ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಚೀನಾ ಮೇಲೆ ಶೇ.50ರಿಂದ 100ರಷ್ಟು ತೆರಿಗೆ ವಿಧಿಸುವಂತೆ, ರಷ್ಯಾದಿಂದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ನ್ಯಾಟೋ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.
ಅಮೆರಿಕವು ರಷ್ಯಾ ವಿರುದ್ಧ ನಿರ್ಣಾಯಕ ನಿರ್ಬಂಧ ಹೇರಲು ಸಿದ್ಧವಾಗಿದೆ. ಆದರೆ, ಇದಕ್ಕಾಗಿ ಯುರೋಪಿನ ಸಹಯೋಗಿ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು ಮತ್ತು ಈ ಸಮನ್ವಯದ ಕ್ರಮದಲ್ಲಿ ಕೈಜೋಡಿಸಬೇಕು. ಉಕ್ರೇನ್-ರಷ್ಯಾ ಯುದ್ಧ ಮುಕ್ತಾಯಗೊಳ್ಳುವವರೆಗೆ ಚೀನಾದ ಮೇಲೆ ಭಾರೀ ತೆರಿಗೆ ಹಾಕಬೇಕು ಎಂದು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಷಿಯಲ್‌ನಲ್ಲಿ ಎಲ್ಲಾ ನ್ಯಾಟೋ ದೇಶಗಳು ಹಾಗೂ ವಿಶ್ವವನ್ನುದ್ದೇಶಿಸಿ ಬರೆದುಕೊಂಡಿದ್ದಾರೆ.
‘ನೀವು ಯಾವಾಗ ಹೇಳುತ್ತೀರೋ ಆಗ ನಾನು ನಿರ್ಬಂಧ ವಿಧಿಸಲು ಸಿದ್ಧನಿದ್ದೇನೆ. ನ್ಯಾಟೋ ಒಂದು ಗುಂಪಾಗಿ ಚೀನಾದ ಮೇಲೆ ದಂಡನೆಯ ಕ್ರಮವಾಗಿ ತೆರಿಗೆ ವಿಧಿಸಬೇಕು. ಚೀನಾವು ರಷ್ಯಾದ ಮೇಲೆ ಭಾರೀ ನಿಯಂತ್ರಣ ಹೊಂದಿದೆ. ಈ ತೆರಿಗೆ ಯುದ್ಧ ಮುಗಿಯುವವರೆಗೆ ಮತ್ತು ಸೇನೆಯನ್ನು ಸಂಪೂರ್ಣವಾಗಿ ವಾಪಸ್ ಪಡೆದು ಶಾಂತಿ ಸ್ಥಾಪನೆಯಾಗುವವರೆಗೆ ಮುಂದುವರಿಯಬೇಕು’ ಎಂದು ಅವರು ಹೇಳಿದ್ದಾರೆ.
ಈ ಯುದ್ಧದಲ್ಲಿ ಕಳೆದ ಕೆಲ ವಾರಗಳಲ್ಲಿ 7,118 ಮಂದಿ ಮೃತಪಟ್ಟಿದ್ದಾರೆ. ಒಂದು ವೇಳೆ ನಾನು ಅಧಿಕಾರದಲ್ಲಿರುತ್ತಿದ್ದರೆ ಈ ಯುದ್ಧ ಆರಂಭವಾಗುತ್ತಿರಲೇ ಇಲ್ಲ, ಇದು ‘ಬೈಡನ್ ಮತ್ತು ಜೆಲೆನ್ಸ್ಕಿ ಅವರ ಯುದ್ಧ’ ಎಂದು ಕರೆದಿದ್ದಾರೆ.