ಕೊಲ್ಲಿ ತೈಲವ್ಯೂಹ

KannadaprabhaNewsNetwork |  
Published : Mar 15, 2026, 01:45 AM IST
ತೈಲ  | Kannada Prabha

ಸಾರಾಂಶ

ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ 15ನೇ ದಿನವಾದ ಶನಿವಾರ ಮಹತ್ವದ ತಿರುವು ಪಡೆದುಕೊಂಡಿದೆ. ಈ ನಡುವೆ ಇರಾನ್‌ನ ತೈಲ ರಫ್ತಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದ ಅರ್ಥಾತ್‌ ಶೇ.90ರಷ್ಟು ಇರಾನ್‌ನ ತೈಲ ರಫ್ತನ್ನು ನಿರ್ವಹಿಸುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಭೀಕರ ವಾಯುದಾಳಿ ನಡೆಸಿ, ಎಲ್ಲಾ ಸೈನಿಕ ನೆಲೆಗಳನ್ನು ನಾಶಗೊಳಿಸಿದೆ.

ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ದಾಳಿ, ಸೇನಾ ನೆಲೆ ನಾಶ । ತೈಲಾಗಾರ ಸೇಫ್‌- ಹೋರ್ಮುಜ್‌ಗೆ ಅಡ್ಡಿ ಮಾಡಿದ್ರೆ ತೈಲಾಗಾರಕ್ಕೂ ಬಾಂಬ್‌: ಅಧ್ಯಕ್ಷ ಟ್ರಂಪ್‌ ಎಚ್ಚರಿಕೆ- ಬಾಂಬ್‌ ಹಾಕಿದ್ರೆ ಇಡೀ ಮಧ್ಯಪ್ರಾಚ್ಯ ಧಗ ಧಗ: ಅಮೆರಿಕಕ್ಕೆ ಇರಾನ್‌ ತಿರುಗೇಟು- ಯುದ್ಧ ತೀವ್ರಗೊಂಡರೆ ತೈಲ ಬಿಕ್ಕಟ್ಟು ತೀವ್ರ । ಬ್ಯಾರಲ್‌ಗೆ 200 ಡಾಲರ್‌ಗೇರಿಕೆ?

=====

ಮಧ್ಯಪ್ರಾಚ್ಯ ಯುದ್ಧ 15ನೇ ಪೂರೈಸಿದ ಹೊತ್ತಿನಲ್ಲೇ ಹೊಸ ತಿರುವು ಪಡೆದಿದೆ. ಒಂದೆಡೆ ಇರಾನ್‌ನ ಆರ್ಥಿಕತೆಯ ಕೇಂದ್ರ ಬಿಂದುವಾದ ಖಾರ್ಗ್‌ ದ್ವೀಪದ ಮೇಲೆ ದಾಳಿ ಮಾಡಿರುವ ಅಮೆರಿಕ, ಮತ್ತೊಂದೆಡೆ ಹೋರ್ಮಜ್‌ ಜಲಸಂಧಿಗೆ ಹೆಚ್ಚುವರಿ 5000 ಯೋಧರ ಕಳುಹಿಸಿದೆ. ಈ ಮೂಲಕ ಇರಾನ್‌ ಅನ್ನು ಆರ್ಥಿಕವಾಗಿ, ಭೌಗೋಳಿಕವಾಗಿ ಕಟ್ಟಿಹಾಕುವ ಯತ್ನ ಮಾಡಿದೆ. ಮತ್ತೊಂದೆಡೆ ಖಾರ್ಗ್‌ನ ತೈಲ ಘಟಕಗಳ ಮೇಲೇನಾದರೂ ದಾಳಿ ನಡೆಸಿದರೆ ಇಡೀ ಮಧ್ಯಪ್ರಾಚ್ಯದ ತೈಲ ಮೂಲಸೌಕರ್ಯ ಧ್ವಂಸ ಮಾಡುವುದಾಗಿ ಇರಾನ್‌ ಬೆದರಿಕೆ ಒಡ್ಡಿದೆ. ಪರಸ್ಪರರನ್ನು ತೈಲದ ಮೂಲಕ ಕಟ್ಟಿಹಾಕುವ ಈ ವ್ಯೂಹ ಜಗತ್ತಿನ ಮೇಲೆ ಗಂಭೀರ ಪರಿಣಾಮಗಳ ಭೀತಿ ಹುಟ್ಟುಹಾಕಿದೆ. ಇದು ಜಾಗತಿಕ ತೈಲ ಪೂರೈಕೆ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಕಚ್ಚಾತೈಲದ ಬೆಲೆ 200 ಡಾಲರ್‌ಗೆ ಏರುವ ಆತಂಕ ಹುಟ್ಟುಹಾಕಿದೆ.

==ದುಬೈ: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಯುದ್ಧ 15ನೇ ದಿನವಾದ ಶನಿವಾರ ಮಹತ್ವದ ತಿರುವು ಪಡೆದುಕೊಂಡಿದೆ. ಈ ನಡುವೆ ಇರಾನ್‌ನ ತೈಲ ರಫ್ತಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದ ಅರ್ಥಾತ್‌ ಶೇ.90ರಷ್ಟು ಇರಾನ್‌ನ ತೈಲ ರಫ್ತನ್ನು ನಿರ್ವಹಿಸುವ ಖಾರ್ಗ್‌ ದ್ವೀಪದ ಮೇಲೆ ಅಮೆರಿಕ ಭೀಕರ ವಾಯುದಾಳಿ ನಡೆಸಿ, ಎಲ್ಲಾ ಸೈನಿಕ ನೆಲೆಗಳನ್ನು ನಾಶಗೊಳಿಸಿದೆ.

ಆದರೆ, ಖಾರ್ಗ್‌ ದ್ವೀಪದಲ್ಲಿನ ತೈಲಾಗಾರಗಳ ಮೇಲೆ ಅಮೆರಿಕ ದಾಳಿ ಮಾಡಿಲ್ಲ. ಇದರ ಬದಲಾಗಿ, ‘ಹೋರ್ಮುಜ್‌ ಜಲಸಂಧಿಯ ಮೂಲಕ ಸಾಗುವ ಹಡಗುಗಳ ಸಂಚಾರಕ್ಕೆ ಅಡ್ಡಿಯೇನಾದರೂ ಮಾಡಿದರೆ, ದ್ವೀಪದ ತೈಲ ಮೂಲಸೌಕರ್ಯಗಳ ಮೇಲೂ ದಾಳಿ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದೆ. ಈ ಮೂಲಕ ತೈಲ ದ್ವೀಪದ ನಿಯಂತ್ರಣಕ್ಕೆ ಅಮೆರಿಕ ಯತ್ನಿಸುತ್ತಿದೆಯೇ ಎಂಬ ಶಂಕೆ ಮೂಡಿದೆ.

ಆದರೆ ಇದಕ್ಕೆ ಇರಾನ್‌ ಎದಿರೇಟು ನೀಡುವ ಎಚ್ಚರಿಕೆ ನೀಡಿದೆ. ತಮ್ಮ ದ್ವೀಪದ ಮೇಲೆ ಅಮೆರಿಕದ ದಾಳಿಯನ್ನು ಖಂಡಿಸಿರುವ ಇರಾನ್‌ನ ಸಂಯುಕ್ತ ಸೈನ್ಯಾಧಿಕಾರಿ ಇಬ್ರಾಹಿಂ ಝೊಲ್ಫಘಾರಿ, ‘ಇರಾನ್‌ನ ತೈಲ ಮತ್ತು ಆರ್ಥಿಕ ಮೂಲಸೌಕರ್ಯಗಳ ಮೇಲೆ ಅಮೆರಿಕ ದಾಳಿ ನಡೆಸಿದರೆ, ಅಮೆರಿಕ ಷೇರುಗಳನ್ನು ಹೊಂದಿರುವ ಅಥವಾ ಅಮೆರಿಕದೊಂದಿಗೆ ಸಹಕರಿಸುವ ತೈಲ ಕಂಪನಿಗಳ ಎಲ್ಲಾ ತೈಲ, ಆರ್ಥಿಕ ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್‌ ಗುಡುಗು:

ಈ ಬಗ್ಗೆ ಟ್ರುತ್‌ ಸೋಷಿಯಲ್‌ನಲ್ಲಿ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನನ್ನ ನಿರ್ದೇಶನದಂತೆ, ಅಮೆರಿಕದ ಸೆಂಟ್ರಲ್ ಕಮಾಂಡ್, ಮಧ್ಯಪ್ರಾಚ್ಯದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿಯನ್ನು ನಡೆಸಿದೆ. ಇರಾನ್‌ನ ಮುಕುಟಮಣಿಯಂತಿರುವ ಖಾರ್ಗ್‌ ದ್ವೀಪದ ಪ್ರತಿಯೊಂದು ಸೈನಿಕ ನೆಲೆಯನ್ನೂ ಸಂಪೂರ್ಣವಾಗಿ ನಾಶಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ‘ಸಭ್ಯತೆಯ ಕಾರಣದಿಂದ, ದ್ವೀಪದ ತೈಲ ಮೂಲಸೌಕರ್ಯಗಳನ್ನು ನಾಶ ಮಾಡದಂತೆ ನಿರ್ಧರಿಸಿದ್ದೇನೆ. ಆದರೆ ಇರಾನ್ ಅಥವಾ ಬೇರೆ ಯಾರಾದರೂ ಹೋರ್ಮುಜ್‌ ಜಲಸಂಧಿಯ ಮೂಲಕ ಹಡಗುಗಳ ಮುಕ್ತ ಮತ್ತು ಸುರಕ್ಷಿತ ಸಂಚಾರವನ್ನು ಭಂಗಗೊಳಿಸಿದರೆ, ಈ ನಿರ್ಧಾರವನ್ನು ತಕ್ಷಣ ಪುನರ್ವಿಚಾರಣೆ ಮಾಡುತ್ತೇನೆ’ ಎಂದು ಎಚ್ಚರಿಸಿದ್ದಾರೆ.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಭಾರತೀಯ ಹಡಗಿನ ಮೇಲೆ ಇರಾನ್ ಆಕ್ರಮಣ : 20 ನಾವಿಕರ ರಕ್ಷಣೆ
ಗೂಗಲ್‌, ಮೈಕ್ರೋಸಾಫ್ಟ್‌ ನಮ್ಮ ಮುಂದಿನ ದಾಳಿ ಗುರಿ : ಇರಾನ್‌!