ಅಮೆರಿಕ ಅಧ್ಯಕ್ಷೀಯ ಕಚೇರಿಯಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ - ಜೆಲೆನ್‌ಸ್ಕಿ ಕೂಗಾಟ!

KannadaprabhaNewsNetwork | Updated : Mar 01 2025, 04:44 AM IST

ಸಾರಾಂಶ

ಅಪರೂಪದ ಖನಿಜ ಒಪ್ಪಂದಕ್ಕೆ ಬಂದ ಉಕ್ರೇನ್ ಅಧ್ಯಕ್ಷ ಮತ್ತು ಅಮೆರಿಕದ ಟ್ರಂಪ್‌ ಮಾತಿನ ವಾಕ್ಸಮರ ನಡೆದಿದೆ. ಇದು ಅಪರೂಪದಲ್ಲೇ ಅಪರೂಪದ ಘಟನೆ ಆಗಿದೆ.

ವಾಷಿಂಗ್ಟನ್‌: ಅಮೆರಿಕ ಮತ್ತು ಉಕ್ರೇನ್‌ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯು ಅಪರೂಪದಲ್ಲಿಯೇ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಜೆಲೆನ್‌ಸ್ಕಿ ತೀವ್ರ ವಾಗ್ವಾದ ನಡೆಸಿದ್ದಾರೆ. ಪರಿಣಾಮ ನಡೆಯಬೇಕಿದ್ದ ಖನಿಜ ಒಪ್ಪಂದ ಅರ್ಧದಲ್ಲಿಯೇ ಮುರಿದುಬಿದ್ದಿದೆ.

 ರಷ್ಯಾ ಉಕ್ರೇನ್‌ ಯುದ್ಧದಲ್ಲಿ ಜೆಲೆನ್‌ಸ್ಕಿ ಜೀವಗಳ ಜೊತೆಗೆ ಆಟವಾಡುತ್ತಿದ್ದಾರೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜೆಲೆನ್‌ಸ್ಕಿ ಕೂಡಾ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಇದರ ಮಧ್ಯೆಯೇ ಸಭೆ ಅರ್ಧಕ್ಕೆ ಮುರಿದುಬಿದ್ದು, ಶ್ವೇತಭವನದಿಂದ ಜೆಲೆನ್‌ಸ್ಕಿ ಹೊರ ನಡೆದಿದ್ದಾರೆ.ಟ್ರಂಪ್‌-ಜೆಲೆನ್‌ಸ್ಕಿ-ವ್ಯಾನ್ಸ್‌ ವಾಗ್ವಾದ: ಉಭಯ ನಾಯಕರ ಮಾತುಕತೆಯ ಮುಕ್ತಾಯದ ಹಂತದಲ್ಲಿ ಮಧ್ಯಪ್ರವೇಶಿಸಿದ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಅಧ್ಯಕ್ಷ ಜೆಲೆನ್‌ಸ್ಕಿ ಅವರೇ, ಎಲ್ಲಾ ಗೌರವಗಳೊಂದಿಗೆ, ನೀವು ನಿಮ್ಮ ದೇಶದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅಮೆರಿಕದ ಮಾಧ್ಯಮಗಳ ಮುಂದೆ ಬಂದಿರುವುದು ನಿಜಕ್ಕೂ ನಿಮಗೆ ಅವಮಾನಕರ ಎಂದರು.

ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿ ಜೆಲೆನ್‌ಸ್ಕಿ ಅವರನ್ನು ಅಧ್ಯಕ್ಷ ಟ್ರಂಪ್‌ ತಡೆದು, ನೀವು ಜನರ ಜೀವಗಳ ಜೊತೆಗೆ ಜೂಜಾಡುತ್ತಿದ್ದೀರಿ. ಮೂರನೇ ಮಹಾಯುದ್ಧದ ಜೊತೆಗೆ ಆಟವಾಡುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಜೊತೆಗೆ ‘ಇಷ್ಟು ವರ್ಷಗಳ ಕಾಲ ನಿಮ್ಮ ಬೆಂಬಲಕ್ಕೆ ಸದಾ ನಿಂತು, ಯಾರು ಏನೇ ಹೇಳಿದರೂ, ನಿಮಗೆ ಸಹಾಯ ಮಾಡಿದ ಅಮೆರಿಕಕ್ಕೆ ಮತ್ತು ಅಮೆರಿಕದ ಜನತೆಗೆ ಅವಮಾನ ಮಾಡಿದ್ದೀರಿ’ ಎಂದು ಅಬ್ಬರಿಸಿದರು.

ನಾವು ಯುದ್ಧವನ್ನು ನಿಲ್ಲಿಸಲು ಪದೇ ಪದೇ ಯತ್ನಿಸುತ್ತಿದ್ದರೂ, ನೀವು ಮಾತ್ರ ಕದನವಿರಾಮಕ್ಕೆ ಒಪ್ಪುತ್ತಲೇ ಇಲ್ಲ. ನಾನು ಮುಂದೆ ಹೋಗುತ್ತೇನೆ. ಎದುರಿಸುತ್ತೇನೆ ಎಂದು ವಿತಂಡವಾದ ಮಾಡುತ್ತಿದ್ದೀರಿ. ನಾವು ಸಾವು ತಡೆಯಲು ಯತ್ನಿಸಿದರೆ, ನೀವು ಮಾತ್ರ ಹೆಣಗಳನ್ನು ನೋಡಲು ಹೋಗುತ್ತಿದ್ದೀರಿ. ನಿಮ್ಮ ನಿರ್ಧಾರದಿಂದ ಬಲಿಯಾಗುತ್ತಿರುವುದು ಜನರು ಎಂದು ತೀವ್ರ ಕೆಂಡಾಮಂಡಲರಾದರು.

ಇದಕ್ಕೆ ತಿರುಗೇಟು ನೀಡಿದ ಜೆಲೆನ್‌ಸ್ಕಿ, ನಾವು ಯಾರ ದೇಶದಲ್ಲಿಯೂ ಇಲ್ಲ. ನಾವು ಯಾರ ಮೇಲೆಯೂ ದಾಳಿ ಮಾಡಲಿಲ್ಲ. ನಾವು ನಮ್ಮ ದೇಶದಲ್ಲಿಯೇ ಇದ್ದೆವು. ದಾಳಿ ಮಾಡಿದ್ದು ರಷ್ಯಾ ಎಂದು ಖಾರವಾಗಿ ಉತ್ತರಿಸಿದರು.

ಇದಕ್ಕೆ ಟ್ರಂಪ್‌ ಪ್ರತಿಕ್ರಿಯಿಸಿ, ನೀವು ಬದುಕಿರುವುದೇ ನಮ್ಮಿಂದ. ಒಂದು ವೇಳೆ ಅಮೆರಿಕ ನಿಮ್ಮ ಸಹಾಯಕ್ಕೆ ಬಾರದಿದ್ದರೆ, 2 ವಾರದಲ್ಲಿ ಯುದ್ಧ ನಿಲ್ಲುತ್ತಿತ್ತು. ಅದು ನಾವು ನಿಮಗೆ ಸಮಯಕ್ಕೆ ಸರಿಯಾಗಿ ಆಯುಧಗಳನ್ನು ಪೂರೈಸಿ ಬೆನ್ನಿಗೆ ನಿಂತಿದ್ದು. ನೀವು ಕದನವಿರಾಮಕ್ಕೆ ಒಪ್ಪಬೇಕು. ಆಗ ನಿಮ್ಮ ದೇಶವೂ ಉಳಿಯುತ್ತದೆ ಎಂದು ಗುಡುಗಿದರು.ಸ್ಟುಪಿಡ್‌ ಬೈಡೆನ್‌:

ಉಭಯ ನಾಯಕರ ಸಭೆ ವೇಳೆ ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡೆನ್‌ ಅವರನ್ನು ತರಾಟೆಗೆ ತೆಗೆದುಕೊಂಡ ಟ್ರಂಪ್‌ ‘ಸ್ಟುಪಿಡ್‌’, ನಿಮಗೆ ಹಣ, ಆಯುಧ ಕೊಟ್ಟರು ಎಂದು ಕಿಡಿಕಾರಿದರು.

Share this article