಜವಳಿ, ಸಿದ್ಧ ಉಡುಪು, ವಾಹನ ಬಿಡಿಭಾಗ.
ಶೇ.55ರಷ್ಟು ರಫ್ತಿನ ಮೇಲೆ ಎಫೆಕ್ಟ್
ಶೇ.50ರಷ್ಟು ತೆರಿಗೆ ಹೇರಿಕೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಒಟ್ಟು ವಸ್ತುಗಳ ಪೈಕಿ ಶೇ.55ರಷ್ಟು ವಸ್ತುಗಳ ಮೇಲೆ ಪರಿಣಾಮ ಬೀರಲಿದೆ. ಆಮದು ದುಬಾರಿಯಾಗಿ ರಫ್ತು ಕುಸಿಯುವ, ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ರಫ್ತುದಾರರ ಸಂಘಟನೆ ಕಳವಳ ವ್ಯಕ್ತಪಡಿಸಿದೆ.